ಸರ್, ಆಧ್ಯಾತ್ಮದ
ಕುರಿತಾದ ನಿಮ್ಮ ಲೇಖನಗಳು ತುಂಬಾ ಸರಳವಾಗಿರುತ್ತದೆ, ನಮ್ಮಂತಹ ಪಾಮರರಿಗೂ ಅರ್ಥವಾಗುವಂತೇ
ಬರೆಯುತ್ತಿದ್ದೀರಿ ಎಂದು ಪ್ರತಿಕ್ರಿಯೆಗಳು ಬರುತ್ತಿವೆ. ನಿಜವಾಗಿಯೂ ಬಹಳ ಸಂತಸದ ವಿಷಯ.
ಆಧ್ಯಾತ್ಮವೆಂದರೆ ಅರ್ಥವಾಗದಷ್ಟು ಕಬ್ಬಿಣದ ಕಡಲೆಯಲ್ಲ. ಆಧ್ಯಾತ್ಮದತ್ತ ಸಾಗಲು ಪಂಡಿತ,
ಪಾಮರರೆಂಬ ಬೇಧವೂ ಇಲ್ಲ. ಆಧ್ಯಾತ್ಮವೆಂದರೆ ನಮ್ಮನ್ನು ನಾವು ಅರಿತುಕೊಳ್ಳುವ ಪ್ರಯತ್ನವಷ್ಟೇ..!!
ಯಾವಾಗ ನಮ್ಮನ್ನು ನಾವು ಅರಿತುಕೊಳ್ಳಲು ಯತ್ನಿಸುತ್ತೇವೆ, ಅಲ್ಲಿಂದಲೇ ನಮ್ಮ ಆಧ್ಯಾತ್ಮ ಪಯಣ
ಶುರುವಾಗುತ್ತದೆ. ಬದುಕಿನಲ್ಲಿ ಒಂದು ಹೊಸ ಅಧ್ಯಾಯ ತೆರೆಯುತ್ತದೆ. ನಾನು, ನನ್ನದೆಂಬ ಅಜ್ಞಾನ
ಕ್ಷೀಣಿಸುತ್ತದೆ. ಮನಸ್ಸು ವಿಶಾಲ ಪ್ರಪಂಚದತ್ತ ಹೊರಳುತ್ತದೆ. ಪ್ರಪಂಚ ಬಹಳ ಸುಂದರವಾಗಿ
ಕಾಣಿಸುತ್ತದೆ.
ಹಾಗಾಗಲು ನಮ್ಮ ಸುತ್ತಲಿರುವ
ಭ್ರಮಾಪ್ರಪಂಚದಿಂದ ಹೊರಬರಬೇಕು. ಕಣ್ಣಿಗೆ ಕಾಣಿಸುತ್ತಿರುವ ಎಲ್ಲ ವಸ್ತುಗಳೂ ಒಂದು ಮಾಯೆ. ಆ
ಮಾಯೆಯೊಳಗೆ ಬಂಧಿತರಾಗಿರುವ ನಾವು ಭ್ರಮೆಯ ಪ್ರಪಂಚದಲ್ಲೇ ಬದುಕುತ್ತಿದ್ದೇವೆ. ಯಾರು
ಭ್ರಮಾಪ್ರಪಂಚದಿಂದ ಹೊರಬರುತ್ತಾರೋ ಅವರಿಗೆ ಸುಂದರ ಪ್ರಪಂಚದ ಅರಿವಾಗುತ್ತದೆ. ಆ ಭ್ರಮೆಯಿಂದ
ಹೊರಬರುವುದಾದರೂ ಹೇಗೆ..? ಗೀತೆಯಲ್ಲಿ ಭಗವಂತನೇ ಪರಿಹಾರ ತಿಳಿಸಿದ್ದಾನೆ “ ಮಯ್ಯೇವ ಮನ
ಆಧತ್ಸ್ವ, ಮಯಿ ಬುದ್ಧಿಂ ನಿವೇಶಯ, ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯಃ” ಭ್ರಮೆಯ
ಪ್ರಪಂಚದಿಂದ ಹೊರಬರಬೇಕೆಂದರೆ, ನಮ್ಮ ಮನಸ್ಸು ಹಾಗೂ ಬುದ್ಧಿ ಭಗವಂತನಲ್ಲಿ ಲೀನವಾಗಬೇಕು. ಆಗ ನಾವು
ಭಗವಂತನ ಅಸ್ತಿತ್ವವನ್ನು ಅರಿಯಬಹುದು.
ಮನಸ್ಸು ಹಾಗೂ
ಬುದ್ಧಿಯನ್ನು ಭಗವಂತನಲ್ಲಿ ಲೀನಗೊಳಿಸುವುದಾದರೂ ಹೇಗೆ..? ಆಧುನಿಕತೆಯ ಬದುಕಿನಲ್ಲಿ ನಮ್ಮ
ಮನಸ್ಸು ಸಂಪಾದನೆಯಲ್ಲಿದೆ, ಬುದ್ಧಿ ಚಪಲವಾಗಿದೆ. ಅವುಗಳನ್ನು ಪರಮಾತ್ಮನಲ್ಲಿ ಹೇಗೆ
ವಿಲೀನಗೊಳಿಸುವುದು..? ಬದುಕಿಗೆ ಆಸರೆಯಾಗಿರುವ ಸಂಪಾದನೆಯನ್ನು ಬಿಟ್ಟು ಆಶ್ರಮ ಸೇರುವುದೇ..?
ಅದೂ ಕೂಡ ಸರಿಯಾದ ಮಾರ್ಗವಲ್ಲ. “ಕುರು ಕರ್ಮೈವ ತಸ್ಮಾತ್ವಂ” ಕರ್ಮದಿಂದ ವಿಮುಖನಾಗುವುದು ಸಹ
ಶ್ರೇಯಸ್ಸಲ್ಲ. ಆದರೆ ಕರ್ಮವನ್ನು ಮಾಡುತ್ತಲೇ ಮನಸ್ಸನ್ನು ಪರಮಾತ್ಮನಲ್ಲಿ ಲೀನಗೊಳಿಸಬೇಕು.
ಆಕಾಶದಿಂದ ಎಷ್ಟೇ
ಮಳೆ ಸುರಿಯಲಿ, ಅದರ ಒಂದು ಹನಿಯೂ ಕಮಲಪತ್ರಕ್ಕೆ ಅಂಟುವುದಿಲ್ಲ. ನಮ್ಮ ಸ್ಥಿತಿಯೂ
ಹಾಗಿರಬೇಕು..!! ಕರ್ಮ ನಮ್ಮದು ಕರ್ಮಫಲ ಪರಮಾತ್ಮನದ್ದು ಎಂಬ ಭಾವನೆ ನಮ್ಮಲ್ಲಿರಬೇಕು.
ಲಾಭ-ನಷ್ಟ, ಜಯ-ಸೋಲು ಯಾವುದಕ್ಕೂ ಅಂಟಿಕೊಂಡಿರಬಾರದು. ಸುಖ, ದುಃಖಗಳನ್ನು ಸಮಭಾವದಿಂದ
ಸ್ವೀಕರಿಸಬೇಕು. “ದೇವನೊಬ್ಬನಿರುವ ಅವನೆಲ್ಲ ನೋಡುತಿರುವ’ ಎಂದು ಎಲ್ಲ ಆಗುಹೋಗುಗಳನ್ನು ಆತನಿಗೆ
ಅರ್ಪಿಸಬೇಕು. ಸಾಧು-ಸಂತರ ಜೊತೆ ಗೆಳೆತನ ಬೆಳೆಸಬೇಕು. ಶ್ರೀ ಶಂಕರ ಭಗವತ್ಪಾದರು ಹೇಳಿದಂತೇ,
ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಮ್|
ನಿರ್ಮೋಹತ್ವೇ ನಿಶ್ಚಲತತ್ತ್ವಂ
ನಿಶ್ಚಲತತ್ತ್ವೇ ಜೀವನ್ಮುಕ್ತಿಃ ||
ಸಜ್ಜನರ ಸಂಪರ್ಕದಲ್ಲಿದ್ದರೆ ಧನಾದಿ ವಿಷಯಗಳ ಚಿಂತೆ ತಪ್ಪುತ್ತದೆ.
ಚಿಂತೆ ಹೋದಾಗ
ಅವುಗಳ ಮೋಹವೂ ಹೋಗುತ್ತದೆ.
ಅಜ್ಞಾನದಿಂದಾದ ಮೋಹವು ಹೋದರೆ ಶಾಶ್ವತವಾದ ಸತ್ಯವೇನೆಂಬುದರ
ಜ್ಞಾನವಾಗುತ್ತದೆ.
ಅಂತಹ ಜ್ಞಾನ ಉದಿಸಿದರೆ ಜೀವನ್ಮುಕ್ತಿಯೇ ಪ್ರಾಪ್ತಿಯಾಗುತ್ತದೆ.
ಯಾವಾಗ ಮನಸ್ಸು ಹಾಗೂ ಬುದ್ಧಿ
ಸ್ಥಿರವಾಗುತ್ತದೆಯೋ ಮನಸ್ಸಿನಲ್ಲಿ ಏಕಾಗ್ರತೆ ಮೂಡುತ್ತದೆ, ಏಕಾಗ್ರತೆಯಿಂದ ಮನಸ್ಸಿನ ಚಾಂಚಲ್ಯ
ದೂರವಾಗುತ್ತದೆ. ಮನೋಚಾಂಚಲ್ಯ ದೂರವಾದಾಗ ಶಾಂತಿ ಲಭಿಸುತ್ತದೆ. ಶಾಂತಿಯಿಂದ ಭಕ್ತಿ
ಸಾಧ್ಯವಾಗುತ್ತದೆ. ಭಕ್ತಿಯಿಂದ ಪರಮಾತ್ಮನ ಅಸ್ತಿತ್ವದ ಅರಿವಾಗುತ್ತದೆ. ಪರಮಾತ್ಮನ ಅಸ್ತಿತ್ವ
ಅರಿವಾದಾಗ ಮನಸ್ಸು ಆಧ್ಯಾತ್ಮದತ್ತ ಸಾಗುತ್ತದೆ. ಆಧ್ಯಾತ್ಮದಿಂದ ಕಾಮ,ಕ್ರೋಧ, ಲೋಭ, ಮೋಹ, ಮದ,
ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳ ನಿವಾರಣೆಯಾಗುತ್ತದೆ.
“ಲೋಕಾಃ ಸಮಸ್ತಾಃ ಸುಖಿನೋ
ಭವಂತು”