ಬರೆಯಬೇಕೆಂಬ ಆಸೆ ಸಾವಿರದಷ್ಟಿದೆ, ಆದರೆ ಸಿಗುವ ಸಮಯ ಬಹಳ ಕಡಿಮೆ...!! ಆಗಾಗ ಫೇಸ್ಬುಕ್ ಕಡೆ ಬಂದು ನಾಲ್ಕಾರು ಲೈನ್ ಗೀಚುವುದೇ ಹೆಚ್ಚು. ಬರಹ ದೀರ್ಘವಾದರೆ ಓದುವವರಿಗೂ ತಾಳ್ಮೆಯಿಲ್ಲ. ಎಲ್ಲರದೂ ಧಾವಂತದ ಬದುಕು, ಟಾರ್ಗೆಟ್ಟು, ಡೆಡ್ ಲೈನುಗಳ ಮಧ್ಯದಲ್ಲಿ ಬದುಕಲು ಸಮಯವಿಲ್ಲದಾಗಿದೆ. ಜನರ ತಾಳ್ಮೆಯೂ ಕಡಿಮೆಯಾಗಿದೆ. ಜೀವನ ಒಂಥರಾ ರೀಲ್ಸ್ ರೀತಿಯಾಗಿದೆ..!! ಎಲ್ಲವೂ ಜಟ್ ಪಟ್ ಎಂದಾಗಬೇಕು, ಫಾಸ್ಟ್ ಫುಡ್ ತರ..!!
ತೀರ ೨೦೦೦ ಇಸ್ವಿಯವರೆಗೂ ಕಾಲ ಈ ರೀತಿಯಿರಲಿಲ್ಲ. ಆಗಿನ್ನೂ ಮೊಬೈಲ್, ಇಂಟರ್ನೆಟ್ ಯುಗ ಜಸ್ಟ್ ಸ್ಟಾರ್ಟ್ ಆಗಿತ್ತು. ಆದರೆ ಜನರು ಅಡಿಕ್ಟ್ ಆಗಿರಲಿಲ್ಲ. ಮದುವೆ, ಮುಂಜಿ ಮುಂತಾದ ಸಮಾರಂಭಗಳಲ್ಲಿ ಮಾತಿಗೆ ಬರವಿರಲಿಲ್ಲ. ನಾಲ್ಕು ಜನ ಸೇರಿದರೆ ಆತ್ಮೀಯತೆ ಇರುತ್ತಿತ್ತು. ಕಷ್ಟ-ಸುಖಗಳ ವಿನಿಮಯವಿರುತ್ತಿತ್ತು, ಭಾವನೆ, ಸಂಬಂಧಗಳ ಹಂದರವಿತ್ತು. ಬಾಯಿಗೆ ಕೆಲಸವಿತ್ತು, ಬೆರಳುಗಳಿಗೆ ವಿಶ್ರಾಂತಿಯಿತ್ತು. ತಮ್ಮವರನ್ನು ಗುರುತಿಸುವ ಮುಗುಳ್ನಗೆಯಿತ್ತು. ಕಾರ್ಯಕ್ರಮಗಳಲ್ಲಿ ಹೆಂಗಳೆಯರು ಹಾಡುವ ಸುಂದರ ಧ್ವನಿಯಿತ್ತು. ಪುರೋಹಿತರ ಗಡುಸಾದ ಮಂತ್ರಘೋಷವಿತ್ತು. ಎಲ್ಲರಿಗೂ ಸಹನೆಯಿತ್ತು, ಸಂಬಂಧದ ಪರಿಕಲ್ಪನೆಯಿತ್ತು, ಹೇಗೆ ವರ್ತಿಸಬೇಕೆಂಬ ಪರಿಜ್ಞಾನವೂ ಇತ್ತು..!! ಫೋನ್ ಎಂದರೆ ಎಮರ್ಜೆನ್ಸಿ ಸ್ಥಿತಿಯಲ್ಲಿ ಮಾತನಾಡಲು ಬಳಸುವ ಮಾಧ್ಯಮ ಎಂಬುದಾಗಿತ್ತು.
ಆಮೇಲೆ ಚಿತ್ರ-ವಿಚಿತ್ರ ಸ್ಮಾರ್ಟ್ ಫೋನುಗಳು ಬಂದವು. ನಗರಗಳಲ್ಲಷ್ಟೇ ಅಲ್ಲ, ಹಳ್ಳಿಹಳ್ಳಿಗಳಲ್ಲಿ ಇಂಟರ್ನೆಟ್ ಸೇವೆಗಳು ಆರಂಭವಾದವು. ಜನರ ಕೈಯ್ಯಲ್ಲಿದ್ದ ಸಾಮಾನ್ಯ ಫೋನುಗಳು ದೂರವಾಗಿ ಸ್ಮಾರ್ಟ್ ಫೋನುಗಳು ಬಂದವು. ಅದರಲ್ಲಿ ಫೇಸ್ಬುಕ್, ವಾಟ್ಸ್ ಆಪ್, ಇನ್ಸ್ಟಾಗ್ರಾಂ ಅಪ್ಲಿಕೇಶನ್ನುಗಳು ಡೌನ್ ಲೋಡ್ ಆದವು. ಯಾವ ಮಾಹಿತಿಯಿರಲಿ, ಮ್ಯೂಸಿಕ್ ಇರಲಿ, ಡಾನ್ಸ್ ಇರಲಿ ಬೆರಳ ತುದಿಯಲ್ಲಿ ಸಿಗಲಾರಂಭಿಸಿದವು. ಬ್ಯಾಂಕಿಂಗ್ ಕೆಲಸಗಳು ಸರಳವಾದವು, ಆನ್ಲೈನ್ ವಹಿವಾಟುಗಳು ಹೆಚ್ಚಾದವು, ಕೆಲವು ಸರ್ಕಾರಿ ಕೆಲಸಗಳಲ್ಲಿ ಪಾರದರ್ಶಕತೆಯೂ ಬಂತು. ಈ ಬದಲಾವಣೆ ಆಗದಿದ್ದರೆ ನಾವಿಂದು ಬಸ್ ಟಿಕೇಟುಗಳಿಗೆ, ರೈಲ್ವೇ ಟಿಕೇಟುಗಳಿಗೆ ನಾಲ್ಕಾರು ಘಂಟೆ ಲೈನಿನಲ್ಲಿ ನಿಲ್ಲಬೇಕಿತ್ತು, ಆ ಅನುಭವವೂ ಆಗಿದೆ..!! ಸ್ಮಾರ್ಟ್ ಫೋನುಗಳು ಅದೆಷ್ಟೋ ಕೆಲಸಗಳನ್ನು ಹಗುರಾಗಿಸಿದವು, ಖಂಡಿತ ಒಪ್ಪಲೇಬೇಕು. ಬದಲಾವಣೆ ಜಗದ ನಿಯಮ, ಆ ಬದಲಾವಣೆಯನ್ನು ಒಳ್ಳೆಯದನ್ನಾಗಿ ಪರಿವರ್ತಿಸಿಕೊಳ್ಳುವ ಜಾಣ್ಮೆಯೂ ನಮ್ಮಲ್ಲಿರಬೇಕು..!!
ಆದರೆ ಮಂಗನಿಂದ ಮಾನವ ಎಂಬ ಡಾರ್ವಿನ್ನನ ವಿಕಾಸವಾದ ಉಲ್ಟಾ ಹೊಡೆದು ಮಾನವನಿಂದ ಮಂಗ ಎಂಬತ್ತ ಹೊರಟಿದ್ದು ದುರದೃಷ್ಟಕರ. ಸಾಮಾಜಿಕ ಜಾಲತಾಣಗಳು ಮಾಹಿತಿ ವಿನಿಮಯಕ್ಕಿಂದ ಜಾಸ್ತಿ ಕಪಿಚೇಷ್ಟೆಗೆ ಮರುಳಾಗಿವೆ. ಕೆಲವೊಂದು ಟ್ರೋಲುಗಳು, ರೀಲ್ಸ್ ಗಳು ಎಷ್ಟು ಅಸಹನೆ ಉಂಟು ಮಾಡುತ್ತವೆ ಎಂದರೆ ಸಾಮಾಜಿಕ ಜಾಲತಾಣಗಳಿಂದ ದೂರ ಓಡಿ ಹೋಗುವಷ್ಟು...!! ರೀಲ್ಸ್, ಟ್ರೋಲುಗಳು ಇಲ್ಲದ ಜೀವನ ಯುವಜನತೆಗೆ ಸಪ್ಪೆ ಎನಿಸಲಾರಂಭಿಸಿದೆ. “ಹತ್ತಿರವಿದ್ದು ದೂರ ನಿಲ್ಲುವೆವು ನಮ್ಮ ಮೊಬೈಲುಗಳ ಸ್ಕ್ರೀನಿನಲಿ” ಎಂಬ ಪರಿಸ್ಥಿತಿಯಿದೆ..! ಸ್ಕ್ರೀನುಗಳನ್ನು ನೋಡಿ ಕಣ್ಣಿನ ಕೆಳಬದಿ ಕಪ್ಪಾಗಿದೆ, ಬೆರಳುಗಳು ಸೊಟ್ಟಗಾಗಿವೆ. ಸಭೆ, ಸಮಾರಂಭಗಳು ಫಾರ್ಮಾಲಿಟಿ ಎನಿಸಿವೆ. ಸಂಬಂಧಿಕರು ಎದುರು ಬಂದರೆ ಒಂದು ಕೃತಕ ಮುಗುಳ್ನಗೆ, ಆಮೇಲೆ ಗಮನ ಮೊಬೈಲಿನತ್ತಲೇ ಸಾಗುತ್ತದೆ. ತಲೆಯಲ್ಲಿ ದಿನದ ಟ್ರೆಂಡ್ ಏನೆಂದು ಓಡುತ್ತಿರುತ್ತದೆ, ಕಾಮೆಂಟ್ ಯಾವಾಗ ಹಾಕೋಣ ಎನಿಸುತ್ತದೆ. ಸಮಾರಂಭಗಳಲ್ಲಿ ಮಾತಿನ ಬರವಾಗಿದೆ, ಆ ಬಾಲ ವೃದ್ಧರಾದಿಯಾಗಿ ಎಲ್ಲರ ಕೈಲೂ ಮೊಬೈಲ್ ರಿಂಗಣಿಸುತ್ತಿರುತ್ತದೆ, ರೀಲ್ಸುಗಳ ಕರ್ಕಶ ಧ್ವನಿಯಿರುತ್ತದೆ. ಪುರೋಹಿತರ ಮಂತ್ರ ರೀಲ್ಸುಗಳ ಅಬ್ಬರದಲ್ಲಿ ಕ್ಷೀಣವಾಗಿರುತ್ತದೆ..! ಮಾನವ ಸಂಬಂಧಗಳಿಗಿಂತ, ಮೊಬೈಲ್ ಸಂಬಂಧಗಳ ಬೆಲೆ ಜಾಸ್ತಿಯಾಗಿದೆ.
ಸಂಸ್ಕೃತದಲ್ಲಿ ಒಂದು ಮಾತಿದೆ, “ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ” ಎಂದು. ಅರ್ಥ – ಮನುಷ್ಯನ ಮನಸ್ಸೇ ಆತನ ಬಂಧನಕ್ಕೂ, ಮೋಕ್ಷಕ್ಕೂ ಕಾರಣವಾಗುತ್ತದೆ ಎಂಬುದಾಗಿ. ಮೊಬೈಲಿನ ಅತಿಯಾದ ಬಳಕೆ ಬಂಧನಕ್ಕೆ ಕಾರಣವಾದರೆ, ಅದರ ನಿಯಮಿತ ಬಳಕೆ ಮೋಕ್ಷಕ್ಕೆ ಕಾರಣವಾಗಬಹುದು..! ರೀಲ್ಸ್, ಟ್ರೋಲುಗಳ ಹೊರತಾದ ಜೀವನ ಮನುಷ್ಯನಿಗೆ ಶಾಂತಿ ನೀಡಬಹುದು. “ಜಂತೂನಾಂ ನರಜನ್ಮ ದುರ್ಲಭಮ್” ಅದೆಷ್ಟೋ ಜನ್ಮಗಳ ಪುಣ್ಯಗಳ ಫಲವಾಗಿ ನಮಗೆ ಮಾನವ ಜನ್ಮ ಸಿಕ್ಕಿದೆ. ಹಿಂದುತ್ವದ ಪ್ರಕಾರ ನಮ್ಮ ಜನ್ಮದ ಪರಮಲಕ್ಷ್ಯ ಮೋಕ್ಷ. ಮೋಕ್ಷ ಸಾಧನೆಗೆ ಭಗವದ್ಭಕ್ತಿ, ಭಗವದ್ ಚಿಂತನೆ ಅವಶ್ಯಕ. ಕಳೆದು ಹೋದ ಕ್ಷಣ, ಎಷ್ಟು ಕೋಟಿ ಕೊಟ್ಟರೂ ಸಿಗದು. ಲೌಕಿಕ ಚಿಂತನೆಯಲ್ಲಿ, ಪಾರಮಾರ್ಥಿಕ ಲಕ್ಷವನ್ನು ಮರೆಯುವುದು ಮೂರ್ಖತನ. ಹಾಗಾಗಿ ಸಾಮಾಜಿಕ ಜಾಲತಾಣಗಳ, ರೀಲ್ಸು, ಟ್ರೋಲುಗಳ ಹೊರತಾದ ಜೀವನವನ್ನು ನೋಡುವ ಪ್ರಾಮಾಣಿಕ ಪ್ರಯತ್ನ ಮಾಡೋಣ.
“ಲೋಕಾಃ ಸಮಸ್ತಾಃ ಸುಖಿನೋ ಭವಂತು”