Tuesday, 28 February 2017

ರಾಷ್ಟ್ರಾಯ ಇದಂ ನ ಮಮ



ಒಮ್ಮೆ ಚಂದ್ರಶೇಖರ ಆಜಾದ್,ಭಗತ್ ಸಿಂಗ್, ರಾಜಗುರು,ಸುಖದೇವ್ ಹಾಗೂ ಬಟುಕೇಶ್ವರದತ್ತರಂತಹ ಕ್ರಾಂತಿಕಾರಿಗಳ ಗುಂಪು ಇಲಾಹಾಬಾದಿನಲ್ಲಿ ತಂಗಿತ್ತು. ಆಜಾದರನ್ನು ಎಲ್ಲರೂ ಪಂಡಿತ್ ಜೀ ಎಂದೇ ಕರೆಯುತ್ತಿದ್ದರು. ಪಂಡಿತ್ ಜೀ ಎಂದರೆ ಕ್ರಾಂತಿಕಾರಿಗಳೆಲ್ಲರಿಗೂ ವಿಶೇಷವಾದ ಗೌರವವಿತ್ತು.

ಒಮ್ಮೆ ಸುಖದೇವ್ ಒಂದು ಕ್ಯಾಲೆಂಡರನ್ನು ತಂದ. ಆ ಕ್ಯಾಲೆಂಡರಿನಲ್ಲಿ ಒಂದು ಚಿತ್ರನಟಿಯ ಭಾವಚಿತ್ರವಿತ್ತು. ಸುಖದೇವ ಆ ಕ್ಯಾಲೆಂಡರನ್ನು ಕೋಣೆಯಲ್ಲಿದ್ದ ಮೊಳೆಗೆ ನೇತುಹಾಕಿ,ಯಾವುದೋ ಕೆಲಸದ ನಿಮಿತ್ತ ಹೊರಹೋದ. ಸ್ವಲ್ಪ ಸಮಯದ ನಂತರ ಪಂಡಿತ್ ಜೀ ಆ ಕೊಠಡಿಗೆ ಬಂದರು. ನೇತುಹಾಕಿದ್ದ ಕ್ಯಾಲೆಂಡರನ್ನು ನೋಡಿ ಆಕ್ರೋಶಗೊಂಡರು. ಕ್ಯಾಲೆಂಡರನ್ನು ಹರಿದು ಬೀಸಾಡಿದರು. ಸ್ವಲ್ಪ ಸಮಯದ ಬಳಿಕ ಸುಖದೇವ್ ಬಂದ. ಕೋಣೆಯಲ್ಲಿ ಕ್ಯಾಲೆಂಡರ್ ಇರಲಿಲ್ಲ. ಹರಿದು ಬೀಸಾಡಿದ ಕ್ಯಾಲೆಂಡರಿನ ಅವಶೇಷಗಳನ್ನು ಕಂಡ. ಸುಖದೇವನೂ ಮುಂಗೋಪಿ. ಕೋಪದಲ್ಲಿ ಅಲ್ಲಿರುವವರನ್ನೆಲ್ಲಾ ಬೈಯ್ದ. 

"ಈ ಕ್ಯಾಲೆಂಡರನ್ನು ಹರಿದು ಬೀಸಾಕಿದವರು ಯಾರೆಂದು ಹೇಳಿ..?" ಕೋಪದಿಂದ ಕೇಳಿದ.
"ಅದನ್ನು ಹರಿದಿದ್ದು ನಾನೇ ಸುಖದೇವ್" ಪಂಡಿತ್ ಜಿ ಮೆಲ್ಲಗೆ ಉತ್ತರಿಸುತ್ತಾರೆ.
"ಪಂಡಿತ್ ಜೀ ಅದನ್ನೇಕೆ ಹರಿದು ಹಾಕಿದಿರಿ..? ಬಹಳ ಚೆನ್ನಾಗಿತ್ತು" ಸುಖದೇವನ ಪ್ರಶ್ನೆ.
"ಈ ಕ್ಯಾಲೆಂಡರಿನಿಂದ ನಮಗೇನು ಉಪಯೋಗ ಸುಖದೇವ್? ನಮ್ಮ ಉದ್ದೇಶ ಆಜಾದಿ. ಅದಕ್ಕೆ ಬೇಕಾದ್ದು ಏಕಾಗ್ರತೆ ಹಾಗೂ ಬಲಿದಾನ. ನಮ್ಮ ಏಕಾಗ್ರತೆಗೆ ಭಂಗ ತರುವಂತಹ ಯಾವ ಆಕರ್ಷಣೆಯೂ ನನಗಿಷ್ಟವಾಗುವುದಿಲ್ಲ. ಹಾಗಾಗಿ ಆ ಕ್ಯಾಲೆಂಡರನ್ನು ಹರಿದು ಹಾಕಿದೆ" ಆಜಾದರ ಉತ್ತರ ಅರ್ಥಗರ್ಭಿತವಾಗಿತ್ತು.

ಸುಖದೇವ್ ಅರೆಗಳಿಗೆ ಸ್ತಬ್ಧನಾದ. ಪಂಡಿತಜಿಯ ಮಾತಿನ ಗೂಢಾರ್ಥದ ಅರಿವಾಯಿತು.
ಕ್ರಾಂತಿಕಾರಿಗಳಿಗೆ ಸ್ವಾರ್ಥಕ್ಕಿಂತ ದೇಶದ ಹಿತವೇ ಪ್ರಮುಖವಾಗಿತ್ತು. ಹಾಗಾಗಿ ಕಷ್ಟ-ಅವಮಾನಗಳನ್ನು ಸಹಿಸಿ, ತಮ್ಮ ಜೀವವನ್ನೇ ಬಲಿದಾನ ಮಾಡಿದರು. ದುರದೃಷ್ಟವೆಂದರೆ ಹುತಾತ್ಮರಾದರೇ ಹೊರತು ಮಹಾತ್ಮರಾಗಲಿಲ್ಲ...!!

Thursday, 16 February 2017

ದಾರಿ ಯಾವುದಯ್ಯಾ ಸ್ವರ್ಗಕ್ಕೆ...?



ಒಮ್ಮೆ ಯಮದೂತ ಒಬ್ಬ ವ್ಯಕ್ತಿಯ ಆತ್ಮವನ್ನು ಯಮರಾಜನಲ್ಲಿಗೆ ಒಯ್ದು ಕೇಳಿದ- "ಹೇ ರಾಜ ! ಈ ವ್ಯಕ್ತಿ ಒಬ್ಬ ಮಹಾತ್ಮನಾಗಿದ್ದ. ತಾರುಣ್ಯದಲ್ಲಿ ತನ್ನ ತಂದೆ-ತಾಯಿ,ಪತ್ನಿ-ಮಕ್ಕಳನ್ನು ತೊರೆದು ಅರಣ್ಯಕ್ಕೆ ಹೋಗಿ ತಪಸ್ಸನ್ನಾಚರಿಸಿದ. ಸಂಸಾರದಿಂದ ವಿಮುಕ್ತನಾಗಿ ಸಂಪೂರ್ಣ ಜೀವನವನ್ನು ಆಧ್ಯಾತ್ಮದಲ್ಲೇ ಕಳೆದ. ಇಂತಹ ಧರ್ಮಪರಾಯಣನನ್ನು ಸ್ವರ್ಗಕ್ಕೆ ಕಳುಹಿಸಲೇ..?"

ಆಗ ಯಮರಾಜ ಮುಗುಳ್ನಗುತ್ತಾ " ಸ್ವಕರ್ತವ್ಯವನ್ನು ತ್ಯಾಗ ಮಾಡಿದ ಮನುಷ್ಯ ಎಂದಿಗೂ ಧರ್ಮಾತ್ಮನಾಗಲಾರ. ಆತನಿಗೆಂದೂ ಸ್ವರ್ಗಪ್ರಾಪ್ತಿಯಾಗದು. ಆತನನ್ನು ಪುನಃ ಭುವಿಗೆ ಕಳುಹಿಸು. ಸ್ವಕರ್ತವ್ಯದ ಜೊತೆಗೆ ಧರ್ಮಾಚರಣೆಯನ್ನು ಮಾಡಿಕೊಂಡು ಬರಲಿ" ಎಂದ.

ಯಮದೂತ ಮತ್ತೊಬ್ಬ ವ್ಯಕ್ತಿಯ ಆತ್ಮವನ್ನು ತಂದು " ಈ ವ್ಯಕ್ತಿ ಬಹಳ ಕರ್ತವ್ಯಪರಾಯಣನಾಗಿದ್ದ. ಸ್ವಕರ್ತವ್ಯವೇ ಜೀವನವೆಂದು ತಿಳಿದಿದ್ದ. ಈತನ ಪತ್ನಿ ಅನಾರೋಗ್ಯದಿಂದ ಸತ್ತರೂ ದುಃಖಿಸದೇ ಕರ್ತವ್ಯಪಾಲನೆಯಲ್ಲೇ ನಿರತನಾಗಿದ್ದ. ಈತನನ್ನಾದರೂ ಸ್ವರ್ಗಕ್ಕೆ ಕಳುಹಿಸಲೇ..? ಎಂದು ಕೇಳಿದ. 

ಆಗ ಯಮರಾಜ "ಇಂತಹ ಹೃದಯಹೀನ ವ್ಯಕ್ತಿಗೆ ಸ್ವರ್ಗದಲ್ಲೇನು ಕೆಲಸ..? ಪ್ರೇಮಭಾವನೆಯ ಮೂಲಕ ಮಾಡಿದ ಕರ್ತವ್ಯ ಪ್ರಶಂಸನೀಯವಾಗಿರುತ್ತದೆ. ಭಾವನೆಯೇ ಇಲ್ಲದೇ ಮಾಡಿದ ಕರ್ತವ್ಯ ವ್ಯರ್ಥವೆನಿಸುತ್ತದೆ. ಈತನಿಗೂ ಸ್ವರ್ಗಪ್ರಾಪ್ತಿಯಾಗಲಾರದು. ಪುನಃ ಭೂಮಿಗೆ ಕಳುಹಿಸು. ಭಾವನೆಗಳ ಮೂಲಕ ಕರ್ತವ್ಯಗಳನ್ನಾಚರಿಸುವಂತೇ ಪ್ರೇರೇಪಿಸು" ಎಂದು ದೂತನಿಗೆ ಹೇಳಿದ.

ಯಮದೂತ ಇನ್ನೊಬ್ಬ ವ್ಯಕ್ತಿಯ ಆತ್ಮವನ್ನು ತಂದು " ದೊರೆ ! ಈತ ಒಬ್ಬ ಸಾಮಾನ್ಯ ಗೃಹಸ್ಥ. ತನ್ನ ಜೀವಿತದುದ್ದಕ್ಕೂ ಪರಮ ಆಸ್ತಿಕನಾಗಿದ್ದ. ಪಾಪಕಾರ್ಯಗಳನ್ನು ಮಾಡದೇ ಜೀವನವನ್ನು ಸವೆಸಿದ. ತನ್ನ ಪರಿವಾರದವರನ್ನು,ಅನ್ಯರನ್ನು ಪ್ರೇಮಪೂರ್ವಕವಾಗಿ ಕಂಡ. ಸದಾ ಅನ್ಯರ ಒಳಿತನ್ನೇ ಬಯಸಿದ. ಅನ್ಯರ ಏಳ್ಗೆಗೆ ಶ್ರಮಿಸಿದ. ಈತನನ್ನಾದರೂ ಸ್ವರ್ಗಕ್ಕೆ ಕಳುಹಿಸಲೇ..?" ಎಂದು ಕೋರಿಕೊಂಡ.

ಯಮರಾಜನ ಸಂತಸಕ್ಕೆ ಪಾರವಿರಲಿಲ್ಲ. "ದೂತ..! ಈ ಸ್ವರ್ಗಲೋಕ ಇಂತವರಿಗಾಗಿಯೇ ಇದ್ದಿದ್ದು. ಈತನನ್ನು ಆದರಪೂರ್ವಕವಾಗಿ ಸ್ವರ್ಗಕ್ಕೆ ಕಳುಹಿಸು ಹಾಗೂ ಈತ ಆನಂದದಿಂದಿರಲು ಸರ್ವವ್ಯವಸ್ಥೆಯನ್ನೂ ಮಾಡು" ಎಂದು ಯಮದೂತನಿಗೆ ಹೇಳಿದ. 

ಯಾರು ಪಾಪಕರ್ಮಗಳಿಂದ ದೂರವಿರುತ್ತಾರೋ,ಯಾರು ಸರ್ವಪ್ರಾಣಿಗಳನ್ನು ಆದರದಿಂದ ಕಾಣುತ್ತಾರೋ,ಯಾರು ಸರ್ವಜಂತುಗಳಲ್ಲೂ ಪ್ರೇಮಭಾವನೆಯನ್ನು ಹೊಂದಿರುತ್ತಾರೋ,ಯಾರು ಕರ್ತವ್ಯನಿಷ್ಠರಾಗಿರುತ್ತಾರೋ ಅಂತವರು ಸ್ವರ್ಗೀಯ ಆನಂದದ ಅಧಿಕಾರಿಗಳಾಗಿರುತ್ತಾರೆ.

"ಸರ್ವೇ ಭವಂತು ಸುಖಿನಃ"

Tuesday, 14 February 2017

ಭಕ್ತರ ರಕ್ಷಣೆ ಭಗವಂತನ ಹೊಣೆ



ಮಹಾಭಾರತ ಯುದ್ಧ. ಮೊದಲ ಎಂಟು ದಿನಗಳ ಕಾಲ ಪಾಂಡವರ ಸೇನೆಯಲ್ಲಿ ಹಾಹಾಕರವೇ ನಡೆದಿತ್ತು. ಅದಕ್ಕೆ ಕಾರಣ ಭೀಷ್ಮಪಿತಾಮಹನ ಸೇನಾಧಿಪತ್ಯ. ಪಾಂಡವರಿಗೆ ಜಯಲಕ್ಷ್ಮಿ ದೂರವಾಗುತ್ತಿರುವಂತೇ ಭಾಸವಾಗಿತ್ತು. ಭೀಷ್ಮಪಿತಾಮಹನ ಸಮರ್ಥ ಸೇನಾಧಿಪತ್ಯವನ್ನು ಕಂಡು ದುರ್ಯೋಧನನಿಗೆ ಒಳಗೊಳಗೆ ಸಂತಸವಾಗುತ್ತಿದ್ದರೂ,ತೋರಿಕೆಗೆ ದುಃಖವನ್ನೇ ವ್ಯಕ್ತಪಡಿಸುತ್ತಿದ್ದ. ಆ ದುಃಖಕ್ಕೆ ಕಾರಣ ಭೀಷ್ಮ ಪಂಚಪಾಂಡವರಲ್ಲಿ ಯಾರನ್ನೂ ಹತ್ಯೆಗೈಯ್ಯಲಿಲ್ಲವೆಂಬುದು. ಬಹಿರಂಗವಾಗಿ ಭೀಷ್ಮರಲ್ಲೂ ತನ್ನ ಅಳಲನ್ನು ತೋಡಿಕೊಳ್ಳುತ್ತಾನೆ. "ಪಿತಾಮಹ ! ಎಂಟು ದಿನಗಳ ಕಾಲ ಸಮರ್ಥವಾಗಿ ಸೇನಾಧಿಪತ್ಯವನ್ನು ನಿರ್ವಹಿಸಿದ್ದೀರಿ. ಪಾಂಡವಸೇನೆ ಕಂಗೆಡುವಂತೇ ಮಾಡಿದ್ದೀರಿ. ಆದರೆ ನೀವು ಪಂಚಪಾಂಡವರಲ್ಲಿ ಯಾರನ್ನೂ ವಧಿಸುವ ಪ್ರಯತ್ನ ಮಾಡಿಲ್ಲ. ಏಕೆ ಪಿತಾಮಹ..? ಪಾಂಡವರೆಂದರೆ ಅಷ್ಟೊಂದು ಮಮಕಾರವೇ..? ಸಲ್ಲದು ಪಿತಾಮಹ...!! ಸೇನೆಯ ಅಧಿಪತ್ಯವನ್ನು ವಹಿಸಿಕೊಂಡು ಮಮಕಾರವನ್ನು ಹೊಂದುವುದು ನಿಮ್ಮಂತಹ ಕ್ಷತ್ರಿಯವೀರರಿಗೆ ತರವಲ್ಲ. ಮಮಕಾರವನ್ನು ಬಿಟ್ಟು ಪಾಂಡವರೊಂದಿಗೆ ಹೋರಾಡಿ. ಅವರನ್ನು ವಧಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿ" ಮಾತಿನಲ್ಲೇ ಭೀಷ್ಮನನ್ನು ಚುಚ್ಚುತ್ತಾನೆ. ಸಹಜವಾಗಿಯೇ ಭೀಷ್ಮನಿಗೆ ಕೋಪ ಆವರಿಸುತ್ತದೆ. "ನಾಳೆಯ ಯುದ್ಧದಲ್ಲಿ ಖಂಡಿತವಾಗಿಯೂ ನಾನು ಅರ್ಜುನನನ್ನು ವಧಿಸುತ್ತೇನೆ" ಎಂದು ಪ್ರತಿಜ್ಞೆಯನ್ನು ಮಾಡುತ್ತಾನೆ.

ಭೀಷ್ಮಪ್ರತಿಜ್ಞೆ ಎಂದರೆ ಕೇಳಬೇಕೆ..? ಅಸಂಭವ ಎನ್ನುವ ಮಾತೇ ಇಲ್ಲ. ಭೀಷ್ಮನ ಪ್ರತಿಜ್ಞೆಯನ್ನು ಕೇಳಿದ ಪಾಂಡವರ ಪಾಳಯದಲ್ಲಿ ದಿಗಿಲು.! ಸಾಕ್ಷಾತ್ ಕೃಷ್ಣಪರಮಾತ್ಮನೂ ಚಿಂತೆಗೊಳಗಾದ. ನಾಳೆ ಅರ್ಜುನನನ್ನು ಕಳೆದುಕೊಳ್ಳುತ್ತೇವೆಂಬ ಅಳಕು ಪಾಂಡವರ ಪಾಳಯದಲ್ಲಿ ಮೂಡಿತು. ದಿಕ್ಕುತೋಚದಂತಾದ ಪರಿಸ್ಥಿತಿ. ರಾತ್ರಿಯಾದರೂ ಯಾರೊಬ್ಬರೂ ಮಲಗಲಿಲ್ಲ. ಅರ್ಜುನನನ್ನು ರಕ್ಷಿಸುವ ಪರಿ ಹೇಗೆಂಬುದೇ ಚಿಂತೆ. ಕೃಷ್ಣನದು ರಣತಂತ್ರ,ಅರ್ಜುನನನ್ನು ಹೇಗೆ ರಕ್ಷಿಸಲಿ..? ಯೋಚಿಸುತ್ತಾ ಅರ್ಜುನನ ಶಿಬಿರಕ್ಕೆ ಬಂದ. ಅರ್ಜುನ ಮಲಗಿ ಗಾಢವಾಗಿ ನಿದ್ರಿಸುತ್ತಿದ್ದಾನೆ. ಅಲ್ಲಿ ಭೀಷ್ಮ ಅರ್ಜುನನನ್ನು ನಾಳೆ ಕೊಲ್ಲುವೆನೆಂದು ಘನಘೋರ ಪ್ರತಿಜ್ಞೆ ಮಾಡಿದ್ದಾನೆ. ಇಲ್ಲಿ ಪಾಂಡವರು ಚಿಂತಾಕ್ರಾಂತರಾಗಿ ಕುಳಿತಿದ್ದಾರೆ. ಇಂತಹ ಸಂದರ್ಭದಲ್ಲಿ ಅರ್ಜುನನದು ಗಾಢನಿದ್ರೆ..!! ಕೃಷ್ಣನಿಗೆ ನಗು ಬರುತ್ತದೆ. ಅರ್ಜುನನನ್ನು ನಿದ್ರೆಯಿಂದೆಬ್ಬಿಸಿ " ಅಲ್ಲಯ್ಯಾ ಮಹಾನುಭಾವ..ಭೀಷ್ಮ ಪ್ರತಿಜ್ಞೆಯ ವಿಷಯ ನಿನಗೆ ಅರಿವಿದೆಯಾ..? ನಾಳೆ ನಿನ್ನನ್ನು ಆತ ವಧಿಸುತ್ತಾನಂತೆ. ಮುಂದಿನ ಮಾರ್ಗವನ್ನು ಚಿಂತಿಸದೇ ನೆಮ್ಮದಿಯಿಂದ ನಿದ್ರಿಸುತ್ತಿರುವೆಯಲ್ಲ..? ಎಂದು ಕೇಳುತ್ತಾನೆ. ಅರ್ಜುನ ಮುಗುಳ್ನಗುತ್ತಾ "ಎಲ್ಲವೂ ಗೊತ್ತಿದೆ ದೇವ..!! ಆದರೆ ನನಗ್ಯಾವ ಆತಂಕವೂ ಇಲ್ಲ. ಏಕೆಂದರೆ ನನ್ನನ್ನು ರಕ್ಷಿಸುವ ದೇವ ನನ್ನ ರಕ್ಷಣೆಯ ಮಾರ್ಗವನ್ನು ಖಂಡಿತವಾಗಿಯೂ ಹುಡುಕಿರುತ್ತಾನೆ. ನಾನು ನಿದ್ರಿಸಿದರೂ ಆತ ಜಾಗೃತನಾಗಿ ನನ್ನ ರಕ್ಷಣೆಯ ಮಾರ್ಗವನ್ನು ಅನ್ವೇಷಿಸಿರುತ್ತಾನೆಂಬ ಅಚಲವಾದ ನಂಬಿಕೆ ನನಗಿದೆ. ನಾನು ನಂಬಿರುವ ದೇವ ನನ್ನನ್ನೆಂದಿಗೂ ಕೈಬಿಡಲಾರ. ಆದ್ದರಿಂದ ನನ್ನ ರಕ್ಷಣೆಯ ಬಗ್ಗೆ ಚಿಂತಿಸದೇ ನಾನು ನಿಶ್ಚಿಂತೆಯಿಂದ ಮಲಗಿದ್ದೇನೆ" ಅರ್ಜುನನ ಮಾತಿಗೆ ಶ್ರೀಕೃಷ್ಣ ತಲೆದೂಗಿದ. ಅರ್ಜುನನ ರಕ್ಷಣೆಯ ಸಾರಥ್ಯವನ್ನು ವಹಿಸಿದ. 

ಅದನ್ನೇ ತಾನೇ ಗೀತಾಚಾರ್ಯ ಗೀತೆಯಲ್ಲಿ ಬೋಧಿಸಿದ್ದು...
"ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಂ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ || ಎಂಬುದಾಗಿ.
ನಮ್ಮ ರಕ್ಷಣೆಯ ಜವಾಬ್ದಾರಿ ಭಗವಂತನದು. ಆತನ ಅಣತಿಯಂತೇ ಎಲ್ಲವೂ ನಡೆಯುತ್ತದೆ. ಯಾರು ಭಗವಂತನನ್ನೇ ಅನವರತವಾಗಿ ಭಜಿಸುತ್ತಾರೋ ಅಂತಹ ಭಕ್ತರ ಯೋಗಕ್ಷೇಮವನ್ನು ಸಾಕ್ಷಾತ್ ಭಗವಂತನೇ ವಹಿಸಿಕೊಳ್ಳುತ್ತಾನೆ.

"ಸರ್ವೇ ಭವಂತು ಸುಖಿನಃ"

Thursday, 2 February 2017

ಪ್ರಾಣವನ್ನಾದರೂ ಬಿಟ್ಟೇನು,ಆದರೆ ಧರ್ಮ ಬಿಡಲಾರೆ.





"ವೀರ ಹಕೀಕತರಾಯ್" ಎಂದರೆ ಪಂಜಾಬಿಗಳಿಗೆ ಇಂದಿಗೂ ಅದಮ್ಯ ಅಭಿಮಾನ. ೧೭೧೯ರಲ್ಲಿ ಪಂಜಾಬಿನ ಸಿಯಾಲಕೋಟ್ ಎಂಬ ಹಳ್ಳಿಯಲ್ಲಿ ಜನಿಸಿದ ಹಕೀಕತರಾಯ್,ಕೇವಲ ೫ನೇ ವಯಸ್ಸಿನಲ್ಲೇ ಇತಿಹಾಸ ಹಾಗೂ ಸಂಸ್ಕೃತದಲ್ಲಿ ಮಹಾಮೇಧಾವಿಯಾಗಿದ್ದ. ೧೦ನೇ ವಯಸ್ಸಿನಲ್ಲಿ ಆತನಿಗೆ "ಫಾರಸಿ" ಭಾಷೆ ಕಲಿಯಬೇಕೆಂಬ ಆಸೆ ಮೂಡಿತು. ಫಾರಸಿ ಭಾಷೆಯನ್ನು ಕಲಿಯಲು ಮದರಸಾ ಸೇರಿದ. ಮದರಸಾದಲ್ಲಿರುವ ವಿದ್ಯಾರ್ಥಿಗಳು ಇಸ್ಲಾಂ ಅನುಯಾಯಿಗಳು. ಸದಾ ಹಿಂದೂ ದೇವ-ದೇವತೆಗಳನ್ನು ನಿಂದಿಸುವುದೇ ಅವರ ಕಾಯಕವಾಗಿತ್ತು. ಆದರೆ ಹಕೀಕತನ ಮುಂದೆ ಅವರಾಟ ನಡೆಯುತ್ತಿರಲಿಲ್ಲ. ನಿಂದಿಸುವವರ ಎದುರು ನಿಂತು ವಾದವನ್ನು ಮಾಡಿ ಅವರೇ ಸೋಲೊಪ್ಪಿಕೊಳ್ಳುವಂತೇ ಮಾಡುತ್ತಿದ್ದ. ಇದು ಮುಸ್ಲಿಂ ವಿದ್ಯಾರ್ಥಿಗಳಿಗೆ ಇರಿಸು-ಮುರಿಸನ್ನುಂಟು ಮಾಡಿತ್ತು. ವಾದದಲ್ಲಿ ಹಕೀಕತನನ್ನು ಗೆಲ್ಲಲು ಸಾಧ್ಯವೇ ಇಲ್ಲವಾಗಿತ್ತು.
ಹಕೀಕತನನ್ನು ಬೌದ್ಧಿಕವಾಗಿ ಗೆಲ್ಲಲಾರದ ವಿದ್ಯಾರ್ಥಿಗಳು ಆತನ ಮೇಲೆ ದೈಹಿಕ ಹಲ್ಲೆ ನಡೆಸಿದರು. ಅಲ್ಲದೇ ಆತ ಬೀಬಿ ಫಾತಿಮಾಳನ್ನು ಅಪಮಾನಿಸಿದನೆಂದು ಮದರಸಾದ ಮೌಲ್ವಿಗೆ ದೂರನ್ನು ನೀಡಿದರು. ಆಕ್ರೋಶಗೊಂಡ ಮೌಲ್ವಿ ನಗರದ ಕಾಜಿಯ ಬಳಿ ದೂರನ್ನು ಸಲ್ಲಿಸಿದ. ಮತಾಂಧ ಕಾಜಿ ಹಕೀಕತನನ್ನು ಆರೋಪಿಯನ್ನಾಗಿಸಿ,ಹಕೀಕತನಿಗೆ ಸಾವಿನ ಶಿಕ್ಷೆಯನ್ನು ವಿಧಿಸಬೇಕು ಅಥವಾ ಆತ ಇಸ್ಲಾಂ ಧರ್ಮಕ್ಕೆ ಮತಾಂತರವಾಗಬೇಕೆಂದು ಅಧಿಸೂಚನೆ ಹೊರಡಿಸಿದ. ಹಕೀಕತನ ಪೋಷಕರು ಇಸ್ಲಾಂಗೆ ಮತಾಂತರವಾಗೆಂದು ಪರಿಪರಿಯಾಗಿ ಬೇಡಿಕೊಂಡರು. ಆದರೆ ಹಕೀಕತ ಅವರ ಮಾತನ್ನು ತಿರಸ್ಕರಿಸಿ "ಪ್ರಾಣವನ್ನಾದರೂ ಬಿಟ್ಟೇನು,ಆದರೆ ಧರ್ಮ ಬಿಡಲಾರೆ" ಎಂದು ನಿಶ್ಚಯಿಸಿದ. ೧೭೩೪ರಲ್ಲಿ ಹಕೀಕತನಿಗೆ ಮರಣದಂಡನೆಯನ್ನು ನೀಡಲಾಯಿತು. ಮತಾಂಧತೆಯ ಕರಿನೆರಳಲ್ಲಿ ಮುಗ್ಧಜೀವವೊಂದು ಕರಗಿಹೋಯಿತು.