ಮಹಾಭಾರತ ಯುದ್ಧ. ಮೊದಲ ಎಂಟು ದಿನಗಳ ಕಾಲ
ಪಾಂಡವರ ಸೇನೆಯಲ್ಲಿ ಹಾಹಾಕರವೇ ನಡೆದಿತ್ತು. ಅದಕ್ಕೆ ಕಾರಣ ಭೀಷ್ಮಪಿತಾಮಹನ ಸೇನಾಧಿಪತ್ಯ.
ಪಾಂಡವರಿಗೆ ಜಯಲಕ್ಷ್ಮಿ ದೂರವಾಗುತ್ತಿರುವಂತೇ ಭಾಸವಾಗಿತ್ತು. ಭೀಷ್ಮಪಿತಾಮಹನ ಸಮರ್ಥ
ಸೇನಾಧಿಪತ್ಯವನ್ನು ಕಂಡು ದುರ್ಯೋಧನನಿಗೆ ಒಳಗೊಳಗೆ ಸಂತಸವಾಗುತ್ತಿದ್ದರೂ,ತೋರಿಕೆಗೆ ದುಃಖವನ್ನೇ
ವ್ಯಕ್ತಪಡಿಸುತ್ತಿದ್ದ. ಆ ದುಃಖಕ್ಕೆ ಕಾರಣ ಭೀಷ್ಮ ಪಂಚಪಾಂಡವರಲ್ಲಿ ಯಾರನ್ನೂ
ಹತ್ಯೆಗೈಯ್ಯಲಿಲ್ಲವೆಂಬುದು. ಬಹಿರಂಗವಾಗಿ ಭೀಷ್ಮರಲ್ಲೂ ತನ್ನ ಅಳಲನ್ನು ತೋಡಿಕೊಳ್ಳುತ್ತಾನೆ.
"ಪಿತಾಮಹ ! ಎಂಟು ದಿನಗಳ ಕಾಲ ಸಮರ್ಥವಾಗಿ ಸೇನಾಧಿಪತ್ಯವನ್ನು ನಿರ್ವಹಿಸಿದ್ದೀರಿ.
ಪಾಂಡವಸೇನೆ ಕಂಗೆಡುವಂತೇ ಮಾಡಿದ್ದೀರಿ. ಆದರೆ ನೀವು ಪಂಚಪಾಂಡವರಲ್ಲಿ ಯಾರನ್ನೂ ವಧಿಸುವ ಪ್ರಯತ್ನ
ಮಾಡಿಲ್ಲ. ಏಕೆ ಪಿತಾಮಹ..? ಪಾಂಡವರೆಂದರೆ ಅಷ್ಟೊಂದು ಮಮಕಾರವೇ..? ಸಲ್ಲದು ಪಿತಾಮಹ...!! ಸೇನೆಯ
ಅಧಿಪತ್ಯವನ್ನು ವಹಿಸಿಕೊಂಡು ಮಮಕಾರವನ್ನು ಹೊಂದುವುದು ನಿಮ್ಮಂತಹ ಕ್ಷತ್ರಿಯವೀರರಿಗೆ ತರವಲ್ಲ.
ಮಮಕಾರವನ್ನು ಬಿಟ್ಟು ಪಾಂಡವರೊಂದಿಗೆ ಹೋರಾಡಿ. ಅವರನ್ನು ವಧಿಸುವ ಪ್ರಾಮಾಣಿಕ ಪ್ರಯತ್ನವನ್ನು
ಮಾಡಿ" ಮಾತಿನಲ್ಲೇ ಭೀಷ್ಮನನ್ನು ಚುಚ್ಚುತ್ತಾನೆ. ಸಹಜವಾಗಿಯೇ ಭೀಷ್ಮನಿಗೆ ಕೋಪ
ಆವರಿಸುತ್ತದೆ. "ನಾಳೆಯ ಯುದ್ಧದಲ್ಲಿ ಖಂಡಿತವಾಗಿಯೂ ನಾನು ಅರ್ಜುನನನ್ನು
ವಧಿಸುತ್ತೇನೆ" ಎಂದು ಪ್ರತಿಜ್ಞೆಯನ್ನು ಮಾಡುತ್ತಾನೆ.
ಭೀಷ್ಮಪ್ರತಿಜ್ಞೆ ಎಂದರೆ ಕೇಳಬೇಕೆ..? ಅಸಂಭವ
ಎನ್ನುವ ಮಾತೇ ಇಲ್ಲ. ಭೀಷ್ಮನ ಪ್ರತಿಜ್ಞೆಯನ್ನು ಕೇಳಿದ ಪಾಂಡವರ ಪಾಳಯದಲ್ಲಿ ದಿಗಿಲು. ಸಾಕ್ಷಾತ್
ಕೃಷ್ಣಪರಮಾತ್ಮನೂ ಚಿಂತೆಗೊಳಗಾದ. ನಾಳೆ ಅರ್ಜುನನನ್ನು ಕಳೆದುಕೊಳ್ಳುತ್ತೇವೆಂಬ ಅಳಕು ಪಾಂಡವರ
ಪಾಳಯದಲ್ಲಿ ಮೂಡಿತು. ದಿಕ್ಕುತೋಚದಂತಾದ ಪರಿಸ್ಥಿತಿ. ರಾತ್ರಿಯಾದರೂ ಯಾರೊಬ್ಬರೂ ಮಲಗಲಿಲ್ಲ.
ಅರ್ಜುನನನ್ನು ರಕ್ಷಿಸುವ ಪರಿ ಹೇಗೆಂಬುದೇ ಚಿಂತೆ. ಕೃಷ್ಣನದು ರಣತಂತ್ರ,ಅರ್ಜುನನನ್ನು ಹೇಗೆ
ರಕ್ಷಿಸಲಿ..? ಯೋಚಿಸುತ್ತಾ ಅರ್ಜುನನ ಶಿಬಿರಕ್ಕೆ ಬಂದ. ಅರ್ಜುನ ಮಲಗಿ ಗಾಢವಾಗಿ
ನಿದ್ರಿಸುತ್ತಿದ್ದಾನೆ. ಅಲ್ಲಿ ಭೀಷ್ಮ ಅರ್ಜುನನನ್ನು ನಾಳೆ ಕೊಲ್ಲುವೆನೆಂದು ಘನಘೋರ ಪ್ರತಿಜ್ಞೆ
ಮಾಡಿದ್ದಾನೆ. ಇಲ್ಲಿ ಪಾಂಡವರು ಚಿಂತಾಕ್ರಾಂತರಾಗಿ ಕುಳಿತಿದ್ದಾರೆ. ಇಂತಹ ಸಂದರ್ಭದಲ್ಲಿ
ಅರ್ಜುನನದು ಗಾಢನಿದ್ರೆ..!! ಕೃಷ್ಣನಿಗೆ ನಗು ಬರುತ್ತದೆ. ಅರ್ಜುನನನ್ನು ನಿದ್ರೆಯಿಂದೆಬ್ಬಿಸಿ
" ಅಲ್ಲಯ್ಯಾ ಮಹಾನುಭಾವ..ಭೀಷ್ಮ ಪ್ರತಿಜ್ಞೆಯ ವಿಷಯ ನಿನಗೆ ಅರಿವಿದೆಯಾ..? ನಾಳೆ
ನಿನ್ನನ್ನು ಆತ ವಧಿಸುತ್ತಾನಂತೆ. ಮುಂದಿನ ಮಾರ್ಗವನ್ನು ಚಿಂತಿಸದೇ ನೆಮ್ಮದಿಯಿಂದ
ನಿದ್ರಿಸುತ್ತಿರುವೆಯಲ್ಲ..? ಎಂದು ಕೇಳುತ್ತಾನೆ. ಅರ್ಜುನ ಮುಗುಳ್ನಗುತ್ತಾ "ಎಲ್ಲವೂ
ಗೊತ್ತಿದೆ ದೇವ..!! ಆದರೆ ನನಗ್ಯಾವ ಆತಂಕವೂ ಇಲ್ಲ. ಏಕೆಂದರೆ ನನ್ನನ್ನು ರಕ್ಷಿಸುವ ದೇವ ನನ್ನ
ರಕ್ಷಣೆಯ ಮಾರ್ಗವನ್ನು ಖಂಡಿತವಾಗಿಯೂ ಹುಡುಕಿರುತ್ತಾನೆ. ನಾನು ನಿದ್ರಿಸಿದರೂ ಆತ ಜಾಗೃತನಾಗಿ
ನನ್ನ ರಕ್ಷಣೆಯ ಮಾರ್ಗವನ್ನು ಅನ್ವೇಷಿಸಿರುತ್ತಾನೆಂಬ ಅಚಲವಾದ ನಂಬಿಕೆ ನನಗಿದೆ. ನಾನು ನಂಬಿರುವ
ದೇವ ನನ್ನನ್ನೆಂದಿಗೂ ಕೈಬಿಡಲಾರ. ಆದ್ದರಿಂದ ನನ್ನ ರಕ್ಷಣೆಯ ಬಗ್ಗೆ ಚಿಂತಿಸದೇ ನಾನು
ನಿಶ್ಚಿಂತೆಯಿಂದ ಮಲಗಿದ್ದೇನೆ" ಅರ್ಜುನನ ಮಾತಿಗೆ ಶ್ರೀಕೃಷ್ಣ ತಲೆದೂಗಿದ. ಅರ್ಜುನನ
ರಕ್ಷಣೆಯ ಸಾರಥ್ಯವನ್ನು ವಹಿಸಿದ.
ಅದನ್ನೇ ತಾನೇ ಗೀತಾಚಾರ್ಯ ಗೀತೆಯಲ್ಲಿ
ಬೋಧಿಸಿದ್ದು...
"ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಂ
ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ
ವಹಾಮ್ಯಹಮ್ || ಎಂಬುದಾಗಿ.
ನಮ್ಮ ರಕ್ಷಣೆಯ ಜವಾಬ್ದಾರಿ ಭಗವಂತನದು. ಆತನ
ಅಣತಿಯಂತೇ ಎಲ್ಲವೂ ನಡೆಯುತ್ತದೆ. ಯಾರು ಭಗವಂತನನ್ನೇ ಅನವರತವಾಗಿ ಭಜಿಸುತ್ತಾರೋ ಅಂತಹ ಭಕ್ತರ
ಯೋಗಕ್ಷೇಮವನ್ನು ಸಾಕ್ಷಾತ್ ಭಗವಂತನೇ ವಹಿಸಿಕೊಳ್ಳುತ್ತಾನೆ.
"ಸರ್ವೇ ಭವಂತು ಸುಖಿನಃ"