“ಆತ್ಮ”
ಎಂದರೇನು...?ಹಲವರಿಗೆ ಅರ್ಥೈಸಿಕೊಳ್ಳಲಾಗದ ಕ್ಲಿಷ್ಟ ಪದ.ಹಲವರಿಗೆ ಆತ್ಮಜ್ಞಾನವೆಂಬುದು
ಆಧ್ಯಾತ್ಮಜಿಜ್ಞಾಸುಗಳಿಗೆ ಮಾತ್ರ ಎಂಬ ತಪ್ಪು ಕಲ್ಪನೆ.ಹಲವರಿಗೆ ಇದೆಲ್ಲ ವಯಸ್ಸಾದವರಿಗೆ,ವಿರಕ್ತರಿಗೆ
ಎಂಬ ತಿರಸ್ಕೃತ ಭಾವನೆ.ನಮಗೆ ಶರೀರ ಮುಖ್ಯ,ಶರೀರದ ಅವಯವಗಳು ಮುಖ್ಯ,ಮನಸ್ಸು,ಇಂದ್ರಿಯಜ್ಞಾನಗಳು ಮುಖ್ಯ,ಆದರೆ
ಇವುಗಳನ್ನೆಲ್ಲಾ ನಿಯಂತ್ರಿಸುವ ಆತ್ಮ ಮಾತ್ರ ಗೌಣ..!!”ಶರೀರದಲ್ಲಿ ಆತ್ಮವೊಂದಿದೆ” ಎಂಬ ವಿಚಾರವೇ
ಹಲವರಿಗೆ ತಿಳಿದಿಲ್ಲ.ಶರೀರವೆಂಬ ರಥವನ್ನು ನಿಯಂತ್ರಿಸುವ ಸಾರಥಿಯ ಬಗ್ಗೆಯೇ ಅರಿವಿಲ್ಲ.”ಆತ್ಮಾನಂ
ರಥಿನಂ ವಿದ್ಧಿ”ಎಂಬ ಉಪನಿಷತ್ ವಾಕ್ಯದ ಜ್ಞಾನವಿಲ್ಲ..!!ಹಾಗಾಗಿ ಅಂತರಾತ್ಮವನ್ನು ಮರೆತು
ವ್ಯವಹರಿಸುತ್ತೇವೆ.ಶರೀರವನ್ನೇ ಮುಖ್ಯವೆಂದು ತಿಳಿದು ಅಂತರಾತ್ಮಕ್ಕೆ ದ್ರೋಹ
ಬಗೆಯುತ್ತೇವೆ.ಹಾಗಾಗಿ ಆತ್ಮಸ್ವರೂಪವನ್ನು ಅರಿಯದ ಮನುಷ್ಯ ಹಲವು ಜನ್ಮಗಳವರೆಗೂ
ಪತಿತನಾಗಿರುತ್ತಾನೆ.
ಹಾಗಾದರೆ
ಆತ್ಮವೆಂದರೇನು..?
ಸರಳವಾದ ಉತ್ತರ –
“ನಾನು” ಎಂಬ ಭಾವನೆಯೇ ಆತ್ಮ.”ನಾನು” ಮನುಷ್ಯ,”ನಾನು” ಮೇಧಾವಿ.”ನಾನು” ಶ್ರೀಮಂತ “ನಾನು” ಬಡವ
ಮುಂತಾದ ಸಂದರ್ಭಗಳಲ್ಲಿ ಬಳಸಲಾಗುವ “ನಾನು” ಎಂಬ ಭಾವನೆಯೇ ಆತ್ಮ.ಜಗತ್ತಿನ ಪ್ರತಿಯೊಂದು ಜೀವಿಗೂ
“ನಾನು” ಎಂಬ ಭಾವನೆಯಿರುತ್ತದೆ ಅದೇ ಆತ್ಮ.ಪ್ರತಿ ಜೀವಿಯಲ್ಲೂ ಆತ್ಮ ನಿರ್ಗುಣ,ನಿರಾಕಾರ
ರೂಪದಲ್ಲಿರುತ್ತದೆ.ಕಾಣುವ ಶರೀರಕ್ಕೆ ಸ್ವತಃ ಚೈತನ್ಯವಿಲ್ಲ.ಆತ್ಮಚೈತನ್ಯದಿಂದಷ್ಟೇ
ದೇಹಚೈತನ್ಯ.ಹೇಗೆ ಸೂರ್ಯ ಚಂದ್ರನಿಂದ ಬೆಳಕನ್ನು ಪಡೆದು ಶೋಭಿಸುತ್ತಾನೋ ಹಾಗೇ ಶರೀರ,ಮನಸ್ಸು,ಬುದ್ಧಿಗಳು
ಆತ್ಮದಿಂದ ಶೋಭಿಸುತ್ತವೆ.ನಮ್ಮ ಶರೀರ,ಮನಸ್ಸು,ಬುದ್ಧಿಗಳನ್ನು ನಿಯಂತ್ರಿಸುವುದು ಇದೇ
ಆತ್ಮ.ಶರೀರದಿಂದ ಆತ್ಮ ನಿವೃತ್ತಿಯಾದಾಗ ಶರೀರ ಅಚೈತನ್ಯವಾಗುತ್ತದೆ.ಶರೀರಕ್ಕೆ
ನಾಶವಿದೆ,ಆತ್ಮಕ್ಕೆ ನಾಶವಿಲ್ಲ.ಶರೀರ ವಿನಾಶಿ,ಆತ್ಮ ಅವಿನಾಶಿ.
ಭಗವದ್ಗೀತೆಯ
ಎರಡನೆಯ ಅಧ್ಯಾಯ ಸಾಂಖ್ಯಯೋಗ.ಅಲ್ಲಿ ಭಗವಾನ್ ಶ್ರೀಕೃಷ್ಣ ಆತ್ಮದ ಗುಣ,ಮಹತ್ವಗಳನ್ನು ತುಂಬಾ
ಸರಳವಾಗಿ ವಿವರಿಸಿದ್ದಾನೆ.
“ನ ಜಾಯತೇ ಮ್ರಿಯತೇ
ವಾ ಕದಾಚಿತ್”
ಜಗತ್ತಿನಲ್ಲಿ
ಜನಿಸುವ ಸಕಲ ಚರಾಚರಗಳ ವಸ್ತುಗಳಿಗೆ ಜನ್ಮದ ಜೊತೆ ಸಾವೂ ನಿಶ್ಚಯವಾಗಿರುತ್ತದೆ.ಆದರೆ ಆತ್ಮ
ಹಾಗಲ್ಲ,ಆತ್ಮಕ್ಕೆ ಹುಟ್ಟಿಲ್ಲ,ಸಾವಿಲ್ಲ,ಏಕೆಂದರೆ ಆತ್ಮ ಜನ್ಮರಹಿತ,ನಿತ್ಯ,ಸನಾತನ ಹಾಗೂ
ಪುರಾತನ.ಶರೀರವು ನಾಶವಾದರೂ ಆತ್ಮ ನಾಶವಾಗುವುದಿಲ್ಲ.ಹಾಗಾಗಿ “ನಾನು ಸಾಯುತ್ತೇನೆ” ಎಂಬ ವಾಕ್ಯ ದೋಷಪೂರ್ಣ.”ನಾನು”
ಎಂಬುದು ಆತ್ಮ.ಆತ್ಮಕ್ಕೆ ಸಾವಿಲ್ಲ.ಹಾಗಾಗಿ “ನಾನು ಸಾಯುತ್ತೇನೆ” ಎಂಬುದರ ಬದಲು “ನನ್ನ ಶರೀರ
ಸಾಯುತ್ತದೆ” ಎಂದು ಹೇಳುವುದು ಉಚಿತ..!!ಆತ್ಮ ನಾಶರಹಿತ,ನಿತ್ಯ ಹಾಗೂ ಅವ್ಯಯ.
ಹೇಗೆ ನಾವು ಹಳೆಯ
ಬಟ್ಟೆಯನ್ನು ತ್ಯಜಿಸಿ ಹೊಸಬಟ್ಟೆಯನ್ನು ಧರಿಸುವೆವೋ ಹಾಗೇ ಆತ್ಮವೂ ಸಹ ಹಳೆಯ ಶರೀರವನ್ನು
ತ್ಯಜಿಸಿ ಹೊಸಶರೀರವನ್ನು ಧರಿಸುತ್ತಲೇ ಇರುತ್ತದೆ.ಆತ್ಮ ಗಾಳಿಯಂತೇ ನಿರಾಕಾರ.ನಿರಾಕಾರ
ಆತ್ಮವನ್ನು ಶಸ್ತ್ರಗಳು ಕತ್ತರಿಸುವುದು ಹೇಗೆ..?ನಿರಾಕಾರ ಆತ್ಮವನ್ನು ಅಗ್ನಿ ದಹಿಸುವುದು
ಹೇಗೆ..?ಆತ್ಮ ಅಗ್ನಿಗಿಂತಲೂ ಸೂಕ್ಷ್ಮ.ನಿರಾಕಾರವಾದ ಆತ್ಮನನ್ನು ನೀರು ಹೇಗೆ
ತೋಯಿಸಬಹುದು..?ಗಾಳಿ ಹೇಗೆ ಒಣಗಿಸಬಹುದು..?ಹಾಗಾಗಿ ಪಂಚಭೂತಗಳ ಅಂಕೆಗೂ ನಿಲುಕದ
ನಿರ್ಗುಣ,ನಿರಾಕಾರ,ಅಚಲ,ಸ್ಥಿರ,ಸನಾತನ,ನಿತ್ಯರೂಪವೇ ಆತ್ಮ.
“ನೈನಃ ಛಿಂದಂತಿ
ಶಸ್ತ್ರಾಣಿ ನೈನಂ ದಹತಿ ಪಾವಕಃ |
ನ ಚೈನಂ
ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ ||
ಶರೀರದಲ್ಲಿರುವ
ಚೈತನ್ಯವೇ ಆತ್ಮ.ಈ ಆತ್ಮಕ್ಕೆ ಬಾಲ್ಯ,ಕೌಮಾರ,ಯೌವ್ವನ,ವಾರ್ಧಕಾವಸ್ಥೆಗಳಿಲ್ಲ.ಬಾಲ್ಯದಲ್ಲಿ ನಡೆದ
ಘಟನೆಗಳು ವಾರ್ಧಕಾವಸ್ಥೆಯಲ್ಲಿ ಜ್ಞಾಪಕದಲ್ಲಿರುತ್ತದೆ.”ನಾನು ಅಲ್ಲಿಗೆ ಹೋಗಿದ್ದೆ’”ನಾನು
ಅದನ್ನು ಮಾಡಿದ್ದೆ” ಮುಂತಾದ ಸಂದರ್ಭಗಳಲ್ಲಿ “ನಾನು” ಎಂಬುದು ಆತ್ಮದ ಅಸ್ತಿತ್ವವನ್ನು
ಸಾರುತ್ತದೆ.ಶರೀರಕ್ಕೆ ಮುಪ್ಪಿದೆಯೇ ಹೊರತು ಆತ್ಮಕ್ಕಲ್ಲ.ಆತ್ಮಕ್ಕೆ ಶರೀರಾವಸ್ಥೆಗಳ
ಸಂಬಂಧವಿರುವುದಿಲ್ಲ.ಎಲ್ಲಿಯವರೆಗೆ ಶರೀರದಲ್ಲಿ ಚೈತನ್ಯವಿರುವುದೋ ಆಲ್ಲಿಯವರೆಗೆ ಶರೀರ
ಕ್ರಿಯಾಶೀಲವಾಗಿರುತ್ತದೆ.ಚೈತನ್ಯ ಹೊರಟುಹೋದಮೇಲೆ ಶರೀರ ನಿಷ್ಕ್ರಿಯವಾಗುತ್ತದೆ.ಆ ಚೈತನ್ಯವೇ
ಆತ್ಮ.ಆತ್ಮ ಹೊರಟನಂತರ ಶರೀರ ಜಡವಾಗುತ್ತದೆ.ಮರಣಾನಂತರದ ಸಂಸ್ಕಾರ ಶರೀರಕ್ಕೇ ಹೊರತು ಆತ್ಮಕ್ಕಲ್ಲ..!!ಶರೀರದಿಂದ
ನಿವೃತ್ತಿಯಾದ ಆತ್ಮ ಇನ್ನೊಂದು ಶರೀರವನ್ನು ಧರಿಸುತ್ತದೆ.
ಹಲವು ಜನರಲ್ಲಿ
ಯಾವನೋ ಒಬ್ಬ ಮಹಾಪುರುಷ ಈ ಆತ್ಮವನ್ನು ಆಶ್ಚರ್ಯದಂತೇ ನೋಡುತ್ತಾನೆ. ಇನ್ನೊಬ್ಬ ಮಹಾಪುರುಷ
ಆತ್ಮತತ್ವವನ್ನು ಆಶ್ಚರ್ಯದಂತೇ ವರ್ಣಿಸುತ್ತಾನೆ.ಯಾವನೋ ಒಬ್ಬ ಅಧಿಕಾರಿ ಪುರುಷ ಇದನ್ನು
ಆಶ್ಚರ್ಯದಿಂದ ಕೇಳುತ್ತಾನೆ.ಇನ್ನು ಹಲವರು ಆತ್ಮತತ್ವವನ್ನು ಕೇಳಿಯೂ ಕೂಡ ಇದನ್ನು
ಅರಿಯಲಾರರು.ಆತ್ಮತತ್ವವನ್ನು ಅರಿಯಲು ಪ್ರಯತ್ನಿಸುವವರು ವಿರಳಾತಿವಿರಳ.ಶರೀರದಲ್ಲೇ ನೆಲೆಸಿರುವ
ಆತ್ಮವನ್ನು ಅರಿಯುವ ಗೊಡವೆಗೆ ಯಾರೂ ಹೋಗಲಾರರು.ನಮ್ಮೊಳಗಿನ ಆತ್ಮಕ್ಕೆ ಬೆಲೆಯನ್ನು
ನೀಡಲಾರರು.ನಾವು ಸದಾ ಮನದ ಮಾತಿಗೆ ಮಹತ್ವ ನೀಡುತ್ತೇವೆಯೇ ಹೊರತು ಅಂತರಾಳದ ಮಾತಿಗಲ್ಲ.ಶರೀರದಲ್ಲಿರುವ
ಅಂತರಾಳ ಅಥವಾ ಆತ್ಮ ವಿವೇಕವನ್ನು ಜಾಗೃತಗೊಳಿಸುತ್ತಿರುತ್ತದೆ.ಪಾಪಕಾರ್ಯಗಳನ್ನು ಮಾಡುವಾಗ
ತಪ್ಪೆಂದು ಎಚ್ಚರಿಸುತ್ತದೆ.ತಪ್ಪಿಗೆ ಪ್ರಾಯಶ್ಚಿತ್ತದ ದಾರಿಯನ್ನು ಹುಡುಕುತ್ತಿರುತ್ತದೆ.ಆದರೆ
ಮನಸ್ಸಿನ ಮಾತು ಹಾಗಲ್ಲ,ಅದು ಚಂಚಲ ಹಾಗೂ ವಿವೇಕಶೂನ್ಯವಾಗಿರುತ್ತದೆ.ಪ್ರತಿಯೊಂದು ಕಾರ್ಯವನ್ನು
ಮಾಡುವಾಗ ನಾವು ಮನಸ್ಸಿನ ಮಾತಿಗೆ ಮಹತ್ವ ಕೊಡದೇ ಅಂತರಾಳದ ಮಾತಿಗೆ ಮಹತ್ವವನ್ನು ನೀಡಿದರೆ ಬಾಳು
ಬಂಗಾರವಾಗುತ್ತದೆ.ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ಸಿಗುತ್ತದೆ.
ಅದ್ವೈತ ಸಿದ್ಧಾಂತದ
ಪ್ರಕಾರ ಆತ್ಮ ಹಾಗೂ ಪರಮಾತ್ಮರು ಒಂದೇ.ಜೀವಾತ್ಮ ಹಾಗೂ ಪರಮಾತ್ಮನಿಗೆ ಅಬೇಧವನ್ನು ತಿಳಿಸಲಾಗಿದೆ.
”ತತ್ವಮಸಿ” ಅಂದರೇ “ಅದೇ ನೀನು”.ಆತ್ಮ ಪರಮಾತ್ಮರ ಸಂಬಂಧ ಸಮುದ್ರ ಮತ್ತು ಅಲೆಗಳ
ಸಂಬಂಧವಿದ್ದಂತೇ.ಇಡೀ ಸಾಗರವೇ ಪರಮಾತ್ಮನಾದರೆ,ಅದರಲ್ಲಿ ಹುಟ್ಟಿ,ಸಾಯುವ ಅಲೆಗಳು ಜೀವಾತ್ಮರು.
“ಉದ್ಧರೇದಾತ್ಮನಾತ್ಮಾನಂ
ನಾತ್ಮಾನಮವಸಾದಯೇತ್ |
ಆತ್ಮೈವ ಹ್ಯಾತ್ಮನೋ
ಬಂಧುಃ ಆತ್ಮೈವರಿಪುರಾತ್ಮನಃ ||”
ಮನುಷ್ಯ ತನ್ನಿಂದಲೇ
ತನ್ನನ್ನು ಸಂಸಾರಸಾಗರದಿಂದ ಉದ್ಧರಿಸಿಕೊಳ್ಳಬೇಕು.ತನ್ನಿಂದಲೇ ಅಧೋಗತಿಗೆ ಸಾಗಬಾರದು.ಏಕೆಂದರೆ
ಮನುಷ್ಯ ತನಗೆ ತಾನೇ ಮಿತ್ರ,ತನಗೆ ತಾನೇ ಶತ್ರುವೂ ಆಗಿದ್ದಾನೆ.
ನಮ್ಮಲ್ಲಿರುವ
ಆತ್ಮವನ್ನು ಅರಿತಾಗ ನಮಗೆ ಸಂಸಾರಸಾಗರದಿಂದ ವಿಮುಕ್ತ ಸಿಗುತ್ತದೆ.ಆತ್ಮತತ್ವವನ್ನು ಅರಿಯದೇ
ಬಾಳಿದಾಗ ಬದುಕು ವ್ಯರ್ಥವಾಗುತ್ತದೆ.ಮನುಷ್ಯ ಜೀವನದ ಉದ್ದೇಶವೇ ಪರಮಾನಂದವನ್ನು
ಪಡೆಯುವುದು.ಪರಮಾನಂದವೆಂದರೆ ಮಸ್ತಿ-ಮೋಜಲ್ಲ.ಆತ್ಮತತ್ವವನ್ನು ಅರಿಯುವುದೇ ಪರಮಾನಂದ.ಆ ಪರಮಾನಂದ
ನಮ್ಮೊಳಗಿದೆ.ಉಪನಿಷತ್ತುಗಳ ಪ್ರಕಾರ”ನಮ್ಮ ಆತ್ಮವೇ ಪರಮಾನಂದ.ಅದಿರುವುದು ನಮ್ಮಲ್ಲೇ.ಅದನ್ನು
ಅರಿತುಕೊಳ್ಳಬೇಕು”.ಆ ಪರಮಾನಂದವನ್ನು ಅನ್ವೇಷಿಸುವ ಪ್ರಾಮಾಣಿಕ ಪ್ರಯತ್ನ ನಮ್ಮದಾಗಿರಲಿ.
“ಸರ್ವೇ ಭವಂತು
ಸುಖಿನಃ”
No comments:
Post a Comment