Sunday, 26 May 2024

ಆಧ್ಯಾತ್ಮದತ್ತ ಪಯಣ..


 

ಸರ್, ಆಧ್ಯಾತ್ಮದ ಕುರಿತಾದ ನಿಮ್ಮ ಲೇಖನಗಳು ತುಂಬಾ ಸರಳವಾಗಿರುತ್ತದೆ, ನಮ್ಮಂತಹ ಪಾಮರರಿಗೂ ಅರ್ಥವಾಗುವಂತೇ ಬರೆಯುತ್ತಿದ್ದೀರಿ ಎಂದು ಪ್ರತಿಕ್ರಿಯೆಗಳು ಬರುತ್ತಿವೆ. ನಿಜವಾಗಿಯೂ ಬಹಳ ಸಂತಸದ ವಿಷಯ. ಆಧ್ಯಾತ್ಮವೆಂದರೆ ಅರ್ಥವಾಗದಷ್ಟು ಕಬ್ಬಿಣದ ಕಡಲೆಯಲ್ಲ. ಆಧ್ಯಾತ್ಮದತ್ತ ಸಾಗಲು ಪಂಡಿತ, ಪಾಮರರೆಂಬ ಬೇಧವೂ ಇಲ್ಲ. ಆಧ್ಯಾತ್ಮವೆಂದರೆ  ನಮ್ಮನ್ನು ನಾವು ಅರಿತುಕೊಳ್ಳುವ ಪ್ರಯತ್ನವಷ್ಟೇ..!! ಯಾವಾಗ ನಮ್ಮನ್ನು ನಾವು ಅರಿತುಕೊಳ್ಳಲು ಯತ್ನಿಸುತ್ತೇವೆ, ಅಲ್ಲಿಂದಲೇ ನಮ್ಮ ಆಧ್ಯಾತ್ಮ ಪಯಣ ಶುರುವಾಗುತ್ತದೆ. ಬದುಕಿನಲ್ಲಿ ಒಂದು ಹೊಸ ಅಧ್ಯಾಯ ತೆರೆಯುತ್ತದೆ. ನಾನು, ನನ್ನದೆಂಬ ಅಜ್ಞಾನ ಕ್ಷೀಣಿಸುತ್ತದೆ. ಮನಸ್ಸು ವಿಶಾಲ ಪ್ರಪಂಚದತ್ತ ಹೊರಳುತ್ತದೆ. ಪ್ರಪಂಚ ಬಹಳ ಸುಂದರವಾಗಿ ಕಾಣಿಸುತ್ತದೆ.

ಹಾಗಾಗಲು ನಮ್ಮ ಸುತ್ತಲಿರುವ ಭ್ರಮಾಪ್ರಪಂಚದಿಂದ ಹೊರಬರಬೇಕು. ಕಣ್ಣಿಗೆ ಕಾಣಿಸುತ್ತಿರುವ ಎಲ್ಲ ವಸ್ತುಗಳೂ ಒಂದು ಮಾಯೆ. ಆ ಮಾಯೆಯೊಳಗೆ ಬಂಧಿತರಾಗಿರುವ ನಾವು ಭ್ರಮೆಯ ಪ್ರಪಂಚದಲ್ಲೇ ಬದುಕುತ್ತಿದ್ದೇವೆ. ಯಾರು ಭ್ರಮಾಪ್ರಪಂಚದಿಂದ ಹೊರಬರುತ್ತಾರೋ ಅವರಿಗೆ ಸುಂದರ ಪ್ರಪಂಚದ ಅರಿವಾಗುತ್ತದೆ. ಆ ಭ್ರಮೆಯಿಂದ ಹೊರಬರುವುದಾದರೂ ಹೇಗೆ..? ಗೀತೆಯಲ್ಲಿ ಭಗವಂತನೇ ಪರಿಹಾರ ತಿಳಿಸಿದ್ದಾನೆ “ ಮಯ್ಯೇವ ಮನ ಆಧತ್ಸ್ವ, ಮಯಿ ಬುದ್ಧಿಂ ನಿವೇಶಯ, ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯಃ” ಭ್ರಮೆಯ ಪ್ರಪಂಚದಿಂದ ಹೊರಬರಬೇಕೆಂದರೆ, ನಮ್ಮ ಮನಸ್ಸು ಹಾಗೂ ಬುದ್ಧಿ ಭಗವಂತನಲ್ಲಿ ಲೀನವಾಗಬೇಕು. ಆಗ ನಾವು ಭಗವಂತನ ಅಸ್ತಿತ್ವವನ್ನು ಅರಿಯಬಹುದು.

ಮನಸ್ಸು ಹಾಗೂ ಬುದ್ಧಿಯನ್ನು ಭಗವಂತನಲ್ಲಿ ಲೀನಗೊಳಿಸುವುದಾದರೂ ಹೇಗೆ..? ಆಧುನಿಕತೆಯ ಬದುಕಿನಲ್ಲಿ ನಮ್ಮ ಮನಸ್ಸು ಸಂಪಾದನೆಯಲ್ಲಿದೆ, ಬುದ್ಧಿ ಚಪಲವಾಗಿದೆ. ಅವುಗಳನ್ನು ಪರಮಾತ್ಮನಲ್ಲಿ ಹೇಗೆ ವಿಲೀನಗೊಳಿಸುವುದು..? ಬದುಕಿಗೆ ಆಸರೆಯಾಗಿರುವ ಸಂಪಾದನೆಯನ್ನು ಬಿಟ್ಟು ಆಶ್ರಮ ಸೇರುವುದೇ..? ಅದೂ ಕೂಡ ಸರಿಯಾದ ಮಾರ್ಗವಲ್ಲ. “ಕುರು ಕರ್ಮೈವ ತಸ್ಮಾತ್ವಂ” ಕರ್ಮದಿಂದ ವಿಮುಖನಾಗುವುದು ಸಹ ಶ್ರೇಯಸ್ಸಲ್ಲ. ಆದರೆ ಕರ್ಮವನ್ನು ಮಾಡುತ್ತಲೇ ಮನಸ್ಸನ್ನು ಪರಮಾತ್ಮನಲ್ಲಿ ಲೀನಗೊಳಿಸಬೇಕು.

ಆಕಾಶದಿಂದ ಎಷ್ಟೇ ಮಳೆ ಸುರಿಯಲಿ, ಅದರ ಒಂದು ಹನಿಯೂ ಕಮಲಪತ್ರಕ್ಕೆ ಅಂಟುವುದಿಲ್ಲ. ನಮ್ಮ ಸ್ಥಿತಿಯೂ ಹಾಗಿರಬೇಕು..!! ಕರ್ಮ ನಮ್ಮದು ಕರ್ಮಫಲ ಪರಮಾತ್ಮನದ್ದು ಎಂಬ ಭಾವನೆ ನಮ್ಮಲ್ಲಿರಬೇಕು. ಲಾಭ-ನಷ್ಟ, ಜಯ-ಸೋಲು ಯಾವುದಕ್ಕೂ ಅಂಟಿಕೊಂಡಿರಬಾರದು. ಸುಖ, ದುಃಖಗಳನ್ನು ಸಮಭಾವದಿಂದ ಸ್ವೀಕರಿಸಬೇಕು. “ದೇವನೊಬ್ಬನಿರುವ ಅವನೆಲ್ಲ ನೋಡುತಿರುವ’ ಎಂದು ಎಲ್ಲ ಆಗುಹೋಗುಗಳನ್ನು ಆತನಿಗೆ ಅರ್ಪಿಸಬೇಕು. ಸಾಧು-ಸಂತರ ಜೊತೆ ಗೆಳೆತನ ಬೆಳೆಸಬೇಕು. ಶ್ರೀ ಶಂಕರ ಭಗವತ್ಪಾದರು ಹೇಳಿದಂತೇ,

ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಮ್|
ನಿರ್ಮೋಹತ್ವೇ ನಿಶ್ಚಲತತ್ತ್ವಂ
ನಿಶ್ಚಲತತ್ತ್ವೇ ಜೀವನ್ಮುಕ್ತಿಃ ||

ಸಜ್ಜನರ ಸಂಪರ್ಕದಲ್ಲಿದ್ದರೆ ಧನಾದಿ ವಿಷಯಗಳ ಚಿಂತೆ ತಪ್ಪುತ್ತದೆ.
 ಚಿಂತೆ ಹೋದಾಗ ಅವುಗಳ ಮೋಹವೂ ಹೋಗುತ್ತದೆ.
ಅಜ್ಞಾನದಿಂದಾದ ಮೋಹವು ಹೋದರೆ ಶಾಶ್ವತವಾದ ಸತ್ಯವೇನೆಂಬುದರ ಜ್ಞಾನವಾಗುತ್ತದೆ.
ಅಂತಹ ಜ್ಞಾನ ಉದಿಸಿದರೆ ಜೀವನ್ಮುಕ್ತಿಯೇ
ಪ್ರಾಪ್ತಿಯಾಗುತ್ತದೆ.

ಯಾವಾಗ ಮನಸ್ಸು ಹಾಗೂ ಬುದ್ಧಿ ಸ್ಥಿರವಾಗುತ್ತದೆಯೋ ಮನಸ್ಸಿನಲ್ಲಿ ಏಕಾಗ್ರತೆ ಮೂಡುತ್ತದೆ, ಏಕಾಗ್ರತೆಯಿಂದ ಮನಸ್ಸಿನ ಚಾಂಚಲ್ಯ ದೂರವಾಗುತ್ತದೆ. ಮನೋಚಾಂಚಲ್ಯ ದೂರವಾದಾಗ ಶಾಂತಿ ಲಭಿಸುತ್ತದೆ. ಶಾಂತಿಯಿಂದ ಭಕ್ತಿ ಸಾಧ್ಯವಾಗುತ್ತದೆ. ಭಕ್ತಿಯಿಂದ ಪರಮಾತ್ಮನ ಅಸ್ತಿತ್ವದ ಅರಿವಾಗುತ್ತದೆ. ಪರಮಾತ್ಮನ ಅಸ್ತಿತ್ವ ಅರಿವಾದಾಗ ಮನಸ್ಸು ಆಧ್ಯಾತ್ಮದತ್ತ ಸಾಗುತ್ತದೆ. ಆಧ್ಯಾತ್ಮದಿಂದ ಕಾಮ,ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳ ನಿವಾರಣೆಯಾಗುತ್ತದೆ.

 

“ಲೋಕಾಃ ಸಮಸ್ತಾಃ ಸುಖಿನೋ ಭವಂತು”

Thursday, 16 May 2024

ಮಾನವ ಜನ್ಮ ದೊಡ್ಡದು...

ಬದುಕಿನ ಕೆಲವು ಕಟು ಸತ್ಯಗಳನ್ನು ಮರೆತು ವರ್ತಮಾನದ ಕ್ಷಣಗಳನ್ನು ಅನುಭವಿಸುತ್ತೇವೆ. ಆದರೆ ವರ್ತಮಾನದ ನೆನಪಲ್ಲಿ ಭವಿಷ್ಯವನ್ನು, ಬದುಕಿನ ಉದ್ದೇಶವನ್ನು ಮರೆಯುವುದು ಮೂರ್ಖತನ. “ಜಂತೂನಾಂ ನರಜನ್ಮ ದುರ್ಲಭಮ್” ನಮ್ಮ ನಂಬಿಕೆಯ ಪ್ರಕಾರ ಹಲವಾರು ಜನ್ಮಗಳ ಪುಣ್ಯದ ಫಲದಿಂದ ಈ ಮನುಷ್ಯ ಜನ್ಮ ಸಿಕ್ಕಿದೆ. ಮನುಷ್ಯ ಜನ್ಮದ ಉದ್ದೇಶ ಕೇವಲ ಮಜಾ, ಮಸ್ತಿ ಆಗಿರಬಾರದು. “ಮಾನವ ಜನ್ಮ ದೊಡ್ಡದು ಅದ ಹಾಳ ಮಾಡಿಕೊಳ್ಳದಿರಿ ಹುಚ್ಚಪ್ಪಗಳಿರಾ” ಎಂಬ ದಾಸವಾಣಿ ಪ್ರಸ್ತುತ. ಆಹಾರ, ನಿದ್ರೆ, ಭಯ, ಮೈಥುನಗಳಲ್ಲಿ ಮನುಷ್ಯ ಎಲ್ಲಾ ಪ್ರಾಣಿಗಳಿಗೂ ಸರಿಸಮಾನ. ಆದರೆ ಮನುಷ್ಯ ಎಲ್ಲ ಪ್ರಾಣಿಗಳಿಗಿಂತಲೂ ಶ್ರೇಷ್ಟ . ಏಕೆಂದರೆ “ಜ್ಞಾನಂ ತು ತೇಷಾಮಧಿಕೋ ವಿಶೇಷಃ” ಮನುಷ್ಯನಲ್ಲಿರುವ ಜ್ಞಾನಶಕ್ತಿಯಿಂದ ಆತ ಎಲ್ಲಾ ಪ್ರಾಣಿಗಳಿಗಿಂತಲೂ ಮಿಗಿಲು. ಆದರೆ ಆ ಜ್ಞಾನ ಶಕ್ತಿಯನ್ನು ಮರೆತು ಮನುಷ್ಯ ಮೃಗಗಳಂತೇ ಆಹಾರ, ನಿದ್ರೆ, ಭಯ, ಮೈಥುನದಲ್ಲೇ ವ್ಯಸ್ತನಾದರೆ, ಮನುಷ್ಯ ಜನ್ಮಕ್ಕೇನು ಫಲ...?

ವರ್ತಮಾನದ ಪರಿಸ್ಥಿತಿ ಹೀಗೆ ಸಾಗುತ್ತಿದೆ. ಹುಟ್ಟಿದ ಮಗುವಿಗೆ ಸಂಸ್ಕಾರ ಕಲಿಸಲು, ಮಗುವಿನ ಜೊತೆ ಸಮಯ ಕಳೆಯಲು ಪೋಷಕರಿಗೆ ಪುರುಸೊತ್ತಿಲ್ಲ. “ವರ್ಕಿಂಗ್ ಪೇರೆಂಟ್” ಎಂಬ ಹಣೆಬರಹ. ಮಗುವಿನ ಜೊತೆ ಸಮಯ ಕಳೆಯಲಾರದ ಪೋಷಕರಿಗೆ ಜೀವನದಲ್ಲಿ ಹಣ ಮಾಡುವ ಚಪಲ. ಅಂಬೆಗಾಲಿಕ್ಕುವ ಮೊದಲೇ ಮಗುವನ್ನು ಡೇ ಕೇರಿಗೆ ಸೇರುಸುವ ತರಾತುರಿ. ಅಲ್ಲಿಗೆ ಮಕ್ಕಳಿಗೆ ಸಿಗುವ ಪೋಷಕರ ಪ್ರೀತಿ, ಮಕ್ಕಳ ಅಮೂಲ್ಯ ಬಾಲ್ಯಜೀವನ ಖತಮ್..!! ಮಹಾಭಾರತ, ರಾಮಾಯಣ, ಪಂಚತಂತ್ರದ ಬದಲು “ಜಾನಿ ಜಾನಿ ಯೆಸ್ ಪಾಪಾ” ಶುರು..! ಎಲ್ಲವನ್ನೂ ಮಾಡುವುದು ಮಕ್ಕಳಿಗಾಗಿ, ಹೋಗುವಾಗ ಗಂಟು ತೆಗೆದುಕೊಂಡು ಹೋಗುತ್ತೇವಾ ? ಎಂಬ ಭಾಷಣ ಬೇರೆ. ಅಲ್ಲ, ಮಕ್ಕಳೇನು ಗಂಟು ಮಾಡಿಡಿ ಎಂದು ಕೇಳಿದ್ದವಾ..? ಅವರ ಅಮೂಲ್ಯ ಬಾಲ್ಯದ ಕ್ಷಣಗಳನ್ನೇ ಹಾಳು ಮಾಡಿದ ಮೇಲೆ ಯಾವ ಗಂಟಿಗೇನು ಫಲ...?

ಸ್ವಲ್ಪ ಸಮಯದ ನಂತರ ಯಾವ ಸ್ಕೂಲ್ ಎಂಬ ಹುಡುಕಾಟ. ಗೂಗಲ್ಲಿನಲ್ಲಿ ೫ ಸ್ಟಾರ್ ಇರುವ, ಇಂಗ್ಲೀಷ್ ಮೀಡಿಯಮ್ ಸ್ಕೂಲೇ ಆಗಬೇಕು. ಅಲ್ಲೇನು ಭಾರತೀಯ ಸಂಸ್ಕೃತಿ ಲೆಕ್ಕಾಚಾರಕ್ಕಿಲ್ಲ ಆಧುನಿಕತೆಯ ಶಿಕ್ಷಣ. ಮಾತೆತ್ತಿದರೆ ಇಂಗ್ಲೀಷಿನಲ್ಲಿ ಟುಸ್ ಪುಸ್..! ಭಾರತೀಯ ಸಂಸ್ಕೃತಿಯ ಶಿಕ್ಷಣವಿಲ್ಲ, ಸಂಸ್ಕೃತವಿಲ್ಲ, ಯೋಗ, ಶಾಸ್ತ್ರಗಳಿಲ್ಲ. ಶಿಕ್ಷಣದ ಉದ್ದೇಶ ಒಂದೇ, ದೊಡ್ಡ ನೌಕರಿಗೆ ಹೋಗುವುದು, ಹಣ ಸಂಪಾದಿಸುವುದು, ಐಷಾರಾಮಿ ಜೀವನ ಸಾಗಿಸುವುದು..!!

ಅಂತೂ ನೌಕರಿಗೂ ಸೇರಾಯಿತು, ಇಲ್ಲಾದರೂ ಮಾನವ ಜೀವನದ ಲಕ್ಷ್ಯ ನೆನಪಿಗೆ ಬಂದೀತೆ...? ಖಂಡಿತ ಇಲ್ಲ. ಟಾರ್ಗೆಟ್ಟುಗಳು, ಮೀಟಿಂಗುಗಳು, ಪ್ರಮೋಷನ್ನುಗಳು, ಅದೂ ಬೇರೆಯದೇ ಲೋಕ..!! ಆಧುನಿಕ ಜೀವನದಲ್ಲಿ ಬಾಲ್ಯ ಹಾಳಾಯಿತು, ಶಿಕ್ಷಣ ಹಳಿ ತಪ್ಪಿತು, ಯೌವನ ಬರಿದಾಯಿತು. ಇನ್ನೇನು ಎಲ್ಲವೂ ಮುಗಿಯಿತು ಎನ್ನುವದರಲ್ಲಿ ಹಲವರಿಗೆ “ಜೀವನದಲ್ಲಿ ಎನೋ ಮಿಸ್ಸಾಗಿದೆ” ಎಂಬ ಅರಿವಾಗುತ್ತದೆ. ಅದರ ಅನ್ವೇಷಣೆ ನಡೆಯುತ್ತದೆ..! ಅಲ್ಲಿಗೆ ಜೀವನದ ಮುಕ್ಕಾಲು ಪರ್ಸೆಂಟ್ ಆಯುಷ್ಯ ಬರಿದಾಗಿರುತ್ತದೆ.

ಜೀವನವೆಂದರೆ ಕೇವಲ ಹಣ ಮಾಡುವುದಲ್ಲ. ನಮ್ಮನ್ನು ನಾವು ಅರಿಯುವ ಪ್ರಯತ್ನ. ಅಜ್ಞಾನದಿಂದ ಬೆಳಕಿನ ಕಡೆ ಸಾಗುವ ಪ್ರಯತ್ನ. ನಮ್ಮಲ್ಲಿರುವ “ನಾನು” ಎಂಬ ಅದಮ್ಯ ಭಾವನೆಯಿಂದ “ನನ್ನದೇನೂ ಇಲ್ಲ” ಎಂಬುದರ ಕಡೆ ಸಾಗುವ ಪ್ರಯತ್ನ. ಆತ್ಮತತ್ವಜ್ಞಾನವನ್ನು ಅರಿಯುವ ಪ್ರಯತ್ನ. ಈ ಯಾವ ಪ್ರಯತ್ನಗಳನ್ನೂ ಸಾಧಿಸದೇ ಕೇವಲ ಸಂಸಾರ ತಾಪತ್ರಯದಲ್ಲೇ ಮುಳುಗಿದರೆ ಬದುಕಿನ ಉದ್ದೇಶ ಹೇಗೆ ನೆರವೇರಬಹುದು..?

“ವೃದ್ಧೋ ಯಾತಿ ಗೃಹೀತ್ವಾ ದಂಡಂ ತದಪಿ ನ ಮುಂಚತ್ಯಾಶಾ ಪಿಂಡಮ್” ವಯಸ್ಸಾಗಿ ಕೋಲು ಹಿಡಿದು ನಡೆಯುತ್ತಿದ್ದರೂ ಆಸೆಯೆಂಬ ಪಿಂಡ ಮನುಷ್ಯನನ್ನು ಬಿಡುವುದಿಲ್ಲವಂತೆ. ಅದಕ್ಕೆ ಅನೇಕ ರಾಜಕಾರಣಿಗಳು ಸಾಕ್ಷಿ. ಕರ್ತವ್ಯ ಕರ್ಮಗಳನ್ನು ಮರೆಯಬಾರದೆಂದು ಭಗವಂತನೇ ಗೀತೆಯಲ್ಲಿ ಹೇಳಿದ್ದಾನೆ. ಆದರೆ ಕರ್ಮಗಳನ್ನೇ ಸದಾ ಕರ್ತವ್ಯಗಳನ್ನಾಗಿ ಮಾಡಿಕೊಂಡರೆ, ವೈರಾಗ್ಯ ಬರುವುದು ಯಾವಾಗ ? ಹಿಂದಿನ ಕಾಲದಲ್ಲಿ ಮಕ್ಕಳನ್ನು ಅಧಿಕಾರಕ್ಕೆ ನಿಯೋಜಿಸಿ ವಯಸ್ಸಾದ ರಾಜರು ವಾನಪ್ರಸ್ಥಾಶ್ರಮಕ್ಕೆ ತೆರಳುತ್ತಿದ್ದರು. ಈಗಿನವರಲ್ಲಿ ವಯಸ್ಸಾದರೂ ಅಧಿಕಾರದ ವ್ಯಾಮೋಹ ಕಡಿಮೆಯಗುತ್ತಿಲ್ಲವಲ್ಲ, ಕಲಿಯುಗದ ಪ್ರಭಾವವೂ ಇರಬಹುದು. 

ಆಧುನಿಕತೆಯ ಹೆಸರಲ್ಲಿ ಜೀವನದ ಉದ್ದೇಶ ಮರೆಯುವುದು ಮೂರ್ಖತನ. ಬದುಕೆಂದರೆ ಸುದೀರ್ಘವಲ್ಲ, ನಾಳೆಯ ಭರವಸೆಯಿಲ್ಲ. ನಾನು, ನನ್ನದು ಎಂದು ಮೆರೆದ ಅದೆಷ್ಟೋ ಜನ ಕಾಲದ ಹೊಡೆತಕ್ಕೆ ಮಣ್ಣಾಗಿ ಹೇಳ ಹೆಸರಿಲ್ಲದೇ ಹೋದರು. ಆಸೆಯ ಮತ್ತು ಹೆಚ್ಚಾದರೆ, ಸ್ಮಶಾನಕ್ಕೆ ಸಾಗುವ ಹೆಣಗಳನ್ನೊಮ್ಮೆ ನೋಡಬೇಕು. ಭವಿಷ್ಯದಲ್ಲಿ ನನ್ನ ಪರಿಸ್ಥಿತಿಯೂ ಅದೇ ಎಂದು ನೆನಪಿಟ್ಟುಕೊಳ್ಳಬೇಕು. ಈ ಪ್ರಪಂಚದಲ್ಲಿ ಎಲ್ಲವೂ ಅಸ್ಥಿರ ಎಂಬ ಭಾವನೆ ಮೂಡಬೇಕು. ಸದಾ ಭಗವಂತನ ನಾಮ ಸ್ಮರಣೆ, ಧರ್ಮಾಚರಣೆ ಮಾನವ ಜೀವನದ ಉದ್ದೇಶವೆಂದು ಅರಿಯಬೇಕು. “ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ” ಎಂಬ ನೀತಿ ಅನುಸರಿಸಬೇಕು. ಆಗಲೇ ಮನುಷ್ಯ ಜೀವನ, ಪ್ರಾಣಿಗಳ ಜೀವನಕ್ಕಿಂತಲೂ ವಿಭಿನ್ನವೆಂಬುದು ಸತ್ಯವಾದೀತು.


“ಲೋಕಾಃ ಸಮಸ್ತಾಃ ಸುಖಿನೋ ಭವಂತು”

 

Saturday, 6 April 2024

ಮನ ಏವ ಮನುಷ್ಯಾಣಾಮ್...

 ಬರೆಯಬೇಕೆಂಬ ಆಸೆ ಸಾವಿರದಷ್ಟಿದೆ, ಆದರೆ ಸಿಗುವ ಸಮಯ ಬಹಳ ಕಡಿಮೆ...!! ಆಗಾಗ ಫೇಸ್ಬುಕ್ ಕಡೆ ಬಂದು ನಾಲ್ಕಾರು ಲೈನ್ ಗೀಚುವುದೇ ಹೆಚ್ಚು. ಬರಹ ದೀರ್ಘವಾದರೆ ಓದುವವರಿಗೂ ತಾಳ್ಮೆಯಿಲ್ಲ. ಎಲ್ಲರದೂ ಧಾವಂತದ ಬದುಕು, ಟಾರ್ಗೆಟ್ಟು, ಡೆಡ್ ಲೈನುಗಳ ಮಧ್ಯದಲ್ಲಿ ಬದುಕಲು ಸಮಯವಿಲ್ಲದಾಗಿದೆ. ಜನರ ತಾಳ್ಮೆಯೂ ಕಡಿಮೆಯಾಗಿದೆ. ಜೀವನ ಒಂಥರಾ ರೀಲ್ಸ್ ರೀತಿಯಾಗಿದೆ..!! ಎಲ್ಲವೂ ಜಟ್ ಪಟ್ ಎಂದಾಗಬೇಕು, ಫಾಸ್ಟ್ ಫುಡ್ ತರ..!! 

ತೀರ ೨೦೦೦ ಇಸ್ವಿಯವರೆಗೂ ಕಾಲ ಈ ರೀತಿಯಿರಲಿಲ್ಲ. ಆಗಿನ್ನೂ ಮೊಬೈಲ್, ಇಂಟರ್ನೆಟ್ ಯುಗ ಜಸ್ಟ್ ಸ್ಟಾರ್ಟ್ ಆಗಿತ್ತು. ಆದರೆ ಜನರು ಅಡಿಕ್ಟ್ ಆಗಿರಲಿಲ್ಲ. ಮದುವೆ, ಮುಂಜಿ ಮುಂತಾದ ಸಮಾರಂಭಗಳಲ್ಲಿ ಮಾತಿಗೆ ಬರವಿರಲಿಲ್ಲ. ನಾಲ್ಕು ಜನ ಸೇರಿದರೆ ಆತ್ಮೀಯತೆ ಇರುತ್ತಿತ್ತು. ಕಷ್ಟ-ಸುಖಗಳ ವಿನಿಮಯವಿರುತ್ತಿತ್ತು, ಭಾವನೆ, ಸಂಬಂಧಗಳ ಹಂದರವಿತ್ತು. ಬಾಯಿಗೆ ಕೆಲಸವಿತ್ತು, ಬೆರಳುಗಳಿಗೆ ವಿಶ್ರಾಂತಿಯಿತ್ತು. ತಮ್ಮವರನ್ನು ಗುರುತಿಸುವ ಮುಗುಳ್ನಗೆಯಿತ್ತು. ಕಾರ್ಯಕ್ರಮಗಳಲ್ಲಿ ಹೆಂಗಳೆಯರು ಹಾಡುವ ಸುಂದರ ಧ್ವನಿಯಿತ್ತು. ಪುರೋಹಿತರ ಗಡುಸಾದ ಮಂತ್ರಘೋಷವಿತ್ತು. ಎಲ್ಲರಿಗೂ ಸಹನೆಯಿತ್ತು, ಸಂಬಂಧದ ಪರಿಕಲ್ಪನೆಯಿತ್ತು, ಹೇಗೆ ವರ್ತಿಸಬೇಕೆಂಬ ಪರಿಜ್ಞಾನವೂ ಇತ್ತು..!! ಫೋನ್ ಎಂದರೆ ಎಮರ್ಜೆನ್ಸಿ ಸ್ಥಿತಿಯಲ್ಲಿ ಮಾತನಾಡಲು ಬಳಸುವ ಮಾಧ್ಯಮ ಎಂಬುದಾಗಿತ್ತು. 

ಆಮೇಲೆ ಚಿತ್ರ-ವಿಚಿತ್ರ ಸ್ಮಾರ್ಟ್ ಫೋನುಗಳು ಬಂದವು. ನಗರಗಳಲ್ಲಷ್ಟೇ ಅಲ್ಲ, ಹಳ್ಳಿಹಳ್ಳಿಗಳಲ್ಲಿ ಇಂಟರ್ನೆಟ್ ಸೇವೆಗಳು ಆರಂಭವಾದವು. ಜನರ ಕೈಯ್ಯಲ್ಲಿದ್ದ ಸಾಮಾನ್ಯ ಫೋನುಗಳು ದೂರವಾಗಿ ಸ್ಮಾರ್ಟ್ ಫೋನುಗಳು ಬಂದವು. ಅದರಲ್ಲಿ ಫೇಸ್ಬುಕ್, ವಾಟ್ಸ್ ಆಪ್, ಇನ್ಸ್ಟಾಗ್ರಾಂ ಅಪ್ಲಿಕೇಶನ್ನುಗಳು ಡೌನ್ ಲೋಡ್ ಆದವು. ಯಾವ ಮಾಹಿತಿಯಿರಲಿ, ಮ್ಯೂಸಿಕ್ ಇರಲಿ, ಡಾನ್ಸ್ ಇರಲಿ ಬೆರಳ ತುದಿಯಲ್ಲಿ ಸಿಗಲಾರಂಭಿಸಿದವು. ಬ್ಯಾಂಕಿಂಗ್ ಕೆಲಸಗಳು ಸರಳವಾದವು, ಆನ್ಲೈನ್ ವಹಿವಾಟುಗಳು ಹೆಚ್ಚಾದವು, ಕೆಲವು ಸರ್ಕಾರಿ ಕೆಲಸಗಳಲ್ಲಿ ಪಾರದರ್ಶಕತೆಯೂ ಬಂತು. ಈ ಬದಲಾವಣೆ ಆಗದಿದ್ದರೆ ನಾವಿಂದು ಬಸ್ ಟಿಕೇಟುಗಳಿಗೆ, ರೈಲ್ವೇ ಟಿಕೇಟುಗಳಿಗೆ ನಾಲ್ಕಾರು ಘಂಟೆ ಲೈನಿನಲ್ಲಿ ನಿಲ್ಲಬೇಕಿತ್ತು,  ಆ ಅನುಭವವೂ ಆಗಿದೆ..!! ಸ್ಮಾರ್ಟ್ ಫೋನುಗಳು ಅದೆಷ್ಟೋ ಕೆಲಸಗಳನ್ನು ಹಗುರಾಗಿಸಿದವು, ಖಂಡಿತ ಒಪ್ಪಲೇಬೇಕು.  ಬದಲಾವಣೆ ಜಗದ ನಿಯಮ, ಆ ಬದಲಾವಣೆಯನ್ನು ಒಳ್ಳೆಯದನ್ನಾಗಿ ಪರಿವರ್ತಿಸಿಕೊಳ್ಳುವ ಜಾಣ್ಮೆಯೂ ನಮ್ಮಲ್ಲಿರಬೇಕು..!! 

ಆದರೆ ಮಂಗನಿಂದ ಮಾನವ ಎಂಬ ಡಾರ್ವಿನ್ನನ ವಿಕಾಸವಾದ ಉಲ್ಟಾ ಹೊಡೆದು ಮಾನವನಿಂದ ಮಂಗ ಎಂಬತ್ತ ಹೊರಟಿದ್ದು ದುರದೃಷ್ಟಕರ. ಸಾಮಾಜಿಕ ಜಾಲತಾಣಗಳು ಮಾಹಿತಿ ವಿನಿಮಯಕ್ಕಿಂದ ಜಾಸ್ತಿ ಕಪಿಚೇಷ್ಟೆಗೆ ಮರುಳಾಗಿವೆ. ಕೆಲವೊಂದು ಟ್ರೋಲುಗಳು, ರೀಲ್ಸ್ ಗಳು ಎಷ್ಟು ಅಸಹನೆ ಉಂಟು ಮಾಡುತ್ತವೆ ಎಂದರೆ ಸಾಮಾಜಿಕ ಜಾಲತಾಣಗಳಿಂದ ದೂರ ಓಡಿ ಹೋಗುವಷ್ಟು...!! ರೀಲ್ಸ್, ಟ್ರೋಲುಗಳು ಇಲ್ಲದ ಜೀವನ ಯುವಜನತೆಗೆ ಸಪ್ಪೆ ಎನಿಸಲಾರಂಭಿಸಿದೆ. “ಹತ್ತಿರವಿದ್ದು ದೂರ ನಿಲ್ಲುವೆವು ನಮ್ಮ ಮೊಬೈಲುಗಳ ಸ್ಕ್ರೀನಿನಲಿ” ಎಂಬ ಪರಿಸ್ಥಿತಿಯಿದೆ..! ಸ್ಕ್ರೀನುಗಳನ್ನು ನೋಡಿ ಕಣ್ಣಿನ ಕೆಳಬದಿ ಕಪ್ಪಾಗಿದೆ, ಬೆರಳುಗಳು ಸೊಟ್ಟಗಾಗಿವೆ. ಸಭೆ, ಸಮಾರಂಭಗಳು ಫಾರ್ಮಾಲಿಟಿ ಎನಿಸಿವೆ. ಸಂಬಂಧಿಕರು ಎದುರು ಬಂದರೆ ಒಂದು ಕೃತಕ ಮುಗುಳ್ನಗೆ, ಆಮೇಲೆ ಗಮನ ಮೊಬೈಲಿನತ್ತಲೇ ಸಾಗುತ್ತದೆ. ತಲೆಯಲ್ಲಿ ದಿನದ ಟ್ರೆಂಡ್ ಏನೆಂದು ಓಡುತ್ತಿರುತ್ತದೆ, ಕಾಮೆಂಟ್ ಯಾವಾಗ ಹಾಕೋಣ ಎನಿಸುತ್ತದೆ. ಸಮಾರಂಭಗಳಲ್ಲಿ ಮಾತಿನ ಬರವಾಗಿದೆ, ಆ ಬಾಲ ವೃದ್ಧರಾದಿಯಾಗಿ ಎಲ್ಲರ ಕೈಲೂ ಮೊಬೈಲ್ ರಿಂಗಣಿಸುತ್ತಿರುತ್ತದೆ, ರೀಲ್ಸುಗಳ ಕರ್ಕಶ ಧ್ವನಿಯಿರುತ್ತದೆ. ಪುರೋಹಿತರ ಮಂತ್ರ ರೀಲ್ಸುಗಳ ಅಬ್ಬರದಲ್ಲಿ ಕ್ಷೀಣವಾಗಿರುತ್ತದೆ..! ಮಾನವ ಸಂಬಂಧಗಳಿಗಿಂತ, ಮೊಬೈಲ್ ಸಂಬಂಧಗಳ ಬೆಲೆ ಜಾಸ್ತಿಯಾಗಿದೆ.

ಸಂಸ್ಕೃತದಲ್ಲಿ ಒಂದು ಮಾತಿದೆ, “ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ” ಎಂದು. ಅರ್ಥ – ಮನುಷ್ಯನ ಮನಸ್ಸೇ ಆತನ ಬಂಧನಕ್ಕೂ, ಮೋಕ್ಷಕ್ಕೂ ಕಾರಣವಾಗುತ್ತದೆ ಎಂಬುದಾಗಿ. ಮೊಬೈಲಿನ ಅತಿಯಾದ ಬಳಕೆ ಬಂಧನಕ್ಕೆ ಕಾರಣವಾದರೆ, ಅದರ ನಿಯಮಿತ ಬಳಕೆ ಮೋಕ್ಷಕ್ಕೆ ಕಾರಣವಾಗಬಹುದು..! ರೀಲ್ಸ್, ಟ್ರೋಲುಗಳ ಹೊರತಾದ ಜೀವನ ಮನುಷ್ಯನಿಗೆ ಶಾಂತಿ ನೀಡಬಹುದು. “ಜಂತೂನಾಂ ನರಜನ್ಮ ದುರ್ಲಭಮ್” ಅದೆಷ್ಟೋ ಜನ್ಮಗಳ ಪುಣ್ಯಗಳ ಫಲವಾಗಿ ನಮಗೆ ಮಾನವ ಜನ್ಮ ಸಿಕ್ಕಿದೆ. ಹಿಂದುತ್ವದ ಪ್ರಕಾರ ನಮ್ಮ ಜನ್ಮದ ಪರಮಲಕ್ಷ್ಯ ಮೋಕ್ಷ. ಮೋಕ್ಷ ಸಾಧನೆಗೆ ಭಗವದ್ಭಕ್ತಿ, ಭಗವದ್ ಚಿಂತನೆ ಅವಶ್ಯಕ. ಕಳೆದು ಹೋದ ಕ್ಷಣ, ಎಷ್ಟು ಕೋಟಿ ಕೊಟ್ಟರೂ ಸಿಗದು. ಲೌಕಿಕ ಚಿಂತನೆಯಲ್ಲಿ, ಪಾರಮಾರ್ಥಿಕ ಲಕ್ಷವನ್ನು ಮರೆಯುವುದು ಮೂರ್ಖತನ. ಹಾಗಾಗಿ ಸಾಮಾಜಿಕ ಜಾಲತಾಣಗಳ, ರೀಲ್ಸು, ಟ್ರೋಲುಗಳ ಹೊರತಾದ ಜೀವನವನ್ನು ನೋಡುವ ಪ್ರಾಮಾಣಿಕ ಪ್ರಯತ್ನ ಮಾಡೋಣ.

“ಲೋಕಾಃ ಸಮಸ್ತಾಃ ಸುಖಿನೋ ಭವಂತು”


Saturday, 9 June 2018

ಶ್ರೀ ಆದಿ ಶಂಕರಾಚಾರ್ಯರಿಂದ ರಚಿತವಾದ ಸುಂದರ ಸ್ತೋತ್ರಮಾಲೆ ಗುರ್ವಷ್ಟಕಮ್..

ಶರೀರಂ ಸುರೂಪಂ ತಥಾ ವಾ ಕಲತ್ರಂ
ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಂ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಮ್ ತತಃ ಕಿಮ್ ತತಃ ಕಿಮ್ ತತಃ ಕಿಮ್ ||1||
(ಮನುಷ್ಯನ ಶರೀರ ಸುಂದರವಾಗಿರಬಹುದು , ಆತನ ಪತ್ನಿಯೂ  ಸುಂದರಿಯಾಗಿರಬಹುದು , ಆತನ ಯಶಸ್ಸು ನಾಲ್ಕು ದಿಕ್ಕುಗಳಲ್ಲೂ ವ್ಯಾಪಿಸಿರಬಹುದು , ಸಂಪತ್ತು ಮೇರುಪರ್ವತದಷ್ಟಿರಬಹುದು ಆದರೂ ಆತನ ಮನಸ್ಸು ಗುರುಗಳ ಚರಣಾರವಿಂದಗಳಲ್ಲಿ ಆಸಕ್ತವಾಗಿರದಿದ್ದರೆ , ಈ ವಸ್ತುಗಳಿಂದೇನು ಪ್ರಯೋಜನ...?)


ಕಲತ್ರಂ ಧನಂ ಪುತ್ರಪೌತ್ರಾದಿ ಸರ್ವಂ
ಗೃಹಂ ಬಾಂಧವಾಃ ಸರ್ವಮೇತದ್ಧಿ ಜಾತಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಮ್ ತತಃ ಕಿಮ್ ತತಃ ಕಿಮ್ ತತಃ ಕಿಮ್ ||2||
(ಹೆಂಡತಿ , ಹಣ , ಮಕ್ಕಳು , ಮೊಮ್ಮಕ್ಕಳು , ಮನೆ , ನೆಂಟರು ಇವೆಲ್ಲವೂ ಇದ್ದರೂ , ಮನುಷ್ಯನ ಮನಸ್ಸು ಗುರುಗಳ ಚರಣದಲ್ಲಿ ಆಸಕ್ತವಾಗಿರದಿದ್ದರೆ  , ಇವುಗಳಿಂದೇನು ಪ್ರಯೋಜನ...?)


ಷಡಂಗಾದಿ ವೇದೋ ಮುಖೇ ಶಾಸ್ತ್ರವಿದ್ಯಾ
ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಮ್ ತತಃ ಕಿಮ್ ತತಃ ಕಿಮ್ ತತಃ ಕಿಮ್ ||3||
(ಮನುಷ್ಯ ಷಡಂಗ , ಶಾಸ್ತ್ರಗಳನ್ನು ಕಂಠಸ್ಥ ಮಾಡಿರಲಿ , ರಮಣೀಯವಾಗಿ ಕಾವ್ಯವನ್ನು ರಚಿಸುವ ಸಾಮರ್ಥ್ಯವನ್ನೂ ಹೊಂದಿರಲಿ..ಆದರೂ ಮನುಷ್ಯನ ಮನಸ್ಸು ಗುರುಗಳ ಚರಣದಲ್ಲಿ ಆಸಕ್ತವಾಗಿರದಿದ್ದರೆ  , ಇವುಗಳಿಂದೇನು ಪ್ರಯೋಜನ...?)



ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ
ಸದಾಚಾರವೃತ್ತೇಷು ಮತ್ತೋ ನ ಚಾನ್ಯಃ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಮ್ ತತಃ ಕಿಮ್ ತತಃ ಕಿಮ್ ತತಃ ಕಿಮ್ ||4||
(ವಿದೇಶದಲ್ಲಿ ಯಾರು ಗೌರವಿಸಲ್ಪಡುತ್ತಾರೋ , ಸ್ವದೇಶದಲ್ಲಿ ಯಾರಿಗೆ ಜಯಕಾರ ಹಾಕುತ್ತಾರೋ , ಯಾರು ಸದಾಚಾರವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೋ ಆದರೂ ಅಂತವರ ಮನಸ್ಸು ಗುರುಗಳ ಚರಣದಲ್ಲಿ ಆಸಕ್ತವಾಗಿರದಿದ್ದರೆ  , ಇವುಗಳಿಂದೇನು  ಪ್ರಯೋಜನ...?)



ಕ್ಷಮಾಮಂಡಲೇ ಭೂಪಭೂಪಾಲವೃಂದೈಃ
ಸದಾ ಸೇವಿತಂ ಯಸ್ಯ ಪಾದಾರವಿಂದಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಮ್ ತತಃ ಕಿಮ್ ತತಃ ಕಿಮ್ ತತಃ ಕಿಮ್ ||5||
(ಯಾರ ವಿದ್ವತ್ತಿಗೆ ತಾಲೆಬಾಗಿ ಭೂಮಿಯಲ್ಲಿರುವ ಸಕಲ ರಾಜರೂ ಅಂತಹ ಮಹಾನುಭಾವ  ವಿದ್ವಾಂಸನ ಚರಣಕಮಲಗಳನ್ನು ಪೂಜಿಸುತ್ತಾರೋ , ಅಂತಹ ವಿದ್ವಾಂಸನ ಮನಸ್ಸೂ ಗುರುಗಳ ಚರಣದಲ್ಲಿ ಆಸಕ್ತವಾಗಿರದಿದ್ದರೆ  , ಅವನಿಂದೇನು ಪ್ರಯೋಜನ...?)



ಯಶೋ ಮೇ ಗತಂ ದಿಕ್ಷು ದಾನಪ್ರಭಾವಾತ್
ಜಗದ್ವಸ್ತು ಸರ್ವಂ ಕರೇ ಸತ್ಪ್ರಸಾದಾತ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಮ್ ತತಃ ಕಿಮ್ ತತಃ ಕಿಮ್ ತತಃ ಕಿಮ್ ||6||
(ತಾನು ಮಾಡುವ ದಾನದಿಂದ ಕೀರ್ತಿ ಸರ್ವತ್ರ ವ್ಯಾಪಕವಾಗಿದ್ದರೂ , ಗುರುಗಳ ಸಹಜ ದೃಷ್ಠಿಯಿಂದ ಸಕಲೈಶ್ವರ್ಯಗಳು ಪ್ರಾಪ್ತವಾಗಿದ್ದರೂ , ಮನುಷ್ಯರ ಮನಸ್ಸು ಗುರುಗಳ ಚರಣದಲ್ಲಿ ಆಸಕ್ತವಾಗಿರದಿದ್ದರೆ  , ಇವುಗಳಿಂದೇನು ಪ್ರಯೋಜನ...?)


ನ ಭೋಗೇ ನ ಯೋಗೇ ನ ವಾ ವಾಜಿರಾಜೌ
ನ ಕಾಂತಾಸುಖೇ ನೈವ ವಿತ್ತೇಷು ಚಿತ್ತಂ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಮ್ ತತಃ ಕಿಮ್ ತತಃ ಕಿಮ್ ತತಃ ಕಿಮ್ ||7||
(ಯಾರ ಮನಸ್ಸು , ಭೋಗ , ಯೋಗ , ಅಶ್ವ , ರಾಜ್ಯ , ಧನದ ವಿಷಯಗಳಲ್ಲಿ ಚಂಚಲವಾಗದಿದ್ದರೂ ಅಂತಹ ಮನುಷ್ಯರ ಮನಸ್ಸೂ  ಗುರುಗಳ ಚರಣದಲ್ಲಿ ಆಸಕ್ತವಾಗಿರದಿದ್ದರೆ  , ಇವುಗಳಿಂದೇನು  ಪ್ರಯೋಜನ...?)



ಅರಣ್ಯೇ ನ ವಾ ಸ್ವಸ್ಯ ಗೇಹೇ ನ ಕಾರ್ಯೇ
ನ ದೇಹೇ ಮನೋ ವರ್ತತೇ ಮೇ ತ್ವನರ್ಘ್ಯೇ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಮ್ ತತಃ ಕಿಮ್ ತತಃ ಕಿಮ್ ತತಃ ಕಿಮ್ ||8||
(ಯಾವುದೇ ಮನುಷ್ಯನ ಮನಸ್ಸು ಅರಣ್ಯದಲ್ಲಾಗಿರಲಿ , ಮನೆಯಲ್ಲಾಗಿರಲಿ , ಕಾರ್ಯದಲ್ಲಾಗಿರಲಿ , ಸ್ವಶರೀರದಲ್ಲಾಗಿರಲಿ , ಅಮೂಲ್ಯವಾದಂತಹ ಸಂಪತ್ತಿನಲ್ಲಾಗಿರಲಿ ಚಂಚಲವಾಗಿರದಿದ್ದರೂ ಮನಸ್ಸು ಗುರುಗಳ ಚರಣದಲ್ಲಿ ಆಸಕ್ತವಾಗಿರದಿದ್ದರೆ  , ಇದರಿಂದೇನು ಪ್ರಯೋಜನ...?)


ಗುರೋರಷ್ಟಕಂ ಯಃ ಪಠೇತ್ ಪುಣ್ಯದೇಹೀ
ಯತಿರ್ಭೂಪತಿಬ್ರಹ್ಮಚಾರೀ ಚ ಗೇಹೀ |
ಲಭೇತ್ ವಾಂಛಿತಾರ್ಥ ಪದಂ ಬ್ರಹ್ಮಸಂಜ್ಞಮ್
ಗುರೋರುಕ್ತವಾಕ್ಯೇ ಮನೋ ಯಸ್ಯ ಲಗ್ನಮ್ ||9||
(ಸಂನ್ಯಾಸಿ , ರಾಜ , ಬ್ರಹ್ಮಚಾರಿ ಯಾರೇ ಈ ಗುರ್ವಷ್ಟಕವನ್ನು ಓದಿದರೂ ಅವರ  ಮನಸ್ಸಿನ ಆಸೆಗಳು ನೆರವೇರುತ್ತವೆ..ಅವರಿಗೆ ಬ್ರಹ್ಮಪದ ಸಿಗುತ್ತದೆ ಹಾಗೂ ಗುರುವಿನ ಆಜ್ಞೆಯನ್ನು ಶಿರಸಾ ಪಾಲಿಸುವವರಿಗೆ ಸನ್ಮಂಗಲವುಂಟಾಗುತ್ತದೆ.)

ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ..

ನಮ್ಮ ದೇಶದ ಸಂಸ್ಕೃತಿಯೇ ಅಂತದ್ದು, ವಿವಿಧತೆಯಲ್ಲಿ ಏಕತೆ ನಮ್ಮ ಧ್ಯೇಯ.ನಮ್ಮಲ್ಲಿರುವ
ಭಾಷೆಗಳೆಷ್ಟು..?ನಮ್ಮಲ್ಲಿರುವ ರಾಜ್ಯಗಳೆಷ್ಟು..?ನಮ್ಮಲ್ಲಿರುವ
ಧರ್ಮಗಳೆಷ್ಟು..?ನಮ್ಮಲ್ಲಿರುವ ಸಂಸ್ಕೃತಿಗಳೆಷ್ಟು..? ಇಂದಿಗೂ ಭಾರತವೆಂದರೆ ಇಡೀ
ಜಗತ್ತೇ ನಿಬ್ಬೆರಗಾಗಿ ನೋಡುತ್ತದೆ.ಒಂದು ಭಾಷೆ , ಸಂಸ್ಕೃತಿ , ಧರ್ಮವನ್ನಿಟ್ಟುಕೊಂಡೆ
ಸರಿಯಾಗಿ ಬಾಳಲಾಗದ ರಾಷ್ಟ್ರಗಳು ನಮ್ಮ ದೇಶದ ಸಾಮರಸ್ಯವನ್ನು ನೋಡಿ
ಅಚ್ಚರಿಗೊಳ್ಳುತ್ತಿವೆ. ಹೌದು, ನಮ್ಮದು Incredible India.    .

ನಮ್ಮಲ್ಲಿ ಹಲವು ಪಕ್ಷಗಳಿರಬಹುದು , ಹಲವು ಪಂಥಗಳಿರಬಹುದು , ಹಲವು
ಧರ್ಮಗಳಿರಬಹುದು..ಆದರೆ ಮನದಲ್ಲಿರಬೇಕಾದ ಭಾವನೆಯೊಂದೇ, ಅದು ಭಾರತ, ಜನ್ಮಭೂಮಿಯ
ಭಕ್ತಿ, ನಾವೆಲ್ಲರೂ ಭಾರತೀಯರೆಂಬ ಸದ್ಭಾವನೆ.

ಪಕ್ಷಾತೀತರಾಗಿ , ಧರ್ಮಾತೀತರಾಗಿ , ಪಂಥಾತೀತರಾಗಿ ದೇಶಸೇವೆ ಮಾಡುವುದು ಪ್ರತಿಯೊಬ್ಬ
ಭಾರತೀಯನ ಕರ್ತವ್ಯ..ಈ ದೇಶದಲ್ಲಿ ನಾವೇನು ಅನುಭವಿಸಿಲ್ಲ..?ಇಲ್ಲಿ
ಜನ್ಮವೆತ್ತಿದ್ದೇವೆ..ಇಲ್ಲಿನ ನೀರನ್ನು ಕುಡಿಯುತ್ತಿದ್ದೇವೆ..ಇಲ್ಲಿನ ಗಾಳಿಯನ್ನು
ಉಸಿರಾಡುತ್ತಿದ್ದೇವೆ..ಪ್ರತಿಯೊಂದು ಸವಲತ್ತುಗಳನ್ನು ಪಡೆದಿದ್ದೇವೆ..ಮುಖ್ಯವಾಗಿ
ಯಾರಿಗೂ ತಲೆಬಾಗದೇ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ.


ಪ್ರಪಂಚದ ಯಾವುದೇ ದೇಶಕ್ಕೆ ಹೋಗಿ..ಮಾತೃಭೂಮಿಯಲ್ಲಿ ಸಿಗುವಷ್ಟು ಗೌರವ ನಿಮಗೆ
ಸಿಗುವುದಿಲ್ಲ..ಯಾವುದೋ ಒಂದು ಪರಕೀಯ ಭಾವನೆ ನಿಮ್ಮನ್ನು ಕಾಡುತ್ತಲೇ
ಇರುತ್ತದೆ..ಕೆಲವೊಂದು ದೇಶಗಳಲ್ಲಿ ಅನ್ಯಾಯವಾದಾಗ ಪ್ರತಿಭಟಿಸುವ
ಹಕ್ಕಿಲ್ಲ..ನಿರಾತಂಕವಾಗಿ ಓಡಾಡುವ ಹಾಗಿಲ್ಲ..ನೆಮ್ಮದಿಯಾಗಿ ಜೀವಿಸುವಂತಿಲ್ಲ.ಅಲ್ಲಿನ
ವ್ಯವಸ್ಥೆಯ ಬಗ್ಗೆ ಮಾತನಾಡುವಂತಿಲ್ಲ.

ಆದರೆ ನಮ್ಮಲ್ಲಿ ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ್ಯವಿದೆ...ಅನ್ಯಾಯವಾದಾಗ
ಪ್ರತಿಭಟಿಸುವ ಹಕ್ಕಿದೆ..ಹಾಗೇ ಮೂಲಭೂತ ಕರ್ತವ್ಯಗಳೂ ಇವೆ..ಭಾರತವಾಸಿಗಳಾದ ನಾವು
ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕಾದ್ದು ಅತ್ಯಗತ್ಯ..ದೇಶಸೇವೆ ಯಾವುದೇ ಪಕ್ಷಕ್ಕೆ
ಸೀಮಿತವಲ್ಲ..ಯಾವುದೇ ಸಂಘ-ಪರಿವಾರದ ಕರ್ತವ್ಯವಲ್ಲ..ಯಾವುದೇ ನಾಯಕನ ಸ್ವತ್ತಲ್ಲ.

ದೇಶಸೇವೆ ಪ್ರತಿಯೊಬ್ಬ ಭಾರತೀಯನ ನಾಡಿಮಿಡಿತ..ಜನ್ಮಭೂಮಿಯ ಹಿತಕ್ಕಿರಲಿ ಮನದ
ತುಡಿತ..ನಾವೆಲ್ಲರೂ ಭಾರತೀಯರು.ಭಾರತಮಾತೆ ನಮ್ಮೆಲ್ಲರ ತಾಯಿ..ಅವಳ ಮಕ್ಕಳು
ನಾವು..ಮನೆಮಕ್ಕಳು ಕಾದಾಡುವುದನ್ನು ಬಿಟ್ಟು ಮನೆಯೊಳಿತಿಗಾಗಿ ಶ್ರಮಿಸಿದರಾಗದೇ...?

Monday, 28 May 2018

ನಮ್ಮ ರಕ್ಷಣೆಯ ಜವಾಬ್ದಾರಿ ಭಗವಂತನದು.


ಮಹಾಭಾರತ ಯುದ್ಧ. ಮೊದಲ ಎಂಟು ದಿನಗಳ ಕಾಲ ಪಾಂಡವರ ಸೇನೆಯಲ್ಲಿ ಹಾಹಾಕರವೇ ನಡೆದಿತ್ತು. ಅದಕ್ಕೆ ಕಾರಣ ಭೀಷ್ಮಪಿತಾಮಹನ ಸೇನಾಧಿಪತ್ಯ. ಪಾಂಡವರಿಗೆ ಜಯಲಕ್ಷ್ಮಿ ದೂರವಾಗುತ್ತಿರುವಂತೇ ಭಾಸವಾಗಿತ್ತು. ಭೀಷ್ಮಪಿತಾಮಹನ ಸಮರ್ಥ ಸೇನಾಧಿಪತ್ಯವನ್ನು ಕಂಡು ದುರ್ಯೋಧನನಿಗೆ ಒಳಗೊಳಗೆ ಸಂತಸವಾಗುತ್ತಿದ್ದರೂ,ತೋರಿಕೆಗೆ ದುಃಖವನ್ನೇ ವ್ಯಕ್ತಪಡಿಸುತ್ತಿದ್ದ. ಆ ದುಃಖಕ್ಕೆ ಕಾರಣ ಭೀಷ್ಮ ಪಂಚಪಾಂಡವರಲ್ಲಿ ಯಾರನ್ನೂ ಹತ್ಯೆಗೈಯ್ಯಲಿಲ್ಲವೆಂಬುದು. ಬಹಿರಂಗವಾಗಿ ಭೀಷ್ಮರಲ್ಲೂ ತನ್ನ ಅಳಲನ್ನು ತೋಡಿಕೊಳ್ಳುತ್ತಾನೆ. "ಪಿತಾಮಹ ! ಎಂಟು ದಿನಗಳ ಕಾಲ ಸಮರ್ಥವಾಗಿ ಸೇನಾಧಿಪತ್ಯವನ್ನು ನಿರ್ವಹಿಸಿದ್ದೀರಿ. ಪಾಂಡವಸೇನೆ ಕಂಗೆಡುವಂತೇ ಮಾಡಿದ್ದೀರಿ. ಆದರೆ ನೀವು ಪಂಚಪಾಂಡವರಲ್ಲಿ ಯಾರನ್ನೂ ವಧಿಸುವ ಪ್ರಯತ್ನ ಮಾಡಿಲ್ಲ. ಏಕೆ ಪಿತಾಮಹ..? ಪಾಂಡವರೆಂದರೆ ಅಷ್ಟೊಂದು ಮಮಕಾರವೇ..? ಸಲ್ಲದು ಪಿತಾಮಹ...!! ಸೇನೆಯ ಅಧಿಪತ್ಯವನ್ನು ವಹಿಸಿಕೊಂಡು ಮಮಕಾರವನ್ನು ಹೊಂದುವುದು ನಿಮ್ಮಂತಹ ಕ್ಷತ್ರಿಯವೀರರಿಗೆ ತರವಲ್ಲ. ಮಮಕಾರವನ್ನು ಬಿಟ್ಟು ಪಾಂಡವರೊಂದಿಗೆ ಹೋರಾಡಿ. ಅವರನ್ನು ವಧಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿ" ಮಾತಿನಲ್ಲೇ ಭೀಷ್ಮನನ್ನು ಚುಚ್ಚುತ್ತಾನೆ. ಸಹಜವಾಗಿಯೇ ಭೀಷ್ಮನಿಗೆ ಕೋಪ ಆವರಿಸುತ್ತದೆ. "ನಾಳೆಯ ಯುದ್ಧದಲ್ಲಿ ಖಂಡಿತವಾಗಿಯೂ ನಾನು ಅರ್ಜುನನನ್ನು ವಧಿಸುತ್ತೇನೆ" ಎಂದು ಪ್ರತಿಜ್ಞೆಯನ್ನು ಮಾಡುತ್ತಾನೆ.

ಭೀಷ್ಮಪ್ರತಿಜ್ಞೆ ಎಂದರೆ ಕೇಳಬೇಕೆ..? ಅಸಂಭವ ಎನ್ನುವ ಮಾತೇ ಇಲ್ಲ. ಭೀಷ್ಮನ ಪ್ರತಿಜ್ಞೆಯನ್ನು ಕೇಳಿದ ಪಾಂಡವರ ಪಾಳಯದಲ್ಲಿ ದಿಗಿಲು. ಸಾಕ್ಷಾತ್ ಕೃಷ್ಣಪರಮಾತ್ಮನೂ ಚಿಂತೆಗೊಳಗಾದ. ನಾಳೆ ಅರ್ಜುನನನ್ನು ಕಳೆದುಕೊಳ್ಳುತ್ತೇವೆಂಬ ಅಳಕು ಪಾಂಡವರ ಪಾಳಯದಲ್ಲಿ ಮೂಡಿತು. ದಿಕ್ಕುತೋಚದಂತಾದ ಪರಿಸ್ಥಿತಿ. ರಾತ್ರಿಯಾದರೂ ಯಾರೊಬ್ಬರೂ ಮಲಗಲಿಲ್ಲ. ಅರ್ಜುನನನ್ನು ರಕ್ಷಿಸುವ ಪರಿ ಹೇಗೆಂಬುದೇ ಚಿಂತೆ. ಕೃಷ್ಣನದು ರಣತಂತ್ರ,ಅರ್ಜುನನನ್ನು ಹೇಗೆ ರಕ್ಷಿಸಲಿ..? ಯೋಚಿಸುತ್ತಾ ಅರ್ಜುನನ ಶಿಬಿರಕ್ಕೆ ಬಂದ. ಅರ್ಜುನ ಮಲಗಿ ಗಾಢವಾಗಿ ನಿದ್ರಿಸುತ್ತಿದ್ದಾನೆ. ಅಲ್ಲಿ ಭೀಷ್ಮ ಅರ್ಜುನನನ್ನು ನಾಳೆ ಕೊಲ್ಲುವೆನೆಂದು ಘನಘೋರ ಪ್ರತಿಜ್ಞೆ ಮಾಡಿದ್ದಾನೆ. ಇಲ್ಲಿ ಪಾಂಡವರು ಚಿಂತಾಕ್ರಾಂತರಾಗಿ ಕುಳಿತಿದ್ದಾರೆ. ಇಂತಹ ಸಂದರ್ಭದಲ್ಲಿ ಅರ್ಜುನನದು ಗಾಢನಿದ್ರೆ..!! ಕೃಷ್ಣನಿಗೆ ನಗು ಬರುತ್ತದೆ. ಅರ್ಜುನನನ್ನು ನಿದ್ರೆಯಿಂದೆಬ್ಬಿಸಿ " ಅಲ್ಲಯ್ಯಾ ಮಹಾನುಭಾವ..ಭೀಷ್ಮ ಪ್ರತಿಜ್ಞೆಯ ವಿಷಯ ನಿನಗೆ ಅರಿವಿದೆಯಾ..? ನಾಳೆ ನಿನ್ನನ್ನು ಆತ ವಧಿಸುತ್ತಾನಂತೆ. ಮುಂದಿನ ಮಾರ್ಗವನ್ನು ಚಿಂತಿಸದೇ ನೆಮ್ಮದಿಯಿಂದ ನಿದ್ರಿಸುತ್ತಿರುವೆಯಲ್ಲ..? ಎಂದು ಕೇಳುತ್ತಾನೆ. ಅರ್ಜುನ ಮುಗುಳ್ನಗುತ್ತಾ "ಎಲ್ಲವೂ ಗೊತ್ತಿದೆ ದೇವ..!! ಆದರೆ ನನಗ್ಯಾವ ಆತಂಕವೂ ಇಲ್ಲ. ಏಕೆಂದರೆ ನನ್ನನ್ನು ರಕ್ಷಿಸುವ ದೇವ ನನ್ನ ರಕ್ಷಣೆಯ ಮಾರ್ಗವನ್ನು ಖಂಡಿತವಾಗಿಯೂ ಹುಡುಕಿರುತ್ತಾನೆ. ನಾನು ನಿದ್ರಿಸಿದರೂ ಆತ ಜಾಗೃತನಾಗಿ ನನ್ನ ರಕ್ಷಣೆಯ ಮಾರ್ಗವನ್ನು ಅನ್ವೇಷಿಸಿರುತ್ತಾನೆಂಬ ಅಚಲವಾದ ನಂಬಿಕೆ ನನಗಿದೆ. ನಾನು ನಂಬಿರುವ ದೇವ ನನ್ನನ್ನೆಂದಿಗೂ ಕೈಬಿಡಲಾರ. ಆದ್ದರಿಂದ ನನ್ನ ರಕ್ಷಣೆಯ ಬಗ್ಗೆ ಚಿಂತಿಸದೇ ನಾನು ನಿಶ್ಚಿಂತೆಯಿಂದ ಮಲಗಿದ್ದೇನೆ" ಅರ್ಜುನನ ಮಾತಿಗೆ ಶ್ರೀಕೃಷ್ಣ ತಲೆದೂಗಿದ. ಅರ್ಜುನನ ರಕ್ಷಣೆಯ ಸಾರಥ್ಯವನ್ನು ವಹಿಸಿದ.

ಅದನ್ನೇ ತಾನೇ ಗೀತಾಚಾರ್ಯ ಗೀತೆಯಲ್ಲಿ ಬೋಧಿಸಿದ್ದು...
"ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಂ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ || ಎಂಬುದಾಗಿ.
ನಮ್ಮ ರಕ್ಷಣೆಯ ಜವಾಬ್ದಾರಿ ಭಗವಂತನದು. ಆತನ ಅಣತಿಯಂತೇ ಎಲ್ಲವೂ ನಡೆಯುತ್ತದೆ. ಯಾರು ಭಗವಂತನನ್ನೇ ಅನವರತವಾಗಿ ಭಜಿಸುತ್ತಾರೋ ಅಂತಹ ಭಕ್ತರ ಯೋಗಕ್ಷೇಮವನ್ನು ಸಾಕ್ಷಾತ್ ಭಗವಂತನೇ ವಹಿಸಿಕೊಳ್ಳುತ್ತಾನೆ.

"ಸರ್ವೇ ಭವಂತು ಸುಖಿನಃ"

“ಆತ್ಮ” ಎಂದರೇನು...?


“ಆತ್ಮ” ಎಂದರೇನು...?ಹಲವರಿಗೆ ಅರ್ಥೈಸಿಕೊಳ್ಳಲಾಗದ ಕ್ಲಿಷ್ಟ ಪದ.ಹಲವರಿಗೆ ಆತ್ಮಜ್ಞಾನವೆಂಬುದು ಆಧ್ಯಾತ್ಮಜಿಜ್ಞಾಸುಗಳಿಗೆ ಮಾತ್ರ ಎಂಬ ತಪ್ಪು ಕಲ್ಪನೆ.ಹಲವರಿಗೆ ಇದೆಲ್ಲ ವಯಸ್ಸಾದವರಿಗೆ,ವಿರಕ್ತರಿಗೆ ಎಂಬ ತಿರಸ್ಕೃತ ಭಾವನೆ.ನಮಗೆ ಶರೀರ ಮುಖ್ಯ,ಶರೀರದ ಅವಯವಗಳು ಮುಖ್ಯ,ಮನಸ್ಸು,ಇಂದ್ರಿಯಜ್ಞಾನಗಳು ಮುಖ್ಯ,ಆದರೆ ಇವುಗಳನ್ನೆಲ್ಲಾ ನಿಯಂತ್ರಿಸುವ ಆತ್ಮ ಮಾತ್ರ ಗೌಣ..!!”ಶರೀರದಲ್ಲಿ ಆತ್ಮವೊಂದಿದೆ” ಎಂಬ ವಿಚಾರವೇ ಹಲವರಿಗೆ ತಿಳಿದಿಲ್ಲ.ಶರೀರವೆಂಬ ರಥವನ್ನು ನಿಯಂತ್ರಿಸುವ ಸಾರಥಿಯ ಬಗ್ಗೆಯೇ ಅರಿವಿಲ್ಲ.”ಆತ್ಮಾನಂ ರಥಿನಂ ವಿದ್ಧಿ”ಎಂಬ ಉಪನಿಷತ್ ವಾಕ್ಯದ ಜ್ಞಾನವಿಲ್ಲ..!!ಹಾಗಾಗಿ ಅಂತರಾತ್ಮವನ್ನು ಮರೆತು ವ್ಯವಹರಿಸುತ್ತೇವೆ.ಶರೀರವನ್ನೇ ಮುಖ್ಯವೆಂದು ತಿಳಿದು ಅಂತರಾತ್ಮಕ್ಕೆ ದ್ರೋಹ ಬಗೆಯುತ್ತೇವೆ.ಹಾಗಾಗಿ ಆತ್ಮಸ್ವರೂಪವನ್ನು ಅರಿಯದ ಮನುಷ್ಯ ಹಲವು ಜನ್ಮಗಳವರೆಗೂ ಪತಿತನಾಗಿರುತ್ತಾನೆ.

ಹಾಗಾದರೆ ಆತ್ಮವೆಂದರೇನು..?
ಸರಳವಾದ ಉತ್ತರ – “ನಾನು” ಎಂಬ ಭಾವನೆಯೇ ಆತ್ಮ.”ನಾನು” ಮನುಷ್ಯ,”ನಾನು” ಮೇಧಾವಿ.”ನಾನು” ಶ್ರೀಮಂತ “ನಾನು” ಬಡವ ಮುಂತಾದ ಸಂದರ್ಭಗಳಲ್ಲಿ ಬಳಸಲಾಗುವ “ನಾನು” ಎಂಬ ಭಾವನೆಯೇ ಆತ್ಮ.ಜಗತ್ತಿನ ಪ್ರತಿಯೊಂದು ಜೀವಿಗೂ “ನಾನು” ಎಂಬ ಭಾವನೆಯಿರುತ್ತದೆ ಅದೇ ಆತ್ಮ.ಪ್ರತಿ ಜೀವಿಯಲ್ಲೂ ಆತ್ಮ ನಿರ್ಗುಣ,ನಿರಾಕಾರ ರೂಪದಲ್ಲಿರುತ್ತದೆ.ಕಾಣುವ ಶರೀರಕ್ಕೆ ಸ್ವತಃ ಚೈತನ್ಯವಿಲ್ಲ.ಆತ್ಮಚೈತನ್ಯದಿಂದಷ್ಟೇ ದೇಹಚೈತನ್ಯ.ಹೇಗೆ ಸೂರ್ಯ ಚಂದ್ರನಿಂದ ಬೆಳಕನ್ನು ಪಡೆದು ಶೋಭಿಸುತ್ತಾನೋ ಹಾಗೇ ಶರೀರ,ಮನಸ್ಸು,ಬುದ್ಧಿಗಳು ಆತ್ಮದಿಂದ ಶೋಭಿಸುತ್ತವೆ.ನಮ್ಮ ಶರೀರ,ಮನಸ್ಸು,ಬುದ್ಧಿಗಳನ್ನು ನಿಯಂತ್ರಿಸುವುದು ಇದೇ ಆತ್ಮ.ಶರೀರದಿಂದ ಆತ್ಮ ನಿವೃತ್ತಿಯಾದಾಗ ಶರೀರ ಅಚೈತನ್ಯವಾಗುತ್ತದೆ.ಶರೀರಕ್ಕೆ ನಾಶವಿದೆ,ಆತ್ಮಕ್ಕೆ ನಾಶವಿಲ್ಲ.ಶರೀರ ವಿನಾಶಿ,ಆತ್ಮ ಅವಿನಾಶಿ.
ಭಗವದ್ಗೀತೆಯ ಎರಡನೆಯ ಅಧ್ಯಾಯ ಸಾಂಖ್ಯಯೋಗ.ಅಲ್ಲಿ ಭಗವಾನ್ ಶ್ರೀಕೃಷ್ಣ ಆತ್ಮದ ಗುಣ,ಮಹತ್ವಗಳನ್ನು ತುಂಬಾ ಸರಳವಾಗಿ ವಿವರಿಸಿದ್ದಾನೆ.

“ನ ಜಾಯತೇ ಮ್ರಿಯತೇ ವಾ ಕದಾಚಿತ್”
ಜಗತ್ತಿನಲ್ಲಿ ಜನಿಸುವ ಸಕಲ ಚರಾಚರಗಳ ವಸ್ತುಗಳಿಗೆ ಜನ್ಮದ ಜೊತೆ ಸಾವೂ ನಿಶ್ಚಯವಾಗಿರುತ್ತದೆ.ಆದರೆ ಆತ್ಮ ಹಾಗಲ್ಲ,ಆತ್ಮಕ್ಕೆ ಹುಟ್ಟಿಲ್ಲ,ಸಾವಿಲ್ಲ,ಏಕೆಂದರೆ ಆತ್ಮ ಜನ್ಮರಹಿತ,ನಿತ್ಯ,ಸನಾತನ ಹಾಗೂ ಪುರಾತನ.ಶರೀರವು ನಾಶವಾದರೂ ಆತ್ಮ ನಾಶವಾಗುವುದಿಲ್ಲ.ಹಾಗಾಗಿ “ನಾನು ಸಾಯುತ್ತೇನೆ” ಎಂಬ ವಾಕ್ಯ ದೋಷಪೂರ್ಣ.”ನಾನು” ಎಂಬುದು ಆತ್ಮ.ಆತ್ಮಕ್ಕೆ ಸಾವಿಲ್ಲ.ಹಾಗಾಗಿ “ನಾನು ಸಾಯುತ್ತೇನೆ” ಎಂಬುದರ ಬದಲು “ನನ್ನ ಶರೀರ ಸಾಯುತ್ತದೆ” ಎಂದು ಹೇಳುವುದು ಉಚಿತ..!!ಆತ್ಮ ನಾಶರಹಿತ,ನಿತ್ಯ ಹಾಗೂ ಅವ್ಯಯ.

ಹೇಗೆ ನಾವು ಹಳೆಯ ಬಟ್ಟೆಯನ್ನು ತ್ಯಜಿಸಿ ಹೊಸಬಟ್ಟೆಯನ್ನು ಧರಿಸುವೆವೋ ಹಾಗೇ ಆತ್ಮವೂ ಸಹ ಹಳೆಯ ಶರೀರವನ್ನು ತ್ಯಜಿಸಿ ಹೊಸಶರೀರವನ್ನು ಧರಿಸುತ್ತಲೇ ಇರುತ್ತದೆ.ಆತ್ಮ ಗಾಳಿಯಂತೇ ನಿರಾಕಾರ.ನಿರಾಕಾರ ಆತ್ಮವನ್ನು ಶಸ್ತ್ರಗಳು ಕತ್ತರಿಸುವುದು ಹೇಗೆ..?ನಿರಾಕಾರ ಆತ್ಮವನ್ನು ಅಗ್ನಿ ದಹಿಸುವುದು ಹೇಗೆ..?ಆತ್ಮ ಅಗ್ನಿಗಿಂತಲೂ ಸೂಕ್ಷ್ಮ.ನಿರಾಕಾರವಾದ ಆತ್ಮನನ್ನು ನೀರು ಹೇಗೆ ತೋಯಿಸಬಹುದು..?ಗಾಳಿ ಹೇಗೆ ಒಣಗಿಸಬಹುದು..?ಹಾಗಾಗಿ ಪಂಚಭೂತಗಳ ಅಂಕೆಗೂ ನಿಲುಕದ ನಿರ್ಗುಣ,ನಿರಾಕಾರ,ಅಚಲ,ಸ್ಥಿರ,ಸನಾತನ,ನಿತ್ಯರೂಪವೇ ಆತ್ಮ.

“ನೈನಃ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ |
ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ ||
ಶರೀರದಲ್ಲಿರುವ ಚೈತನ್ಯವೇ ಆತ್ಮ.ಈ ಆತ್ಮಕ್ಕೆ ಬಾಲ್ಯ,ಕೌಮಾರ,ಯೌವ್ವನ,ವಾರ್ಧಕಾವಸ್ಥೆಗಳಿಲ್ಲ.ಬಾಲ್ಯದಲ್ಲಿ ನಡೆದ ಘಟನೆಗಳು ವಾರ್ಧಕಾವಸ್ಥೆಯಲ್ಲಿ ಜ್ಞಾಪಕದಲ್ಲಿರುತ್ತದೆ.”ನಾನು ಅಲ್ಲಿಗೆ ಹೋಗಿದ್ದೆ’”ನಾನು ಅದನ್ನು ಮಾಡಿದ್ದೆ” ಮುಂತಾದ ಸಂದರ್ಭಗಳಲ್ಲಿ “ನಾನು” ಎಂಬುದು ಆತ್ಮದ ಅಸ್ತಿತ್ವವನ್ನು ಸಾರುತ್ತದೆ.ಶರೀರಕ್ಕೆ ಮುಪ್ಪಿದೆಯೇ ಹೊರತು ಆತ್ಮಕ್ಕಲ್ಲ.ಆತ್ಮಕ್ಕೆ ಶರೀರಾವಸ್ಥೆಗಳ ಸಂಬಂಧವಿರುವುದಿಲ್ಲ.ಎಲ್ಲಿಯವರೆಗೆ ಶರೀರದಲ್ಲಿ ಚೈತನ್ಯವಿರುವುದೋ ಆಲ್ಲಿಯವರೆಗೆ ಶರೀರ ಕ್ರಿಯಾಶೀಲವಾಗಿರುತ್ತದೆ.ಚೈತನ್ಯ ಹೊರಟುಹೋದಮೇಲೆ ಶರೀರ ನಿಷ್ಕ್ರಿಯವಾಗುತ್ತದೆ.ಆ ಚೈತನ್ಯವೇ ಆತ್ಮ.ಆತ್ಮ ಹೊರಟನಂತರ ಶರೀರ ಜಡವಾಗುತ್ತದೆ.ಮರಣಾನಂತರದ ಸಂಸ್ಕಾರ ಶರೀರಕ್ಕೇ ಹೊರತು ಆತ್ಮಕ್ಕಲ್ಲ..!!ಶರೀರದಿಂದ ನಿವೃತ್ತಿಯಾದ ಆತ್ಮ ಇನ್ನೊಂದು ಶರೀರವನ್ನು ಧರಿಸುತ್ತದೆ.

ಹಲವು ಜನರಲ್ಲಿ ಯಾವನೋ ಒಬ್ಬ ಮಹಾಪುರುಷ ಈ ಆತ್ಮವನ್ನು ಆಶ್ಚರ್ಯದಂತೇ ನೋಡುತ್ತಾನೆ. ಇನ್ನೊಬ್ಬ ಮಹಾಪುರುಷ ಆತ್ಮತತ್ವವನ್ನು ಆಶ್ಚರ್ಯದಂತೇ ವರ್ಣಿಸುತ್ತಾನೆ.ಯಾವನೋ ಒಬ್ಬ ಅಧಿಕಾರಿ ಪುರುಷ ಇದನ್ನು ಆಶ್ಚರ್ಯದಿಂದ ಕೇಳುತ್ತಾನೆ.ಇನ್ನು ಹಲವರು ಆತ್ಮತತ್ವವನ್ನು ಕೇಳಿಯೂ ಕೂಡ ಇದನ್ನು ಅರಿಯಲಾರರು.ಆತ್ಮತತ್ವವನ್ನು ಅರಿಯಲು ಪ್ರಯತ್ನಿಸುವವರು ವಿರಳಾತಿವಿರಳ.ಶರೀರದಲ್ಲೇ ನೆಲೆಸಿರುವ ಆತ್ಮವನ್ನು ಅರಿಯುವ ಗೊಡವೆಗೆ ಯಾರೂ ಹೋಗಲಾರರು.ನಮ್ಮೊಳಗಿನ ಆತ್ಮಕ್ಕೆ ಬೆಲೆಯನ್ನು ನೀಡಲಾರರು.ನಾವು ಸದಾ ಮನದ ಮಾತಿಗೆ ಮಹತ್ವ ನೀಡುತ್ತೇವೆಯೇ ಹೊರತು ಅಂತರಾಳದ ಮಾತಿಗಲ್ಲ.ಶರೀರದಲ್ಲಿರುವ ಅಂತರಾಳ ಅಥವಾ ಆತ್ಮ ವಿವೇಕವನ್ನು ಜಾಗೃತಗೊಳಿಸುತ್ತಿರುತ್ತದೆ.ಪಾಪಕಾರ್ಯಗಳನ್ನು ಮಾಡುವಾಗ ತಪ್ಪೆಂದು ಎಚ್ಚರಿಸುತ್ತದೆ.ತಪ್ಪಿಗೆ ಪ್ರಾಯಶ್ಚಿತ್ತದ ದಾರಿಯನ್ನು ಹುಡುಕುತ್ತಿರುತ್ತದೆ.ಆದರೆ ಮನಸ್ಸಿನ ಮಾತು ಹಾಗಲ್ಲ,ಅದು ಚಂಚಲ ಹಾಗೂ ವಿವೇಕಶೂನ್ಯವಾಗಿರುತ್ತದೆ.ಪ್ರತಿಯೊಂದು ಕಾರ್ಯವನ್ನು ಮಾಡುವಾಗ ನಾವು ಮನಸ್ಸಿನ ಮಾತಿಗೆ ಮಹತ್ವ ಕೊಡದೇ ಅಂತರಾಳದ ಮಾತಿಗೆ ಮಹತ್ವವನ್ನು ನೀಡಿದರೆ ಬಾಳು ಬಂಗಾರವಾಗುತ್ತದೆ.ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ಸಿಗುತ್ತದೆ.

ಅದ್ವೈತ ಸಿದ್ಧಾಂತದ ಪ್ರಕಾರ ಆತ್ಮ ಹಾಗೂ ಪರಮಾತ್ಮರು ಒಂದೇ.ಜೀವಾತ್ಮ ಹಾಗೂ ಪರಮಾತ್ಮನಿಗೆ ಅಬೇಧವನ್ನು ತಿಳಿಸಲಾಗಿದೆ. ”ತತ್ವಮಸಿ” ಅಂದರೇ “ಅದೇ ನೀನು”.ಆತ್ಮ ಪರಮಾತ್ಮರ ಸಂಬಂಧ ಸಮುದ್ರ ಮತ್ತು ಅಲೆಗಳ ಸಂಬಂಧವಿದ್ದಂತೇ.ಇಡೀ ಸಾಗರವೇ ಪರಮಾತ್ಮನಾದರೆ,ಅದರಲ್ಲಿ ಹುಟ್ಟಿ,ಸಾಯುವ ಅಲೆಗಳು ಜೀವಾತ್ಮರು.
“ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್ |
ಆತ್ಮೈವ ಹ್ಯಾತ್ಮನೋ ಬಂಧುಃ ಆತ್ಮೈವರಿಪುರಾತ್ಮನಃ ||”
ಮನುಷ್ಯ ತನ್ನಿಂದಲೇ ತನ್ನನ್ನು ಸಂಸಾರಸಾಗರದಿಂದ ಉದ್ಧರಿಸಿಕೊಳ್ಳಬೇಕು.ತನ್ನಿಂದಲೇ ಅಧೋಗತಿಗೆ ಸಾಗಬಾರದು.ಏಕೆಂದರೆ ಮನುಷ್ಯ ತನಗೆ ತಾನೇ ಮಿತ್ರ,ತನಗೆ ತಾನೇ ಶತ್ರುವೂ ಆಗಿದ್ದಾನೆ.
ನಮ್ಮಲ್ಲಿರುವ ಆತ್ಮವನ್ನು ಅರಿತಾಗ ನಮಗೆ ಸಂಸಾರಸಾಗರದಿಂದ ವಿಮುಕ್ತ ಸಿಗುತ್ತದೆ.ಆತ್ಮತತ್ವವನ್ನು ಅರಿಯದೇ ಬಾಳಿದಾಗ ಬದುಕು ವ್ಯರ್ಥವಾಗುತ್ತದೆ.ಮನುಷ್ಯ ಜೀವನದ ಉದ್ದೇಶವೇ ಪರಮಾನಂದವನ್ನು ಪಡೆಯುವುದು.ಪರಮಾನಂದವೆಂದರೆ ಮಸ್ತಿ-ಮೋಜಲ್ಲ.ಆತ್ಮತತ್ವವನ್ನು ಅರಿಯುವುದೇ ಪರಮಾನಂದ.ಆ ಪರಮಾನಂದ ನಮ್ಮೊಳಗಿದೆ.ಉಪನಿಷತ್ತುಗಳ ಪ್ರಕಾರ”ನಮ್ಮ ಆತ್ಮವೇ ಪರಮಾನಂದ.ಅದಿರುವುದು ನಮ್ಮಲ್ಲೇ.ಅದನ್ನು ಅರಿತುಕೊಳ್ಳಬೇಕು”.ಆ ಪರಮಾನಂದವನ್ನು ಅನ್ವೇಷಿಸುವ ಪ್ರಾಮಾಣಿಕ ಪ್ರಯತ್ನ ನಮ್ಮದಾಗಿರಲಿ.


“ಸರ್ವೇ ಭವಂತು ಸುಖಿನಃ”