Thursday, 26 January 2017

ಹಾಲಕ್ಕಿ ಕೋಗಿಲೆಗೆ ಪದ್ಮಶ್ರೀ..

ಬಡತನ,ಅನಕ್ಷರತೆ,ವಿಧಿಯಾಟಗಳಿಗೆ ಸಿಲುಕಿ ತನ್ನ ಬಾಳು ಅಕ್ಷರಶಃ ಬರಿದಾದರೂ ಹಲವರಿಗೆ ಬದುಕಿನ ದಾರಿ ತೋರಿದ ಸುಕ್ರಜ್ಜಿಯ ಬದುಕು ನನ್ನನ್ನು ಕಾಡುತ್ತಲೇ ಇದೆ. ವಿದ್ಯಾವಂತರಾಗಿ,ಪ್ರತಿಷ್ಠಿತ ಉದ್ಯೋಗದಲ್ಲಿದ್ದರೂ ಜೀವನೋತ್ಸಾಹವನ್ನೇ ಕಳೆದುಕೊಂಡವರಂತೇ ವರ್ತಿಸುವ ಹಲವರನ್ನು ನೋಡಿದರೆ ಸುಕ್ರಜ್ಜಿಯ ಸಾಧನೆಯೇ ಹಿರಿದೆನಿಸುತ್ತದೆ. ಸುಕ್ರಜ್ಜಿ ಕನ್ನಡತಿಯೆಂಬ ಅಭಿಮಾನದ ಜೊತೆ ಉತ್ತರಕನ್ನಡದ ಹಾಲಕ್ಕಿ ಸಮುದಾಯದವಳೆಂಬ ಕಾರಣವೂ ಸಹ  ನನ್ನಭಿಮಾನವನ್ನು ಇಮ್ಮಡಿಗೊಳಿಸಿದೆ.

ಸುಕ್ರಜ್ಜಿಯ ಬಾಳೇ ಒಂದು ಹೋರಾಟ. ಉತ್ತರಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬಡಗೇರಿ ಎಂಬ ಪುಟ್ಟ ಹಳ್ಳಿಯಲ್ಲಿ ವಾಸಿಸುತ್ತಿರುವ ಸುಕ್ರಜ್ಜಿ ಬಾಲ್ಯದಿಂದಲೂ ಬಡತನವನ್ನು ಅನುಭವಿಸುತ್ತಲೇ ಬಂದಿದ್ದಾರೆ. ೧೪ನೇ ವಯಸ್ಸಿನಲ್ಲಿ ತನಗಿಂತಲೂ ಬಹಳ ಹಿರಿಯನಾದ ಬೊಮ್ಮಗೌಡನೊಂದಿಗೆ ವಿವಾಹವಾದ ಸುಕ್ರಜ್ಜಿ ಬಹುಬೇಗ ತನ್ನ ಗಂಡನನ್ನು ಕಳೆದುಕೊಂಡರು. ಇಬ್ಬರು ಮಕ್ಕಳೂ ವಿಧಿವಶರಾದರು. ಬದುಕಿಗೆ ಆಸರೆಯಾಗಿರಲೆಂದು ಸಾಕಿದ್ದ ಮಗನೂ ಮದ್ಯವ್ಯಸನಿಯಾಗಿ ಅಸುನೀಗಿದ. ಬದುಕಿನಲ್ಲನುಭವಿಸಿದ್ದೆಲ್ಲವೂ ಕಷ್ಟಗಳೇ. ಆದರೂ ಸುಕ್ರಜ್ಜಿ ಗಟ್ಟಿಗಿತ್ತಿ. ಕಷ್ಟಗಳಿಗೆ ಅಂಜಲಿಲ್ಲ. 

ಕೊನೆಗೆ,ಸುಕ್ರಜ್ಜಿಯ ಬದುಕಿಗೆ ಆಸರೆಯಾಗಿದ್ದು,ತಾಯಿಯಿಂದ ಕಲಿತ ಹಾಡುಗಳು. ಸುಮಾರು ಎಂಟುನೂರು ತಾಸುಗಳ ಕಾಲ ಹಾಡಬಲ್ಲಷ್ಟು ಹಾಡುಗಳನ್ನು ಅನಕ್ಷರಸ್ಥೆಯಾಗಿರುವ ಸುಕ್ರಜ್ಜಿ ಕಲಿತಿದ್ದಳು..!! ಹಾಲಕ್ಕಿ ಜಾನಪದ ಹಾಡುಗಳು, ಕೃಷಿಗೆ ಸಂಬಂಧಿಸಿದ ಹಾಡುಗಳು, ಮದುವೆ ಹಾಡುಗಳು,ದೇವರ ಹಾಡುಗಳು,ಆಚಾರ-ವಿಚಾರಗಳಿಗೆ ಸಂಬಂಧಿಸಿದ ಹಾಡುಗಳು , ಜಾನಪದ ಕಥೆ-ಕವನ,ಒಗಟುಗಳು,ಮನೆಮದ್ದು ಮುಂತಾದವುಗಳ ಸಂಗ್ರಹವೇ ಸುಕ್ರಜ್ಜಿಯ ಬಳಿಗಿದೆ. ಒಂದು ಸಮುದಾಯ ಶಾಶ್ವತವಾಗಿರಬೇಕಾದರೆ ಅದರ ಸಂಸ್ಕೃತಿಯ ರಕ್ಷಣೆ ಮಹತ್ವವಾಗಿರುತ್ತದೆ. ಹಾಲಕ್ಕಿ ಸಮುದಾಯದ ರಕ್ಷಣೆ ಅದರ ಹಾಡುಗಳಲ್ಲಿದೆ. ಅಂತಹ ಹಾಡುಗಳನ್ನು ರಕ್ಷಿಸಿ,ಬೇರೆಯವರಿಗೂ ಅದನ್ನು ಕಲಿಸುವ ಕಾಯಕದಲ್ಲಿ ಸುಕ್ರಜ್ಜಿ ಇಂದಿಗೂ ನಿರತಳಾಗಿದ್ದಾಳೆ. ಆಕಾಶವಾಣಿ,ದೂರದರ್ಶನದ ಮುಖಾಂತರ ಸುಕ್ರಜ್ಜಿಯ ಹಾಡುಗಳು ದೇಶಾದ್ಯಂತ ಪ್ರಸಾರವಾಗಿವೆ. 

೮೦ ರ ಇಳಿವಯಸ್ಸಿನಲ್ಲಿರುವ ಸುಕ್ರಜ್ಜಿಯ ಜೀವನೋತ್ಸಾಹವನ್ನು ಕಂಡರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಬೆಳಿಗ್ಗೆ ೪-೩೦ ಕ್ಕೆ ಎದ್ದೇಳುವ ಸುಕ್ರಜ್ಜಿ ಕಟ್ಟಿಗೆ ತರಲು ಕಾಡಿಗೆ ತೆರಳುತ್ತಾಳೆ. ಅಲ್ಲಿಂದ ಬಂದು ಮನೆಗೆಲಸ, ಗದ್ದೆನೆಟ್ಟಿ , ಗದ್ದೆಕೊಯ್ಲು , ಸೊಪ್ಪು ಕಡಿಯುವುದು  ಮುಂತಾದ ರೈತಾಬಿ ಕೆಲಸದಲ್ಲಿ ಸುಕ್ರಜ್ಜಿ ಬ್ಯುಸಿಯಾಗಿಯೇ ಇರುತ್ತಾಳೆ..!! ಮೊನ್ನೆ ಪದ್ಮಶ್ರೀ ಪ್ರಶಸ್ತಿ ಬಂದಾಗ ಉತ್ತರಕನ್ನಡದ ಜಿಲ್ಲಾಧಿಕಾರಿಗಳು ಸುಕ್ರಜ್ಜಿಯನ್ನು ಸನ್ಮಾನಿಸಬೇಕೆಂದು ಕಾರನ್ನು ಕಳಿಸಿದ್ದರಂತೆ. ಆದರೆ ಕಾರು ಸುಕ್ರಜ್ಜಿಯ ಮನೆಗೆ ಬಂದಾಗ ಆಕೆ ಕಟ್ಟಿಗೆ ತರಲು ಕಾಡಿಗೆ ಹೋಗಿದ್ದಳಂತೆ. ಮುಗ್ಧಮನಸ್ಸಿನ ಸುಕ್ರಜ್ಜಿ ಇಂದಿಗೂ ಪ್ರಶಸ್ತಿ ಪುರಸ್ಕಾರಗಳ ಹಿಂದೆ ಬಿದ್ದವಳಲ್ಲ. ಅವಳ ಸಾಧನೆಯನ್ನು ಪುರಸ್ಕರಿಸಿ ಹಲವಾರು ಪುರಸ್ಕಾರಗಳು ಬಂದರೂ ಇಂದಿಗೂ ಸುಕ್ರಜ್ಜಿಗೆ ಅಹಂಕಾರ ಬಂದಿಲ್ಲ. ಇಂದಿಗೂ ಆಕೆಯದು ಮಗುವಿನಂತಹ ಮನಸ್ಸು,ಅದೇ ಮುಗುಳ್ನಗೆ.ಇನ್ನು ಸಮಯ ಸಿಕ್ಕಾಗ ಗೆಳತಿಯರೊಂದಿಗೆ ಹಾಡು,ಯುವಜನತೆಗೆ ಮಾರ್ಗದರ್ಶನ , ಸಾಮಾಜಿಕ ಕಾಳಜಿಯಂತಹ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾಳೆ. ಮದ್ಯಪಾನವನ್ನು ವಿರೋಧಿಸಿ ಸುಕ್ರಜ್ಜಿ ಒಂದು ದೊಡ್ಡ ಆಂದೋಲನವನ್ನೇ ಮಾಡಿದ್ದಾಳೆ. ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಸುಕ್ರಜ್ಜಿ ಹೋರಾಡುತ್ತಲೇ ಇದ್ದಾಳೆ. ಸುಕ್ರಜ್ಜಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿರುವುದು ನಿಜಕ್ಕೂ ಸಂತಸದ ವಿಷಯ.


No comments:

Post a Comment