Thursday, 22 September 2016

ದೇಹಕ್ಕಿಂತ ದೇಶ ದೊಡ್ಡದು

I.C.S ಪರೀಕ್ಷೆಯಲ್ಲಿ ತೇರ್ಗಡೆಯಾದ ನೇತಾಜಿ ಉದ್ಯೋಗವನ್ನು ಸೇರಲು ಅರ್ಜಿ ಸಲ್ಲಿಸಿದರು.ಆದರೆ ಉದ್ಯೋಗವನ್ನು ಪಡೆಯಬೇಕೆಂದರೆ  ಒಂದು ಲಿಖಿತಪರೀಕ್ಷೆಯನ್ನು ಬರೆಯಬೇಕಿತ್ತು.ನೇತಾಜಿ ಪರೀಕ್ಷೆಯಲ್ಲಿ ಪಾಸಾಗಬೇಕೆಂದು ಹಗಲಿರುಳು ಅಧ್ಯಯನ ಮಾಡಿ,ಪರೀಕ್ಷೆಯನ್ನು ಬರೆಯಲು ಹೋದರು.ಪರೀಕ್ಷಾಕೊಠಡಿಯಲ್ಲಿ ಪ್ರಶ್ನೆಪತ್ರಿಕೆಯನ್ನು ಪಡೆದು,ಎಲ್ಲಾ ಪ್ರಶ್ನೆಗಳನ್ನೂ ಒಂದು ಬಾರಿ ಓದಿದರು.ಅವುಗಳಲ್ಲಿ ಒಂದು ಪ್ರಶ್ನೆ "ಇಂಡಿಯನ್ ಸೋಲ್ಜರ್ಸ್ ಆರ್ ಜನರಲಿ ಡಿಸ್ ಆನೆಸ್ಟ್" ಎಂದಿತ್ತು.ಈ ಪ್ರಶ್ನೆಯನ್ನು ಮಾತೃಭಾಷೆಯಲ್ಲಿ ಅನುವಾದ ಮಾಡಬೇಕಿತ್ತು.ತಮ್ಮ ಆಸನದಿಂದೆದ್ದ ನೇತಾಜಿ ಸೀದಾ ನಿರೀಕ್ಷಕನ ಬಳಿ ತೆರಳಿದರು.ಈ ಪ್ರಶ್ನೆಯನ್ನು ಪ್ರಶ್ನೆಪತ್ರಿಕೆಯಿಂದ ತೆಗೆದುಹಾಕುವಂತೇ ಕೋರಿದರು.ನಿರೀಕ್ಷಕ ಒಪ್ಪಲಿಲ್ಲ."ಈ ಪ್ರಶ್ನೆ ಸರಿಯಾಗಿಯೇ ಇದೆ,ಉದ್ದೇಶಪೂರ್ವಕವಾಗಿಯೇ ನೀಡಲಾಗಿದೆ.ಇದಕ್ಕೆ ಉತ್ತರ ಬರೆದರಷ್ಟೇ ಉದ್ಯೋಗ.ಇಲ್ಲದಿದ್ದರೆ ಖಂಡಿತ ನಿನಗೆ ಉದ್ಯೋಗ ಸಿಗಲಾರದು" ಎಂದು ವಾದಿಸಿದ. ಪ್ರಶ್ನೆಯನ್ನು ಅನುವಾದ ಮಾಡಲು ನೇತಾಜಿಯವರ ದೇಶಪ್ರೇಮ ಒಪ್ಪಲಿಲ್ಲ."ಈ ಉದ್ಯೋಗದ ಅವಶ್ಯಕತೆ ನನಗಿಲ್ಲ.ನಮ್ಮ ದೇಶದ ಸೈನಿಕರನ್ನು ಅವಹೇಳನ ಮಾಡಿ ಉದ್ಯೋಗ ಪಡೆಯುವಂತಹ ನೀಚಮನಸ್ಥಿತಿ ನನ್ನದಲ್ಲ" ಎಂದು ಪ್ರಶ್ನೆಪತ್ರಿಕೆಯನ್ನು ಅಲ್ಲಿಯೇ ಹರಿದು ಬೀಸಾಕಿ ಪರೀಕ್ಷಾಕೊಠಡಿಯಿಂದ ಹೊರನಡೆದೇಬಿಟ್ಟರು..!! ನೇತಾಜಿ ಒಂದು ಕ್ಷಣ ಸ್ವಾರ್ಥಿಯಾಗಿದ್ದರೆ ಒಳ್ಳೆಯ ಉದ್ಯೋಗವನ್ನು ಸೇರಿ ಜೀವನಪರ್ಯಂತ ಸುಖವಾಗಿರಬಹುದಿತ್ತು.ಆದರೆ ಮನದಲ್ಲಿದ್ದ ಅದಮ್ಯ ದೇಶಪ್ರೇಮ ಸ್ವಾರ್ಥವಿಚಾರವನ್ನು ದೂರಮಾಡಿತ್ತು.ಉದ್ಯೋಗಕ್ಕಿಂತ ದೇಶಪ್ರೇಮವೇ ಹಿರಿದಾಗಿತ್ತು.ಯಾರ ವಿಚಾರ ಹಾಗೂ ಕರ್ಮಗಳು ಸದಾ ದೇಶದ ಒಳಿತನ್ನೇ ಬಯಸುತ್ತದೆಯೋ ಅಂತಹ ವ್ಯಕ್ತಿ ಮಹಾತ್ಮನಾಗುತ್ತಾನೆಂಬುದಕ್ಕೆ ಈ ಘಟನೆಯೇ ಸಾಕ್ಷಿ.

No comments:

Post a Comment