Saturday, 1 April 2017

ಹೀಗಾಯಿತು ವಿಜ್ಞಾನದ ಉಗಮ ಹಾಗೂ ವಿಕಾಸ.

ಪ್ರಪಂಚದಲ್ಲಿ ಉತ್ಪತ್ತಿಯಾದ ಪ್ರತಿಯೊಂದು ವಸ್ತುವಿಗೂ "ಬೀಜ" ಅಂದರೆ ಮೂಲಕಾರಣ
ಇರಲೇಬೇಕು. ಬೀಜದಿಂದ ಉತ್ಪತ್ತಿಯಾದ ವಸ್ತು ವಿಕಾಸವನ್ನು ಹೊಂದಲೇಬೇಕು.
ಆಧುನಿಕವಿಜ್ಞಾನದ ಮೂಲಕಾರಣ ಯಾವುದು..? ವಿಜ್ಞಾನದ ಮೂಲ ಎಲ್ಲಿಂದ ಬಂತು..?
ಪ್ರಪ್ರಥಮವಾಗಿ ವಿಜ್ಞಾನರೂಪಿ ಬೀಜವನ್ನು ಬಿತ್ತಿದವರು ಯಾರು..? ಇವು ಮೂಲಭೂತ
ಪ್ರಶ್ನೆಗಳು. ಎಲ್ಲವನ್ನೂ ವಿಜ್ಞಾನಿಗಳೇ ಕಂಡುಹಿಡಿದರು ಎಂಬುದು ಮೂರ್ಖತ್ವದ
ಪರಮಾವಧಿ..!! ಹಾಗಾದರೆ ವಿಜ್ಞಾನದ ಆವಿರ್ಭಾವವಾಗಿದ್ದು ಹೇಗೆ..? ಜಗತ್ತಿನ
ಮೊಟ್ಟಮೊದಲ ವಿಜ್ಞಾನಿ ಈ ಜಗತ್ತಿನ ಸೃಷ್ಟಿಕರ್ತ ಅಂದರೆ ಭಗವಂತ..!! ಆತನಿಂದಲೇ
ವಿಜ್ಞಾನದ ಉಗಮ ಹಾಗೂ ವಿಕಾಸ..!! ಹೇಗೆಂದು ನೋಡೋಣ.

ವಿಚಾರವಾದಿಗಳ ಪ್ರಕಾರ ವಿಜ್ಞಾನ ಹಾಗೂ ಆಧ್ಯಾತ್ಮ ಪರಸ್ಪರ ವಿರೋಧಿ ತತ್ವಗಳು. ಇದು
ತಪ್ಪು ಗ್ರಹಿಕೆ. ಆಧ್ಯಾತ್ಮ ಹಾಗೂ ಆಧುನಿಕವಿಜ್ಞಾನವನ್ನು ಗಂಭೀರವಾಗಿ
ವಸ್ತುನಿಷ್ಟವಾಗಿ ಅಧ್ಯಯನ ಮಾಡಿದರೆ ವಿಜ್ಞಾನ ಹಾಗೂ ಆಧ್ಯಾತ್ಮಗಳ ಸಾಮ್ಯತೆಯ
ಅರಿವಾಗುತ್ತದೆ. ಆಧುನಿಕ ವಿಜ್ಞಾನದಲ್ಲಿ ಹಲವಾರು ಶಾಖೆಗಳಿವೆ. ಅವುಗಳಲ್ಲಿ
ಭೌತಶಾಸ್ತ್ರ ಈ ಬ್ರಹ್ಮಾಂಡದ ಉತ್ಪತ್ತಿ ಹಾಗೂ ಸಂರಚನೆಯ ಬಗ್ಗೆ ಹಲವು ವಿಷಯಗಳನ್ನು
ತಿಳಿಸುತ್ತದೆ. ಭೌತಶಾಸ್ತ್ರದ ಎರಡು ಶಾಖೆಗಳು ಬಹಳ ಮಹತ್ವವನ್ನು ಹೊಂದಿವೆ. ಅವು
ಜನರಲ್ ರಿಲೇಟಿವಿಟಿ (General Relativity) ಹಾಗೂ ಕ್ಯಾಂಟಮ್ ಮೆಕೆನಿಕ್ಸ್(Quantum
Mechanics)  ಎಂಬವು.

ಗಣಿತಶಾಸ್ತ್ರವನ್ನು ಆಧುನಿಕ ವಿಜ್ಞಾನಗಳ ಜನನಿಯೆಂದು ಕರೆಯಲಾಗುತ್ತದೆ. ವಿಜ್ಞಾನದ
ಬೆಳವಣಿಗೆಯಲ್ಲಿ ಗಣಿತಶಾಸ್ತ್ರದ ಕೊಡುಗೆ ದೊಡ್ಡದು. ಆಧುನಿಕ ಗಣಿತಶಾಸ್ತ್ರದ (Modern
Mathematics) ವ್ಯಾಪ್ತಿ  ಸಮುದ್ರದಷ್ಟು ವಿಶಾಲವಾಗಿದೆ. ಗಣಿತದಲ್ಲಿ ಸಮುಚ್ಚಯ
ಸಿದ್ಧಾಂತ (Set Theory), ಸಂಖ್ಯಾ ಸಿದ್ಧಾಂತ (Number Theory),  ಫಲನ ಹಾಗೂ ತರ್ಕ
ಸಿದ್ಧಾಂತ(Theory of Functions and Logic), ಅಂಶಿಕ ಹಾಗೂ ಸಾಧಾರಣ ಅವಕಲನ
ಸಮೀಕರಣ(Partial and Ordinary Differential Equations), ಬೀಜಗಣಿತ(Algebra)
ಮುಂತಾದ ಹಲವು ಶಾಖೆಗಳಿವೆ.

ಗಣಿತವನ್ನು ಬಿಟ್ಟು ಆಧುನಿಕ ವಿಜ್ಞಾನ(Modern Science)  ಹಾಗೂ ತಂತ್ರಜ್ಞಾನದ
(Technology) ಕಲ್ಪನೆಯನ್ನು ಮಾಡಲು ಸಾಧ್ಯವಿಲ್ಲ. ಆದರೆ ಗಣಿತದ ಜನನಿ ಯಾರು..?
ಗಣಿತದ ಮೂಲಕಾರಣ ಯಾವುದು..? ಗೌಸ್(Gauss)  ಎಂಬ ಪ್ರಸಿದ್ಧ ಗಣಿತಜ್ಞ "ಗಣಿತಶಾಸ್ತ್ರ
ಆಧುನಿಕ ವಿಜ್ಞಾನದ ಜನನಿ , ಗಣಿತದ ಜನನಿ ಸಂಖ್ಯಾಸಿದ್ಧಾಂತ" ಎಂದು ಹೇಳಿದ್ದಾನೆ.
ಹಾಗಾದರೆ ಸಂಖ್ಯಾಸಿದ್ಧಾಂತದ ಮೂಲಕಾರಣ ಯಾವುದು..? ಸಂಖ್ಯಾಸಿದ್ಧಾಂತದ ಮೂಲ
ಪ್ರಾಕೃತಿಕ (Natural Numbers) ಸಂಖ್ಯೆಗಳೆಂದು ಗಣಿತಜ್ಞರು ಹೇಳುತ್ತಾರೆ.
ಪ್ರಾಕೃತಿಕ ಸಂಖ್ಯೆಗಳಿಂದ ಸಂಖ್ಯಾಸಿದ್ಧಾಂತದ ವಿಕಾಸ, ಸಂಖ್ಯಾಸಿದ್ಧಾಂತದಿಂದ ಗಣಿತ,
ಗಣಿತದಿಂದ ಆಧುನಿಕವಿಜ್ಞಾನದ ವಿಕಾಸವೆಂದು ವಿಜ್ಞಾನಿಗಳೂ ಸಹ ನಂಬುತ್ತಾರೆ.

ಸಂಖ್ಯೆಗಳನ್ನು ಕಂಡುಹಿಡಿದಿದ್ದು ಮನುಷ್ಯರಲ್ಲ. ಅದು ಪ್ರಕೃತಿಯ ಕೊಡುಗೆ. ಕೇವಲ
ಮನುಷ್ಯರಿಗಷ್ಟೇ ಅಲ್ಲ, ಪಶು-ಪಕ್ಷಿಗಳಿಗೂ ಸಹ ಗಣನೆಯ ಜ್ಞಾನವಿರುತ್ತದೆ..!!
ಉದಾಹರಣೆಗೆ ಯಾವುದೋ ಒಂದು ಪಕ್ಷಿ ತನ್ನ ಗೂಡಿನಲ್ಲಿ ಹಲವು ಮರಿಗಳೊಂದಿಗೆ
ವಾಸವಿರುತ್ತದೆ. ದುರ್ದೈವವಶಾತ್ ಒಂದು ದಿನ ಪಕ್ಷಿಯ ಕೆಲವು ಮರಿಗಳು
ನಾಪತ್ತೆಯಾಗುತ್ತವೆ.  ಆ ವಿಷಯ ಪಕ್ಷಿಗೆ ತಿಳಿದು ಆತಂಕದಿಂದ ಅತ್ತ ಇತ್ತ ಕಿರುಚುತ್ತಾ
ಹಾರಾಡುವುದನ್ನು ನೋಡಬಹುದು. ಮನೆಯಲ್ಲಿರುವ ಬೆಕ್ಕು ಮೂರು ಮರಿಗಳನ್ನು ಹಾಕಿರುತ್ತದೆ.
ಅವುಗಳಲ್ಲಿ ಒಂದು ಮರಿ ನಾಪತ್ತೆಯಾದರೆ ಬೆಕ್ಕಿನ ಪ್ರಲಾಪ ಹೇಗಿರುತ್ತದೆಂಬುದನ್ನು
ಗಮನಿಸಬಹುದು. ಹಾಗಾದರೆ ಪಶು ಪಕ್ಷಿಗಳಿಗೆ ಸಂಖ್ಯಾಜ್ಞಾನವನ್ನು ನೀಡಿದವರು ಯಾರು..?
ಯಾರೂ ಅಲ್ಲ ಪ್ರಕೃತಿಯೇ. ಪ್ರಕೃತಿ ನೀಡಿದ ಗಣನಾಸಾಮರ್ಥ್ಯದಿಂದ ಪಶುಪಕ್ಷಿಗಳೂ ಸಹ
ಸಂಖ್ಯೆಯನ್ನು ಅರಿಯಲು ಸಮರ್ಥವಾಗಿವೆ.

ಹಾಗಾದರೆ ಪ್ರಾಕೃತಿಕ ಸಂಖ್ಯೆಗಳ ಮೂಲಕಾರಣ ಯಾವುದು..? ಅದು ಪ್ರಕೃತಿ. ಪ್ರಕೃತಿಯ
ಮೂಲಕಾರಣ ಯಾರು ? ಭಗವಂತ..!! ಕ್ರೋನೆಕರ್ (Kronecker) ಎಂಬ ಗಣಿತಜ್ಞ ‘Natural
numbers are God given bricks’(ಪ್ರಾಕೃತಿಕ ಸಂಖ್ಯೆಗಳು ದೇವರು ಕೊಟ್ಟ ಇಟ್ಟಿಗೆ)
ಎಂದು ಸ್ಪಷ್ಟವಾಗಿ ಹೇಳಿದ್ದಾನೆ.

ಹೇಗೆ ಇಟ್ಟಿಗೆಗಳಿಂದ ಭವನಗಳನ್ನು ನಿರ್ಮಿಸುತ್ತೇವೆಯೋ ಹಾಗೇ ಪ್ರಾಕೃತಿಕಸಂಖ್ಯೆಗಳಿಂದ
ಸಂಖ್ಯಾಸಿದ್ಧಾಂತದ ನಿರ್ಮಾಣವಾಗುತ್ತದೆ. ಸಂಖ್ಯಾಸಿದ್ಧಾಂತದಿಂದ ಗಣಿತ, ಗಣಿತದಿಂದ
ಆಧುನಿಕ ವಿಜ್ಞಾನದ ವಿಕಾಸವಾಗುತ್ತದೆ. ಹಾಗಾಗಿ ವಿಜ್ಞಾನದ ಮೂಲಕಾರಣ ಯಾರು..? ಭಗವಂತ.
ಆತನಿಂದ ಸೃಷ್ಟಿಸಲ್ಪಟ್ಟ ಪ್ರಕೃತಿ ಎಂಬುದು ಸ್ಪಷ್ಟವಾಗುತ್ತದೆ.

Tuesday, 28 February 2017

ರಾಷ್ಟ್ರಾಯ ಇದಂ ನ ಮಮ



ಒಮ್ಮೆ ಚಂದ್ರಶೇಖರ ಆಜಾದ್,ಭಗತ್ ಸಿಂಗ್, ರಾಜಗುರು,ಸುಖದೇವ್ ಹಾಗೂ ಬಟುಕೇಶ್ವರದತ್ತರಂತಹ ಕ್ರಾಂತಿಕಾರಿಗಳ ಗುಂಪು ಇಲಾಹಾಬಾದಿನಲ್ಲಿ ತಂಗಿತ್ತು. ಆಜಾದರನ್ನು ಎಲ್ಲರೂ ಪಂಡಿತ್ ಜೀ ಎಂದೇ ಕರೆಯುತ್ತಿದ್ದರು. ಪಂಡಿತ್ ಜೀ ಎಂದರೆ ಕ್ರಾಂತಿಕಾರಿಗಳೆಲ್ಲರಿಗೂ ವಿಶೇಷವಾದ ಗೌರವವಿತ್ತು.

ಒಮ್ಮೆ ಸುಖದೇವ್ ಒಂದು ಕ್ಯಾಲೆಂಡರನ್ನು ತಂದ. ಆ ಕ್ಯಾಲೆಂಡರಿನಲ್ಲಿ ಒಂದು ಚಿತ್ರನಟಿಯ ಭಾವಚಿತ್ರವಿತ್ತು. ಸುಖದೇವ ಆ ಕ್ಯಾಲೆಂಡರನ್ನು ಕೋಣೆಯಲ್ಲಿದ್ದ ಮೊಳೆಗೆ ನೇತುಹಾಕಿ,ಯಾವುದೋ ಕೆಲಸದ ನಿಮಿತ್ತ ಹೊರಹೋದ. ಸ್ವಲ್ಪ ಸಮಯದ ನಂತರ ಪಂಡಿತ್ ಜೀ ಆ ಕೊಠಡಿಗೆ ಬಂದರು. ನೇತುಹಾಕಿದ್ದ ಕ್ಯಾಲೆಂಡರನ್ನು ನೋಡಿ ಆಕ್ರೋಶಗೊಂಡರು. ಕ್ಯಾಲೆಂಡರನ್ನು ಹರಿದು ಬೀಸಾಡಿದರು. ಸ್ವಲ್ಪ ಸಮಯದ ಬಳಿಕ ಸುಖದೇವ್ ಬಂದ. ಕೋಣೆಯಲ್ಲಿ ಕ್ಯಾಲೆಂಡರ್ ಇರಲಿಲ್ಲ. ಹರಿದು ಬೀಸಾಡಿದ ಕ್ಯಾಲೆಂಡರಿನ ಅವಶೇಷಗಳನ್ನು ಕಂಡ. ಸುಖದೇವನೂ ಮುಂಗೋಪಿ. ಕೋಪದಲ್ಲಿ ಅಲ್ಲಿರುವವರನ್ನೆಲ್ಲಾ ಬೈಯ್ದ. 

"ಈ ಕ್ಯಾಲೆಂಡರನ್ನು ಹರಿದು ಬೀಸಾಕಿದವರು ಯಾರೆಂದು ಹೇಳಿ..?" ಕೋಪದಿಂದ ಕೇಳಿದ.
"ಅದನ್ನು ಹರಿದಿದ್ದು ನಾನೇ ಸುಖದೇವ್" ಪಂಡಿತ್ ಜಿ ಮೆಲ್ಲಗೆ ಉತ್ತರಿಸುತ್ತಾರೆ.
"ಪಂಡಿತ್ ಜೀ ಅದನ್ನೇಕೆ ಹರಿದು ಹಾಕಿದಿರಿ..? ಬಹಳ ಚೆನ್ನಾಗಿತ್ತು" ಸುಖದೇವನ ಪ್ರಶ್ನೆ.
"ಈ ಕ್ಯಾಲೆಂಡರಿನಿಂದ ನಮಗೇನು ಉಪಯೋಗ ಸುಖದೇವ್? ನಮ್ಮ ಉದ್ದೇಶ ಆಜಾದಿ. ಅದಕ್ಕೆ ಬೇಕಾದ್ದು ಏಕಾಗ್ರತೆ ಹಾಗೂ ಬಲಿದಾನ. ನಮ್ಮ ಏಕಾಗ್ರತೆಗೆ ಭಂಗ ತರುವಂತಹ ಯಾವ ಆಕರ್ಷಣೆಯೂ ನನಗಿಷ್ಟವಾಗುವುದಿಲ್ಲ. ಹಾಗಾಗಿ ಆ ಕ್ಯಾಲೆಂಡರನ್ನು ಹರಿದು ಹಾಕಿದೆ" ಆಜಾದರ ಉತ್ತರ ಅರ್ಥಗರ್ಭಿತವಾಗಿತ್ತು.

ಸುಖದೇವ್ ಅರೆಗಳಿಗೆ ಸ್ತಬ್ಧನಾದ. ಪಂಡಿತಜಿಯ ಮಾತಿನ ಗೂಢಾರ್ಥದ ಅರಿವಾಯಿತು.
ಕ್ರಾಂತಿಕಾರಿಗಳಿಗೆ ಸ್ವಾರ್ಥಕ್ಕಿಂತ ದೇಶದ ಹಿತವೇ ಪ್ರಮುಖವಾಗಿತ್ತು. ಹಾಗಾಗಿ ಕಷ್ಟ-ಅವಮಾನಗಳನ್ನು ಸಹಿಸಿ, ತಮ್ಮ ಜೀವವನ್ನೇ ಬಲಿದಾನ ಮಾಡಿದರು. ದುರದೃಷ್ಟವೆಂದರೆ ಹುತಾತ್ಮರಾದರೇ ಹೊರತು ಮಹಾತ್ಮರಾಗಲಿಲ್ಲ...!!

Thursday, 16 February 2017

ದಾರಿ ಯಾವುದಯ್ಯಾ ಸ್ವರ್ಗಕ್ಕೆ...?



ಒಮ್ಮೆ ಯಮದೂತ ಒಬ್ಬ ವ್ಯಕ್ತಿಯ ಆತ್ಮವನ್ನು ಯಮರಾಜನಲ್ಲಿಗೆ ಒಯ್ದು ಕೇಳಿದ- "ಹೇ ರಾಜ ! ಈ ವ್ಯಕ್ತಿ ಒಬ್ಬ ಮಹಾತ್ಮನಾಗಿದ್ದ. ತಾರುಣ್ಯದಲ್ಲಿ ತನ್ನ ತಂದೆ-ತಾಯಿ,ಪತ್ನಿ-ಮಕ್ಕಳನ್ನು ತೊರೆದು ಅರಣ್ಯಕ್ಕೆ ಹೋಗಿ ತಪಸ್ಸನ್ನಾಚರಿಸಿದ. ಸಂಸಾರದಿಂದ ವಿಮುಕ್ತನಾಗಿ ಸಂಪೂರ್ಣ ಜೀವನವನ್ನು ಆಧ್ಯಾತ್ಮದಲ್ಲೇ ಕಳೆದ. ಇಂತಹ ಧರ್ಮಪರಾಯಣನನ್ನು ಸ್ವರ್ಗಕ್ಕೆ ಕಳುಹಿಸಲೇ..?"

ಆಗ ಯಮರಾಜ ಮುಗುಳ್ನಗುತ್ತಾ " ಸ್ವಕರ್ತವ್ಯವನ್ನು ತ್ಯಾಗ ಮಾಡಿದ ಮನುಷ್ಯ ಎಂದಿಗೂ ಧರ್ಮಾತ್ಮನಾಗಲಾರ. ಆತನಿಗೆಂದೂ ಸ್ವರ್ಗಪ್ರಾಪ್ತಿಯಾಗದು. ಆತನನ್ನು ಪುನಃ ಭುವಿಗೆ ಕಳುಹಿಸು. ಸ್ವಕರ್ತವ್ಯದ ಜೊತೆಗೆ ಧರ್ಮಾಚರಣೆಯನ್ನು ಮಾಡಿಕೊಂಡು ಬರಲಿ" ಎಂದ.

ಯಮದೂತ ಮತ್ತೊಬ್ಬ ವ್ಯಕ್ತಿಯ ಆತ್ಮವನ್ನು ತಂದು " ಈ ವ್ಯಕ್ತಿ ಬಹಳ ಕರ್ತವ್ಯಪರಾಯಣನಾಗಿದ್ದ. ಸ್ವಕರ್ತವ್ಯವೇ ಜೀವನವೆಂದು ತಿಳಿದಿದ್ದ. ಈತನ ಪತ್ನಿ ಅನಾರೋಗ್ಯದಿಂದ ಸತ್ತರೂ ದುಃಖಿಸದೇ ಕರ್ತವ್ಯಪಾಲನೆಯಲ್ಲೇ ನಿರತನಾಗಿದ್ದ. ಈತನನ್ನಾದರೂ ಸ್ವರ್ಗಕ್ಕೆ ಕಳುಹಿಸಲೇ..? ಎಂದು ಕೇಳಿದ. 

ಆಗ ಯಮರಾಜ "ಇಂತಹ ಹೃದಯಹೀನ ವ್ಯಕ್ತಿಗೆ ಸ್ವರ್ಗದಲ್ಲೇನು ಕೆಲಸ..? ಪ್ರೇಮಭಾವನೆಯ ಮೂಲಕ ಮಾಡಿದ ಕರ್ತವ್ಯ ಪ್ರಶಂಸನೀಯವಾಗಿರುತ್ತದೆ. ಭಾವನೆಯೇ ಇಲ್ಲದೇ ಮಾಡಿದ ಕರ್ತವ್ಯ ವ್ಯರ್ಥವೆನಿಸುತ್ತದೆ. ಈತನಿಗೂ ಸ್ವರ್ಗಪ್ರಾಪ್ತಿಯಾಗಲಾರದು. ಪುನಃ ಭೂಮಿಗೆ ಕಳುಹಿಸು. ಭಾವನೆಗಳ ಮೂಲಕ ಕರ್ತವ್ಯಗಳನ್ನಾಚರಿಸುವಂತೇ ಪ್ರೇರೇಪಿಸು" ಎಂದು ದೂತನಿಗೆ ಹೇಳಿದ.

ಯಮದೂತ ಇನ್ನೊಬ್ಬ ವ್ಯಕ್ತಿಯ ಆತ್ಮವನ್ನು ತಂದು " ದೊರೆ ! ಈತ ಒಬ್ಬ ಸಾಮಾನ್ಯ ಗೃಹಸ್ಥ. ತನ್ನ ಜೀವಿತದುದ್ದಕ್ಕೂ ಪರಮ ಆಸ್ತಿಕನಾಗಿದ್ದ. ಪಾಪಕಾರ್ಯಗಳನ್ನು ಮಾಡದೇ ಜೀವನವನ್ನು ಸವೆಸಿದ. ತನ್ನ ಪರಿವಾರದವರನ್ನು,ಅನ್ಯರನ್ನು ಪ್ರೇಮಪೂರ್ವಕವಾಗಿ ಕಂಡ. ಸದಾ ಅನ್ಯರ ಒಳಿತನ್ನೇ ಬಯಸಿದ. ಅನ್ಯರ ಏಳ್ಗೆಗೆ ಶ್ರಮಿಸಿದ. ಈತನನ್ನಾದರೂ ಸ್ವರ್ಗಕ್ಕೆ ಕಳುಹಿಸಲೇ..?" ಎಂದು ಕೋರಿಕೊಂಡ.

ಯಮರಾಜನ ಸಂತಸಕ್ಕೆ ಪಾರವಿರಲಿಲ್ಲ. "ದೂತ..! ಈ ಸ್ವರ್ಗಲೋಕ ಇಂತವರಿಗಾಗಿಯೇ ಇದ್ದಿದ್ದು. ಈತನನ್ನು ಆದರಪೂರ್ವಕವಾಗಿ ಸ್ವರ್ಗಕ್ಕೆ ಕಳುಹಿಸು ಹಾಗೂ ಈತ ಆನಂದದಿಂದಿರಲು ಸರ್ವವ್ಯವಸ್ಥೆಯನ್ನೂ ಮಾಡು" ಎಂದು ಯಮದೂತನಿಗೆ ಹೇಳಿದ. 

ಯಾರು ಪಾಪಕರ್ಮಗಳಿಂದ ದೂರವಿರುತ್ತಾರೋ,ಯಾರು ಸರ್ವಪ್ರಾಣಿಗಳನ್ನು ಆದರದಿಂದ ಕಾಣುತ್ತಾರೋ,ಯಾರು ಸರ್ವಜಂತುಗಳಲ್ಲೂ ಪ್ರೇಮಭಾವನೆಯನ್ನು ಹೊಂದಿರುತ್ತಾರೋ,ಯಾರು ಕರ್ತವ್ಯನಿಷ್ಠರಾಗಿರುತ್ತಾರೋ ಅಂತವರು ಸ್ವರ್ಗೀಯ ಆನಂದದ ಅಧಿಕಾರಿಗಳಾಗಿರುತ್ತಾರೆ.

"ಸರ್ವೇ ಭವಂತು ಸುಖಿನಃ"

Tuesday, 14 February 2017

ಭಕ್ತರ ರಕ್ಷಣೆ ಭಗವಂತನ ಹೊಣೆ



ಮಹಾಭಾರತ ಯುದ್ಧ. ಮೊದಲ ಎಂಟು ದಿನಗಳ ಕಾಲ ಪಾಂಡವರ ಸೇನೆಯಲ್ಲಿ ಹಾಹಾಕರವೇ ನಡೆದಿತ್ತು. ಅದಕ್ಕೆ ಕಾರಣ ಭೀಷ್ಮಪಿತಾಮಹನ ಸೇನಾಧಿಪತ್ಯ. ಪಾಂಡವರಿಗೆ ಜಯಲಕ್ಷ್ಮಿ ದೂರವಾಗುತ್ತಿರುವಂತೇ ಭಾಸವಾಗಿತ್ತು. ಭೀಷ್ಮಪಿತಾಮಹನ ಸಮರ್ಥ ಸೇನಾಧಿಪತ್ಯವನ್ನು ಕಂಡು ದುರ್ಯೋಧನನಿಗೆ ಒಳಗೊಳಗೆ ಸಂತಸವಾಗುತ್ತಿದ್ದರೂ,ತೋರಿಕೆಗೆ ದುಃಖವನ್ನೇ ವ್ಯಕ್ತಪಡಿಸುತ್ತಿದ್ದ. ಆ ದುಃಖಕ್ಕೆ ಕಾರಣ ಭೀಷ್ಮ ಪಂಚಪಾಂಡವರಲ್ಲಿ ಯಾರನ್ನೂ ಹತ್ಯೆಗೈಯ್ಯಲಿಲ್ಲವೆಂಬುದು. ಬಹಿರಂಗವಾಗಿ ಭೀಷ್ಮರಲ್ಲೂ ತನ್ನ ಅಳಲನ್ನು ತೋಡಿಕೊಳ್ಳುತ್ತಾನೆ. "ಪಿತಾಮಹ ! ಎಂಟು ದಿನಗಳ ಕಾಲ ಸಮರ್ಥವಾಗಿ ಸೇನಾಧಿಪತ್ಯವನ್ನು ನಿರ್ವಹಿಸಿದ್ದೀರಿ. ಪಾಂಡವಸೇನೆ ಕಂಗೆಡುವಂತೇ ಮಾಡಿದ್ದೀರಿ. ಆದರೆ ನೀವು ಪಂಚಪಾಂಡವರಲ್ಲಿ ಯಾರನ್ನೂ ವಧಿಸುವ ಪ್ರಯತ್ನ ಮಾಡಿಲ್ಲ. ಏಕೆ ಪಿತಾಮಹ..? ಪಾಂಡವರೆಂದರೆ ಅಷ್ಟೊಂದು ಮಮಕಾರವೇ..? ಸಲ್ಲದು ಪಿತಾಮಹ...!! ಸೇನೆಯ ಅಧಿಪತ್ಯವನ್ನು ವಹಿಸಿಕೊಂಡು ಮಮಕಾರವನ್ನು ಹೊಂದುವುದು ನಿಮ್ಮಂತಹ ಕ್ಷತ್ರಿಯವೀರರಿಗೆ ತರವಲ್ಲ. ಮಮಕಾರವನ್ನು ಬಿಟ್ಟು ಪಾಂಡವರೊಂದಿಗೆ ಹೋರಾಡಿ. ಅವರನ್ನು ವಧಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿ" ಮಾತಿನಲ್ಲೇ ಭೀಷ್ಮನನ್ನು ಚುಚ್ಚುತ್ತಾನೆ. ಸಹಜವಾಗಿಯೇ ಭೀಷ್ಮನಿಗೆ ಕೋಪ ಆವರಿಸುತ್ತದೆ. "ನಾಳೆಯ ಯುದ್ಧದಲ್ಲಿ ಖಂಡಿತವಾಗಿಯೂ ನಾನು ಅರ್ಜುನನನ್ನು ವಧಿಸುತ್ತೇನೆ" ಎಂದು ಪ್ರತಿಜ್ಞೆಯನ್ನು ಮಾಡುತ್ತಾನೆ.

ಭೀಷ್ಮಪ್ರತಿಜ್ಞೆ ಎಂದರೆ ಕೇಳಬೇಕೆ..? ಅಸಂಭವ ಎನ್ನುವ ಮಾತೇ ಇಲ್ಲ. ಭೀಷ್ಮನ ಪ್ರತಿಜ್ಞೆಯನ್ನು ಕೇಳಿದ ಪಾಂಡವರ ಪಾಳಯದಲ್ಲಿ ದಿಗಿಲು.! ಸಾಕ್ಷಾತ್ ಕೃಷ್ಣಪರಮಾತ್ಮನೂ ಚಿಂತೆಗೊಳಗಾದ. ನಾಳೆ ಅರ್ಜುನನನ್ನು ಕಳೆದುಕೊಳ್ಳುತ್ತೇವೆಂಬ ಅಳಕು ಪಾಂಡವರ ಪಾಳಯದಲ್ಲಿ ಮೂಡಿತು. ದಿಕ್ಕುತೋಚದಂತಾದ ಪರಿಸ್ಥಿತಿ. ರಾತ್ರಿಯಾದರೂ ಯಾರೊಬ್ಬರೂ ಮಲಗಲಿಲ್ಲ. ಅರ್ಜುನನನ್ನು ರಕ್ಷಿಸುವ ಪರಿ ಹೇಗೆಂಬುದೇ ಚಿಂತೆ. ಕೃಷ್ಣನದು ರಣತಂತ್ರ,ಅರ್ಜುನನನ್ನು ಹೇಗೆ ರಕ್ಷಿಸಲಿ..? ಯೋಚಿಸುತ್ತಾ ಅರ್ಜುನನ ಶಿಬಿರಕ್ಕೆ ಬಂದ. ಅರ್ಜುನ ಮಲಗಿ ಗಾಢವಾಗಿ ನಿದ್ರಿಸುತ್ತಿದ್ದಾನೆ. ಅಲ್ಲಿ ಭೀಷ್ಮ ಅರ್ಜುನನನ್ನು ನಾಳೆ ಕೊಲ್ಲುವೆನೆಂದು ಘನಘೋರ ಪ್ರತಿಜ್ಞೆ ಮಾಡಿದ್ದಾನೆ. ಇಲ್ಲಿ ಪಾಂಡವರು ಚಿಂತಾಕ್ರಾಂತರಾಗಿ ಕುಳಿತಿದ್ದಾರೆ. ಇಂತಹ ಸಂದರ್ಭದಲ್ಲಿ ಅರ್ಜುನನದು ಗಾಢನಿದ್ರೆ..!! ಕೃಷ್ಣನಿಗೆ ನಗು ಬರುತ್ತದೆ. ಅರ್ಜುನನನ್ನು ನಿದ್ರೆಯಿಂದೆಬ್ಬಿಸಿ " ಅಲ್ಲಯ್ಯಾ ಮಹಾನುಭಾವ..ಭೀಷ್ಮ ಪ್ರತಿಜ್ಞೆಯ ವಿಷಯ ನಿನಗೆ ಅರಿವಿದೆಯಾ..? ನಾಳೆ ನಿನ್ನನ್ನು ಆತ ವಧಿಸುತ್ತಾನಂತೆ. ಮುಂದಿನ ಮಾರ್ಗವನ್ನು ಚಿಂತಿಸದೇ ನೆಮ್ಮದಿಯಿಂದ ನಿದ್ರಿಸುತ್ತಿರುವೆಯಲ್ಲ..? ಎಂದು ಕೇಳುತ್ತಾನೆ. ಅರ್ಜುನ ಮುಗುಳ್ನಗುತ್ತಾ "ಎಲ್ಲವೂ ಗೊತ್ತಿದೆ ದೇವ..!! ಆದರೆ ನನಗ್ಯಾವ ಆತಂಕವೂ ಇಲ್ಲ. ಏಕೆಂದರೆ ನನ್ನನ್ನು ರಕ್ಷಿಸುವ ದೇವ ನನ್ನ ರಕ್ಷಣೆಯ ಮಾರ್ಗವನ್ನು ಖಂಡಿತವಾಗಿಯೂ ಹುಡುಕಿರುತ್ತಾನೆ. ನಾನು ನಿದ್ರಿಸಿದರೂ ಆತ ಜಾಗೃತನಾಗಿ ನನ್ನ ರಕ್ಷಣೆಯ ಮಾರ್ಗವನ್ನು ಅನ್ವೇಷಿಸಿರುತ್ತಾನೆಂಬ ಅಚಲವಾದ ನಂಬಿಕೆ ನನಗಿದೆ. ನಾನು ನಂಬಿರುವ ದೇವ ನನ್ನನ್ನೆಂದಿಗೂ ಕೈಬಿಡಲಾರ. ಆದ್ದರಿಂದ ನನ್ನ ರಕ್ಷಣೆಯ ಬಗ್ಗೆ ಚಿಂತಿಸದೇ ನಾನು ನಿಶ್ಚಿಂತೆಯಿಂದ ಮಲಗಿದ್ದೇನೆ" ಅರ್ಜುನನ ಮಾತಿಗೆ ಶ್ರೀಕೃಷ್ಣ ತಲೆದೂಗಿದ. ಅರ್ಜುನನ ರಕ್ಷಣೆಯ ಸಾರಥ್ಯವನ್ನು ವಹಿಸಿದ. 

ಅದನ್ನೇ ತಾನೇ ಗೀತಾಚಾರ್ಯ ಗೀತೆಯಲ್ಲಿ ಬೋಧಿಸಿದ್ದು...
"ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಂ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ || ಎಂಬುದಾಗಿ.
ನಮ್ಮ ರಕ್ಷಣೆಯ ಜವಾಬ್ದಾರಿ ಭಗವಂತನದು. ಆತನ ಅಣತಿಯಂತೇ ಎಲ್ಲವೂ ನಡೆಯುತ್ತದೆ. ಯಾರು ಭಗವಂತನನ್ನೇ ಅನವರತವಾಗಿ ಭಜಿಸುತ್ತಾರೋ ಅಂತಹ ಭಕ್ತರ ಯೋಗಕ್ಷೇಮವನ್ನು ಸಾಕ್ಷಾತ್ ಭಗವಂತನೇ ವಹಿಸಿಕೊಳ್ಳುತ್ತಾನೆ.

"ಸರ್ವೇ ಭವಂತು ಸುಖಿನಃ"

Thursday, 2 February 2017

ಪ್ರಾಣವನ್ನಾದರೂ ಬಿಟ್ಟೇನು,ಆದರೆ ಧರ್ಮ ಬಿಡಲಾರೆ.





"ವೀರ ಹಕೀಕತರಾಯ್" ಎಂದರೆ ಪಂಜಾಬಿಗಳಿಗೆ ಇಂದಿಗೂ ಅದಮ್ಯ ಅಭಿಮಾನ. ೧೭೧೯ರಲ್ಲಿ ಪಂಜಾಬಿನ ಸಿಯಾಲಕೋಟ್ ಎಂಬ ಹಳ್ಳಿಯಲ್ಲಿ ಜನಿಸಿದ ಹಕೀಕತರಾಯ್,ಕೇವಲ ೫ನೇ ವಯಸ್ಸಿನಲ್ಲೇ ಇತಿಹಾಸ ಹಾಗೂ ಸಂಸ್ಕೃತದಲ್ಲಿ ಮಹಾಮೇಧಾವಿಯಾಗಿದ್ದ. ೧೦ನೇ ವಯಸ್ಸಿನಲ್ಲಿ ಆತನಿಗೆ "ಫಾರಸಿ" ಭಾಷೆ ಕಲಿಯಬೇಕೆಂಬ ಆಸೆ ಮೂಡಿತು. ಫಾರಸಿ ಭಾಷೆಯನ್ನು ಕಲಿಯಲು ಮದರಸಾ ಸೇರಿದ. ಮದರಸಾದಲ್ಲಿರುವ ವಿದ್ಯಾರ್ಥಿಗಳು ಇಸ್ಲಾಂ ಅನುಯಾಯಿಗಳು. ಸದಾ ಹಿಂದೂ ದೇವ-ದೇವತೆಗಳನ್ನು ನಿಂದಿಸುವುದೇ ಅವರ ಕಾಯಕವಾಗಿತ್ತು. ಆದರೆ ಹಕೀಕತನ ಮುಂದೆ ಅವರಾಟ ನಡೆಯುತ್ತಿರಲಿಲ್ಲ. ನಿಂದಿಸುವವರ ಎದುರು ನಿಂತು ವಾದವನ್ನು ಮಾಡಿ ಅವರೇ ಸೋಲೊಪ್ಪಿಕೊಳ್ಳುವಂತೇ ಮಾಡುತ್ತಿದ್ದ. ಇದು ಮುಸ್ಲಿಂ ವಿದ್ಯಾರ್ಥಿಗಳಿಗೆ ಇರಿಸು-ಮುರಿಸನ್ನುಂಟು ಮಾಡಿತ್ತು. ವಾದದಲ್ಲಿ ಹಕೀಕತನನ್ನು ಗೆಲ್ಲಲು ಸಾಧ್ಯವೇ ಇಲ್ಲವಾಗಿತ್ತು.
ಹಕೀಕತನನ್ನು ಬೌದ್ಧಿಕವಾಗಿ ಗೆಲ್ಲಲಾರದ ವಿದ್ಯಾರ್ಥಿಗಳು ಆತನ ಮೇಲೆ ದೈಹಿಕ ಹಲ್ಲೆ ನಡೆಸಿದರು. ಅಲ್ಲದೇ ಆತ ಬೀಬಿ ಫಾತಿಮಾಳನ್ನು ಅಪಮಾನಿಸಿದನೆಂದು ಮದರಸಾದ ಮೌಲ್ವಿಗೆ ದೂರನ್ನು ನೀಡಿದರು. ಆಕ್ರೋಶಗೊಂಡ ಮೌಲ್ವಿ ನಗರದ ಕಾಜಿಯ ಬಳಿ ದೂರನ್ನು ಸಲ್ಲಿಸಿದ. ಮತಾಂಧ ಕಾಜಿ ಹಕೀಕತನನ್ನು ಆರೋಪಿಯನ್ನಾಗಿಸಿ,ಹಕೀಕತನಿಗೆ ಸಾವಿನ ಶಿಕ್ಷೆಯನ್ನು ವಿಧಿಸಬೇಕು ಅಥವಾ ಆತ ಇಸ್ಲಾಂ ಧರ್ಮಕ್ಕೆ ಮತಾಂತರವಾಗಬೇಕೆಂದು ಅಧಿಸೂಚನೆ ಹೊರಡಿಸಿದ. ಹಕೀಕತನ ಪೋಷಕರು ಇಸ್ಲಾಂಗೆ ಮತಾಂತರವಾಗೆಂದು ಪರಿಪರಿಯಾಗಿ ಬೇಡಿಕೊಂಡರು. ಆದರೆ ಹಕೀಕತ ಅವರ ಮಾತನ್ನು ತಿರಸ್ಕರಿಸಿ "ಪ್ರಾಣವನ್ನಾದರೂ ಬಿಟ್ಟೇನು,ಆದರೆ ಧರ್ಮ ಬಿಡಲಾರೆ" ಎಂದು ನಿಶ್ಚಯಿಸಿದ. ೧೭೩೪ರಲ್ಲಿ ಹಕೀಕತನಿಗೆ ಮರಣದಂಡನೆಯನ್ನು ನೀಡಲಾಯಿತು. ಮತಾಂಧತೆಯ ಕರಿನೆರಳಲ್ಲಿ ಮುಗ್ಧಜೀವವೊಂದು ಕರಗಿಹೋಯಿತು.

Thursday, 26 January 2017

ಹಾಲಕ್ಕಿ ಕೋಗಿಲೆಗೆ ಪದ್ಮಶ್ರೀ..

ಬಡತನ,ಅನಕ್ಷರತೆ,ವಿಧಿಯಾಟಗಳಿಗೆ ಸಿಲುಕಿ ತನ್ನ ಬಾಳು ಅಕ್ಷರಶಃ ಬರಿದಾದರೂ ಹಲವರಿಗೆ ಬದುಕಿನ ದಾರಿ ತೋರಿದ ಸುಕ್ರಜ್ಜಿಯ ಬದುಕು ನನ್ನನ್ನು ಕಾಡುತ್ತಲೇ ಇದೆ. ವಿದ್ಯಾವಂತರಾಗಿ,ಪ್ರತಿಷ್ಠಿತ ಉದ್ಯೋಗದಲ್ಲಿದ್ದರೂ ಜೀವನೋತ್ಸಾಹವನ್ನೇ ಕಳೆದುಕೊಂಡವರಂತೇ ವರ್ತಿಸುವ ಹಲವರನ್ನು ನೋಡಿದರೆ ಸುಕ್ರಜ್ಜಿಯ ಸಾಧನೆಯೇ ಹಿರಿದೆನಿಸುತ್ತದೆ. ಸುಕ್ರಜ್ಜಿ ಕನ್ನಡತಿಯೆಂಬ ಅಭಿಮಾನದ ಜೊತೆ ಉತ್ತರಕನ್ನಡದ ಹಾಲಕ್ಕಿ ಸಮುದಾಯದವಳೆಂಬ ಕಾರಣವೂ ಸಹ  ನನ್ನಭಿಮಾನವನ್ನು ಇಮ್ಮಡಿಗೊಳಿಸಿದೆ.

ಸುಕ್ರಜ್ಜಿಯ ಬಾಳೇ ಒಂದು ಹೋರಾಟ. ಉತ್ತರಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬಡಗೇರಿ ಎಂಬ ಪುಟ್ಟ ಹಳ್ಳಿಯಲ್ಲಿ ವಾಸಿಸುತ್ತಿರುವ ಸುಕ್ರಜ್ಜಿ ಬಾಲ್ಯದಿಂದಲೂ ಬಡತನವನ್ನು ಅನುಭವಿಸುತ್ತಲೇ ಬಂದಿದ್ದಾರೆ. ೧೪ನೇ ವಯಸ್ಸಿನಲ್ಲಿ ತನಗಿಂತಲೂ ಬಹಳ ಹಿರಿಯನಾದ ಬೊಮ್ಮಗೌಡನೊಂದಿಗೆ ವಿವಾಹವಾದ ಸುಕ್ರಜ್ಜಿ ಬಹುಬೇಗ ತನ್ನ ಗಂಡನನ್ನು ಕಳೆದುಕೊಂಡರು. ಇಬ್ಬರು ಮಕ್ಕಳೂ ವಿಧಿವಶರಾದರು. ಬದುಕಿಗೆ ಆಸರೆಯಾಗಿರಲೆಂದು ಸಾಕಿದ್ದ ಮಗನೂ ಮದ್ಯವ್ಯಸನಿಯಾಗಿ ಅಸುನೀಗಿದ. ಬದುಕಿನಲ್ಲನುಭವಿಸಿದ್ದೆಲ್ಲವೂ ಕಷ್ಟಗಳೇ. ಆದರೂ ಸುಕ್ರಜ್ಜಿ ಗಟ್ಟಿಗಿತ್ತಿ. ಕಷ್ಟಗಳಿಗೆ ಅಂಜಲಿಲ್ಲ. 

ಕೊನೆಗೆ,ಸುಕ್ರಜ್ಜಿಯ ಬದುಕಿಗೆ ಆಸರೆಯಾಗಿದ್ದು,ತಾಯಿಯಿಂದ ಕಲಿತ ಹಾಡುಗಳು. ಸುಮಾರು ಎಂಟುನೂರು ತಾಸುಗಳ ಕಾಲ ಹಾಡಬಲ್ಲಷ್ಟು ಹಾಡುಗಳನ್ನು ಅನಕ್ಷರಸ್ಥೆಯಾಗಿರುವ ಸುಕ್ರಜ್ಜಿ ಕಲಿತಿದ್ದಳು..!! ಹಾಲಕ್ಕಿ ಜಾನಪದ ಹಾಡುಗಳು, ಕೃಷಿಗೆ ಸಂಬಂಧಿಸಿದ ಹಾಡುಗಳು, ಮದುವೆ ಹಾಡುಗಳು,ದೇವರ ಹಾಡುಗಳು,ಆಚಾರ-ವಿಚಾರಗಳಿಗೆ ಸಂಬಂಧಿಸಿದ ಹಾಡುಗಳು , ಜಾನಪದ ಕಥೆ-ಕವನ,ಒಗಟುಗಳು,ಮನೆಮದ್ದು ಮುಂತಾದವುಗಳ ಸಂಗ್ರಹವೇ ಸುಕ್ರಜ್ಜಿಯ ಬಳಿಗಿದೆ. ಒಂದು ಸಮುದಾಯ ಶಾಶ್ವತವಾಗಿರಬೇಕಾದರೆ ಅದರ ಸಂಸ್ಕೃತಿಯ ರಕ್ಷಣೆ ಮಹತ್ವವಾಗಿರುತ್ತದೆ. ಹಾಲಕ್ಕಿ ಸಮುದಾಯದ ರಕ್ಷಣೆ ಅದರ ಹಾಡುಗಳಲ್ಲಿದೆ. ಅಂತಹ ಹಾಡುಗಳನ್ನು ರಕ್ಷಿಸಿ,ಬೇರೆಯವರಿಗೂ ಅದನ್ನು ಕಲಿಸುವ ಕಾಯಕದಲ್ಲಿ ಸುಕ್ರಜ್ಜಿ ಇಂದಿಗೂ ನಿರತಳಾಗಿದ್ದಾಳೆ. ಆಕಾಶವಾಣಿ,ದೂರದರ್ಶನದ ಮುಖಾಂತರ ಸುಕ್ರಜ್ಜಿಯ ಹಾಡುಗಳು ದೇಶಾದ್ಯಂತ ಪ್ರಸಾರವಾಗಿವೆ. 

೮೦ ರ ಇಳಿವಯಸ್ಸಿನಲ್ಲಿರುವ ಸುಕ್ರಜ್ಜಿಯ ಜೀವನೋತ್ಸಾಹವನ್ನು ಕಂಡರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಬೆಳಿಗ್ಗೆ ೪-೩೦ ಕ್ಕೆ ಎದ್ದೇಳುವ ಸುಕ್ರಜ್ಜಿ ಕಟ್ಟಿಗೆ ತರಲು ಕಾಡಿಗೆ ತೆರಳುತ್ತಾಳೆ. ಅಲ್ಲಿಂದ ಬಂದು ಮನೆಗೆಲಸ, ಗದ್ದೆನೆಟ್ಟಿ , ಗದ್ದೆಕೊಯ್ಲು , ಸೊಪ್ಪು ಕಡಿಯುವುದು  ಮುಂತಾದ ರೈತಾಬಿ ಕೆಲಸದಲ್ಲಿ ಸುಕ್ರಜ್ಜಿ ಬ್ಯುಸಿಯಾಗಿಯೇ ಇರುತ್ತಾಳೆ..!! ಮೊನ್ನೆ ಪದ್ಮಶ್ರೀ ಪ್ರಶಸ್ತಿ ಬಂದಾಗ ಉತ್ತರಕನ್ನಡದ ಜಿಲ್ಲಾಧಿಕಾರಿಗಳು ಸುಕ್ರಜ್ಜಿಯನ್ನು ಸನ್ಮಾನಿಸಬೇಕೆಂದು ಕಾರನ್ನು ಕಳಿಸಿದ್ದರಂತೆ. ಆದರೆ ಕಾರು ಸುಕ್ರಜ್ಜಿಯ ಮನೆಗೆ ಬಂದಾಗ ಆಕೆ ಕಟ್ಟಿಗೆ ತರಲು ಕಾಡಿಗೆ ಹೋಗಿದ್ದಳಂತೆ. ಮುಗ್ಧಮನಸ್ಸಿನ ಸುಕ್ರಜ್ಜಿ ಇಂದಿಗೂ ಪ್ರಶಸ್ತಿ ಪುರಸ್ಕಾರಗಳ ಹಿಂದೆ ಬಿದ್ದವಳಲ್ಲ. ಅವಳ ಸಾಧನೆಯನ್ನು ಪುರಸ್ಕರಿಸಿ ಹಲವಾರು ಪುರಸ್ಕಾರಗಳು ಬಂದರೂ ಇಂದಿಗೂ ಸುಕ್ರಜ್ಜಿಗೆ ಅಹಂಕಾರ ಬಂದಿಲ್ಲ. ಇಂದಿಗೂ ಆಕೆಯದು ಮಗುವಿನಂತಹ ಮನಸ್ಸು,ಅದೇ ಮುಗುಳ್ನಗೆ.ಇನ್ನು ಸಮಯ ಸಿಕ್ಕಾಗ ಗೆಳತಿಯರೊಂದಿಗೆ ಹಾಡು,ಯುವಜನತೆಗೆ ಮಾರ್ಗದರ್ಶನ , ಸಾಮಾಜಿಕ ಕಾಳಜಿಯಂತಹ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾಳೆ. ಮದ್ಯಪಾನವನ್ನು ವಿರೋಧಿಸಿ ಸುಕ್ರಜ್ಜಿ ಒಂದು ದೊಡ್ಡ ಆಂದೋಲನವನ್ನೇ ಮಾಡಿದ್ದಾಳೆ. ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಸುಕ್ರಜ್ಜಿ ಹೋರಾಡುತ್ತಲೇ ಇದ್ದಾಳೆ. ಸುಕ್ರಜ್ಜಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿರುವುದು ನಿಜಕ್ಕೂ ಸಂತಸದ ವಿಷಯ.