Thursday, 22 September 2016

ಸೂರ್ಯನ ಪರ್ಯಾಯ ಪದಗಳು ಹಾಗೂ ಅವುಗಳ ವ್ಯುತ್ಪತ್ತಿ

೧. ಹೆಸರು : ಮಿತ್ರಃ
ಧಾತು : ಞಿ ಮಿದಾ (ಸ್ನೇಹನೇ) , ಕ್ತ ಪ್ರತ್ಯಯಃ
ವ್ಯುತ್ಪತ್ತಿ : ೧. ಪ್ರಮೀತೇಃ ತ್ರಾಯತೇ
೨. ಸಂಮಿನ್ವಾನೇ ದ್ರವತಿ ಇತಿ
೩. ಮೇದಯತೇ ಇತಿ
೪. ಮೇದ್ಯತಿ ಇತಿ ಮಿತ್ರಃ
ಅರ್ಥ : ಅಂಟಿಕೊಳ್ಳುವವನು / ಸ್ನೇಹ ಉಳ್ಳವನು / ಕಾಪಾಡುವವನು

೨. ಹೆಸರು : ರವಿಃ
ಧಾತು : ರು (ಶಬ್ದೇ) / ರುಙ್ (ಗತೌ)
ವ್ಯುತ್ಪತ್ತಿ : ರೂಯತೇ , ಸ್ತೂಯತೇ , ರವತೇ ವಾ ಇತಿ ರವಿಃ
ಅರ್ಥ : ಶಬ್ದವನ್ನುಂಟು ಮಾಡುವವನು / ಚಲಿಸುವವನು

೩. ಹೆಸರು : ಸೂರ್ಯಃ
ಧಾತು : ಷೂ (ಪ್ರೇರಣೇ) / ಸೃ (ಗತೌ)
ವ್ಯುತ್ಪತ್ತಿ : ೧. ಸವತಿ , ಪ್ರೇರಯತಿ , ಕರ್ಮಣಿ ಲೋಕಮ್
೨. ಸರತಿ ಆಕಾಶೇ ಇತಿ ಸೂರ್ಯಃ
ಅರ್ಥ : ಲೋಕವನ್ನು , ಜನರನ್ನು ಕರ್ಮದಲ್ಲಿ ಪ್ರೇರೇಪಿಸುವವನು / ಆಕಾಶದಲ್ಲಿ ಸಂಚರಿಸುವವನು / ಚಲಿಸುವವನು

೪. ಹೆಸರು : ಭಾನುಃ
ಧಾತು : ಭಾಸೃ (ದೀಪ್ತೌ)
ವ್ಯುತ್ಪತ್ತಿ : ಭಾತಿ ಇತಿ ಭಾನುಃ
ಅರ್ಥ : ಪ್ರಕಾಶಿಸುವವನು

೫. ಹೆಸರು : ಖಗಃ
ಧಾತು : ಗಮ್ಲೃ (ಗತೌ)
ವ್ಯುತ್ಪತ್ತಿ : ಖೇ ಗಚ್ಛತಿ ಇತಿ ಖಗಃ (ಖಮ್=ಆಕಾಶ)
ಅರ್ಥ : ಆಕಾಶದಲ್ಲಿ ಹೋಗುವವನು

೬. ಹೆಸರು : ಪೂಷಾ
ಧಾತು : ಪೂಷ (ವೃದ್ಧೌ)
ವ್ಯುತ್ಪತ್ತಿ : ಪೂಷತಿ ಇತಿ ಪೂಷಾ
ಅರ್ಥ : ವೃದ್ಧಿಸುವವನು


೭. ಹೆಸರು : ಹಿರಣ್ಯಗರ್ಭಃ
ಧಾತು : -
ವ್ಯುತ್ಪತ್ತಿ : ಹಿರಣ್ಯಸಾಮ್ಯಾತ್ ಹಿತಂ ರಮಣೀಯಂ ವಾ / ಹಿರಣ್ಯಂ ಪರಮಂ ಧಾಮ ತಸ್ಯ ಗರ್ಭಭೂತಃ = ಹಿರಣ್ಯಗರ್ಭಃ
ಅರ್ಥ : ಹಿರಣ್ಯ / ಸುವರ್ಣದ ಉತ್ಪತ್ತಿಗೆ ಕಾರಣನಾಗಿರುವ
(ಇದಕ್ಕೆ ವಿಷ್ಣು,ಬ್ರಹ್ಮ ಎಂಬುದೇ ಪ್ರಸಿದ್ಧಾರ್ಥ / ಸೂರ್ಯ ಎಂಬ ಅರ್ಥಕ್ಕೂ ಶಾಸ್ತ್ರೀಯ ಹಿನ್ನೆಲೆ ಇದೆ)

೮. ಹೆಸರು : ಮರೀಚಿಃ
ಧಾತು : ಮೃಙ್ (ಪ್ರಾಣತ್ಯಾಗೇ)
ವ್ಯುತ್ಪತ್ತಿ :ಮ್ರಿಯತೇ ತಮೋ ಅಸ್ಮಿನ್ ಇತಿ ಮರೀಚಿಃ
ಅರ್ಥ : ಕತ್ತಲೆಯನ್ನು ನಾಶಮಾಡುವವನು / ಸೂರ್ಯನ ಕಿರಣ

೯. ಹೆಸರು : ಆದಿತ್ಯಃ
ಧಾತು : -
ವ್ಯುತ್ಪತ್ತಿ :ಅದಿತೇಃ ಅಪತ್ಯಂ ಪುಮಾನ್
ಅರ್ಥ : ಅದಿತಿಯ ಮಗ

೧೦. ಹೆಸರು : ಸವಿತಾ
ಧಾತು : ಷೂ (ಪ್ರೇರಣೇ)
ವ್ಯುತ್ಪತ್ತಿ : ಸುವತಿ , ಪ್ರೇರಯತಿ ಇತಿ ಸವಿತಾ
ಅರ್ಥ : ಪ್ರೇರೇಪಿಸುವವನು

೧೧. ಹೆಸರು : ಅರ್ಕಃ
ಧಾತು : ಅರ್ಚ್ (ಪೂಜಾಯಾಮ್) / ಅರ್ಕ್ (ಸ್ತವನೇ)
ವ್ಯುತ್ಪತ್ತಿ : ಅರ್ಚ್ಯತೇ ಇತಿ ಅರ್ಕಃ / ಅರ್ಕ್ಯತೇ ಸ್ತೂಯತೇ ಇತಿ ಅರ್ಕಃ
ಅರ್ಥ : ಪೂಜಿಸಲ್ಪಡುವವನು / ಸ್ತುತಿಸಲ್ಪಡುವವನು

೧೨. ಹೆಸರು : ಭಾಸ್ಕರಃ
ಧಾತು : ಡು ಕೃಞ್ (ಕರಣೇ)
ವ್ಯುತ್ಪತ್ತಿ : ಭಾಸಂ ಕರೋತಿ ಇತಿ ಭಾಸ್ಕರಃ
ಅರ್ಥ : ಬೆಳಕನ್ನುಂಟು ಮಾಡುವವನು

೧೩. ಹೆಸರು : ನಾರಾಯಣಃ
ಧಾತು : -
ವ್ಯುತ್ಪತ್ತಿ : ನರಾಣಾಂ ಸಮೂಹೋ ನಾರಂ ತದಯನಮ್ ಅಸ್ಯ / ನರಾಂಜಾತಾನಿ ತತ್ವಾನಿ ಅಯನಮ್ ಅಸ್ಯ
ಅರ್ಥ : ಆತ್ಮಗಳ ಸಮೂಹ / ಮನುಷ್ಯರ ಮಾರ್ಗ / ವಿಷ್ಣು / ನಾರಾಯಣ


"ನಮಃ" ಶಬ್ದ ಬಂದಾಗ ಚತುರ್ಥೀ ವಿಭಕ್ತಿ ಬರಬೇಕೆಂಬುದು ವ್ಯಾಕರಣದ ನಿಯಮ.

ದೇಹಕ್ಕಿಂತ ದೇಶ ದೊಡ್ಡದು

I.C.S ಪರೀಕ್ಷೆಯಲ್ಲಿ ತೇರ್ಗಡೆಯಾದ ನೇತಾಜಿ ಉದ್ಯೋಗವನ್ನು ಸೇರಲು ಅರ್ಜಿ ಸಲ್ಲಿಸಿದರು.ಆದರೆ ಉದ್ಯೋಗವನ್ನು ಪಡೆಯಬೇಕೆಂದರೆ  ಒಂದು ಲಿಖಿತಪರೀಕ್ಷೆಯನ್ನು ಬರೆಯಬೇಕಿತ್ತು.ನೇತಾಜಿ ಪರೀಕ್ಷೆಯಲ್ಲಿ ಪಾಸಾಗಬೇಕೆಂದು ಹಗಲಿರುಳು ಅಧ್ಯಯನ ಮಾಡಿ,ಪರೀಕ್ಷೆಯನ್ನು ಬರೆಯಲು ಹೋದರು.ಪರೀಕ್ಷಾಕೊಠಡಿಯಲ್ಲಿ ಪ್ರಶ್ನೆಪತ್ರಿಕೆಯನ್ನು ಪಡೆದು,ಎಲ್ಲಾ ಪ್ರಶ್ನೆಗಳನ್ನೂ ಒಂದು ಬಾರಿ ಓದಿದರು.ಅವುಗಳಲ್ಲಿ ಒಂದು ಪ್ರಶ್ನೆ "ಇಂಡಿಯನ್ ಸೋಲ್ಜರ್ಸ್ ಆರ್ ಜನರಲಿ ಡಿಸ್ ಆನೆಸ್ಟ್" ಎಂದಿತ್ತು.ಈ ಪ್ರಶ್ನೆಯನ್ನು ಮಾತೃಭಾಷೆಯಲ್ಲಿ ಅನುವಾದ ಮಾಡಬೇಕಿತ್ತು.ತಮ್ಮ ಆಸನದಿಂದೆದ್ದ ನೇತಾಜಿ ಸೀದಾ ನಿರೀಕ್ಷಕನ ಬಳಿ ತೆರಳಿದರು.ಈ ಪ್ರಶ್ನೆಯನ್ನು ಪ್ರಶ್ನೆಪತ್ರಿಕೆಯಿಂದ ತೆಗೆದುಹಾಕುವಂತೇ ಕೋರಿದರು.ನಿರೀಕ್ಷಕ ಒಪ್ಪಲಿಲ್ಲ."ಈ ಪ್ರಶ್ನೆ ಸರಿಯಾಗಿಯೇ ಇದೆ,ಉದ್ದೇಶಪೂರ್ವಕವಾಗಿಯೇ ನೀಡಲಾಗಿದೆ.ಇದಕ್ಕೆ ಉತ್ತರ ಬರೆದರಷ್ಟೇ ಉದ್ಯೋಗ.ಇಲ್ಲದಿದ್ದರೆ ಖಂಡಿತ ನಿನಗೆ ಉದ್ಯೋಗ ಸಿಗಲಾರದು" ಎಂದು ವಾದಿಸಿದ. ಪ್ರಶ್ನೆಯನ್ನು ಅನುವಾದ ಮಾಡಲು ನೇತಾಜಿಯವರ ದೇಶಪ್ರೇಮ ಒಪ್ಪಲಿಲ್ಲ."ಈ ಉದ್ಯೋಗದ ಅವಶ್ಯಕತೆ ನನಗಿಲ್ಲ.ನಮ್ಮ ದೇಶದ ಸೈನಿಕರನ್ನು ಅವಹೇಳನ ಮಾಡಿ ಉದ್ಯೋಗ ಪಡೆಯುವಂತಹ ನೀಚಮನಸ್ಥಿತಿ ನನ್ನದಲ್ಲ" ಎಂದು ಪ್ರಶ್ನೆಪತ್ರಿಕೆಯನ್ನು ಅಲ್ಲಿಯೇ ಹರಿದು ಬೀಸಾಕಿ ಪರೀಕ್ಷಾಕೊಠಡಿಯಿಂದ ಹೊರನಡೆದೇಬಿಟ್ಟರು..!! ನೇತಾಜಿ ಒಂದು ಕ್ಷಣ ಸ್ವಾರ್ಥಿಯಾಗಿದ್ದರೆ ಒಳ್ಳೆಯ ಉದ್ಯೋಗವನ್ನು ಸೇರಿ ಜೀವನಪರ್ಯಂತ ಸುಖವಾಗಿರಬಹುದಿತ್ತು.ಆದರೆ ಮನದಲ್ಲಿದ್ದ ಅದಮ್ಯ ದೇಶಪ್ರೇಮ ಸ್ವಾರ್ಥವಿಚಾರವನ್ನು ದೂರಮಾಡಿತ್ತು.ಉದ್ಯೋಗಕ್ಕಿಂತ ದೇಶಪ್ರೇಮವೇ ಹಿರಿದಾಗಿತ್ತು.ಯಾರ ವಿಚಾರ ಹಾಗೂ ಕರ್ಮಗಳು ಸದಾ ದೇಶದ ಒಳಿತನ್ನೇ ಬಯಸುತ್ತದೆಯೋ ಅಂತಹ ವ್ಯಕ್ತಿ ಮಹಾತ್ಮನಾಗುತ್ತಾನೆಂಬುದಕ್ಕೆ ಈ ಘಟನೆಯೇ ಸಾಕ್ಷಿ.

Saturday, 13 August 2016

ಸೀತಾರಾಮರ ಮಧುರಬಾಂಧವ್ಯ


ಸ್ಥಿತಪ್ರಜ್ಞ ಶ್ರೀರಾಮ.ಸ್ಥಿತಪ್ರಜ್ಞನೆಂದರೆ,ಮನದ ಆಸೆಗಳನ್ನೆಲ್ಲ ತ್ಯಜಿಸಿ ಸಂತೋಷವಾಗಿರುವವ.ದುಃಖ ಬಂದಾಗ ಕಳವಳಗೊಳ್ಳದಿರುವವ.ಸುಖದಲ್ಲಿ ಮೈಮರೆಯದಿರುವವ.ಸುಖ-ದುಃಖಗಳನ್ನು ಸಮವಾಗಿ ಸ್ವೀಕರಿಸುವವ.ಇಂದ್ರಿಯಗಳನ್ನು ತನ್ನ ವಶದಲ್ಲಿರಿಸಿಕೊಂಡವ.ರಾಮನೂ ಹಾಗೇ.ರಾಕ್ಷಸರನ್ನು ವಧಿಸಿದಾಗ ಸಂತೋಷಗೊಳ್ಳಲಿಲ್ಲ.ಕಾಡಿಗೆ ಹೋಗುವ ಸಂದರ್ಭದಲ್ಲೂ ದುಃಖಿಸಲಿಲ್ಲ.ಅರಮನೆಯ ಸುಖದಲ್ಲೇ ಬೆಳೆದು,ವನವಾಸದಂತಹ ಕಠಿಣ ಪರಿಸ್ಥಿತಿಯಲ್ಲೂ ಯಾತನೆ ಪಡಲಿಲ್ಲ.ಅಂತಹ ಸ್ಥಿತಪ್ರಜ್ಞ ಶ್ರೀರಾಮ ಸೀತಾವಿಯೋಗದಿಂದ ಪರಿತಪಿಸಿದ.ದುಃಖದ ಮಡುವಿನಲ್ಲಿ ಬಿದ್ದು ಒದ್ದಾಡಿದ.ಅದಕ್ಕೆ ಕಾರಣ ಸೀತೆಯ ಮೇಲಿನ ಅದಮ್ಯ ಪ್ರೀತಿ.ರಾಮಸೀತೆಯರ ಮಧುರಬಾಂಧವ್ಯ ಹೇಗಿತ್ತೆಂದು ರಾಮಾಯಣದ ಈ ಸನ್ನಿವೇಶ ತಿಳಿಸುತ್ತದೆ.

ಮಾಯಾಜಿಂಕೆಯನ್ನು ಸಂಹರಿಸುವಾಗ ಅದು “ಹಾ ಸೀತೆ ! ಹಾ ಲಕ್ಷ್ಮಣ ! ತ್ರಾಹಿ ತ್ರಾಹಿ” ಎಂದು ರಾಮನ ಸ್ವರದಲ್ಲೇ ಕೂಗಿತ್ತು.ರಾಮನಿಗೆ ಆಪತ್ತು ಬಂದೊದಗಿದೆಯೆಂದು ಚಿಂತಿಸಿದ ಸೀತೆ ತನ್ನ ರಕ್ಷಣೆಗಿದ್ದ ಲಕ್ಷ್ಮಣನನ್ನು ರಾಮನ ನೆರವಿಗಾಗಿ ಧಾವಿಸುವಂತೇ ಕೇಳಿಕೊಳ್ಳುತ್ತಾಳೆ.ಲಕ್ಷ್ಮಣ ಹಲವು ಬಗೆಯಲ್ಲಿ ಸಾಂತ್ವನ ಹೇಳಿದರೂ,ಸೀತೆ ಕಟುವಾಗಿ ಆತನನ್ನು ನಿಂದಿಸುತ್ತಾಳೆ.ಕೋಪಗೊಂಡ ಲಕ್ಷ್ಮಣ ರಾಮನ ಸಹಾಯಕ್ಕಾಗಿ ಧಾವಿಸುತ್ತಾನೆ.
ಏಕಾಂಗಿಯಾಗಿ ಬರುತ್ತಿರುವ ಲಕ್ಷ್ಮಣನನ್ನು ಕಂಡೊಡನೆ ರಾಮನಿಗೆ ದಿಗಿಲಾಗುತ್ತದೆ.”ಲಕ್ಷ್ಮಣ,ಮಾಯಾಜಿಂಕೆಯ ರೂಪದಲ್ಲಿದ್ದ ಆ ದುರಾತ್ಮ ರಾಕ್ಷಸ ನನ್ನ ಸ್ವರವನ್ನೇ ಅನುಕರಣೆ ಮಾಡಿ “ಹಾ ಲಕ್ಷ್ಮಣ ತ್ರಾಹಿ ತ್ರಾಹಿ” ಎಂದು ಜೋರಾಗಿ ಕೂಗಿದ.ಅದು ಸೀತೆಗೆ ಕೇಳಿಸಿರಬಹುದು.ನನಗೇನೋ ಆಪತ್ತೊದಗಿದೆಯೆಂದು ಚಿಂತಿಸಿದ ಸೀತೆ ನಿನ್ನನ್ನಿಲ್ಲಿ ಕಳಿಸಿರಬಹುದು.ತಪ್ಪು ಮಾಡಿದೆ ಲಕ್ಷ್ಮಣ..!!ಸೀತೆಯೊಬ್ಬಳನ್ನೇ ಬಿಟ್ಟು ನೀನಿಲ್ಲಿ ಬರಬಾರದಿತ್ತು.ಸೀತೆ ಜೀವಂತವಾಗಿದ್ದಾಳೆ ತಾನೇ..?ಆಶ್ರಮದಲ್ಲಿ ಸೀತೆಯಿರದಿದ್ದರೆ ಖಂಡಿತ ನಾನು ಜೀವಿಸುವುದಿಲ್ಲ.”ರಾಮ ಲಕ್ಷ್ಮಣನಲ್ಲಿ ಆತಂಕದಿಂದ ಕೇಳಿದ.
“ಅಣ್ಣ,ನಾನು ಅತ್ತಿಗೆಯ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತು ಆಶ್ರಮದಲ್ಲಿ ಅವಳನ್ನೇ ಕಾಯುತ್ತಿದ್ದೆ.ಆದರೆ ನಿನ್ನದೇ ಸ್ವರಸಾಮ್ಯವುಳ್ಳ ಮಾಯಾರಾಕ್ಷಸನ ಆರ್ತನಾದವನ್ನು ಕೇಳಿದ ಸೀತೆ ವಿಚಲಿತಳಾಗಿ ನನ್ನನ್ನು ನಿನ್ನ ರಕ್ಷಣೆಗಾಗಿ ಧಾವಿಸುವಂತೇ ಕೇಳಿಕೊಂಡಳು.ನಾನು ಪರಿಪರಿಯಾಗಿ ಬೇಡಿಕೊಂಡೆ.ಕಟುವಾಗಿ ನನ್ನನ್ನು ನಿಂದಿಸಿದಳು.ಅನ್ಯಮಾರ್ಗವಿಲ್ಲದೇ ನಾನಿಲ್ಲಿ ಬರಬೇಕಾಯಿತು”ಲಕ್ಷ್ಮಣನ ಮಾತು ಕ್ಷೀಣವಾಗಿತ್ತು.ಮೊಗ ವಿಷಣ್ಣವಾಗಿತ್ತು.ತಪ್ಪು ಮಾಡಿದೆನೆಂಬ ಅಪರಾಧಿ ಪ್ರಜ್ಞೆ ಕಾಡುತ್ತಿತ್ತು.

ಶ್ರೀರಾಮ ಎಡಗಣ್ಣಿನ ಕೆಳರೆಪ್ಪೆ ಅದುರಲು ಶುರುವಾಯಿತು.ಕೆಟ್ಟ ಶಕುನಗಳ ದರ್ಶನವಾಯಿತು.”ಅಪಿ ಕ್ಷೇಮಂ ನು ಸೀತಾಯಾಃ?”ಸೀತೆ ನಿಜವಾಗಲೂ ಕ್ಷೇಮದಿಂದಿದ್ದಾಳಾ..?ಸಂದೇಹವಾಯಿತು.ಕೂಡಲೇ ಆಶ್ರಮದತ್ತ ಧಾವಿಸಿದ.ಸೀತೆಯ ದರ್ಶನವಾಗಲಿಲ್ಲ.ಶ್ರೀರಾಮನ ಮನ ಉದ್ವಿಗ್ನವಾಗಿತ್ತು.ಆಶ್ರಮದ ಸುತ್ತಲೂ ನಾಲ್ಕಾರು ಬಾರಿ ಓಡಾಡಿದ.ಆತನ ಓಟದ ವೇಗ ಜಿಂಕೆಯಂತಿತ್ತು.ಆತನ ಪರಿಸ್ಥಿತಿ ಸೂತ್ರ ಹರಿದ ಗಾಳಿಪಟದಂತಾಗಿತ್ತು.ಆಶ್ರಮ ಕಮಲವಿಲ್ಲದ ಸರೋವರದಂತೇ ಕಾಣುತ್ತಿತ್ತು.ಆಶ್ರಮದ ಸನಿಹದ ವೃಕ್ಷಗಳು ಅಳುತ್ತಿವೆಯೋ ಎಂಬಂತಿತ್ತು.ಗಿಡದಲ್ಲಿನ ಪುಷ್ಪಗಳು ಬಾಡಿದ್ದವು.ಮೃಗ-ಪಕ್ಷಿಗಳೂ ಸಂತಾಪ ಸೂಚಿಸುತ್ತಿದ್ದವು.ದರ್ಭೆ,ಆಸನ ಮುಂತಾದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.ಇದನ್ನೆಲ್ಲ ಕಂಡ ರಾಮ ಕುಸಿದುಹೋದ.ಸ್ಥಿತಪ್ರಜ್ಞ ತನ್ನ ಬುದ್ಧಿಯ ಸ್ಥಿರತ್ವವನ್ನು ಕಳೆದುಕೊಂಡ.ದುಃಖ ಉಮ್ಮಳಿಸಿ ಬಂತು. ಸೀತೆಯೊಂದಿಗೆ ಕಳೆದ ಮಧುರ ಕ್ಷಣಗಳು ನೆನಪಾದವು.ಕಣ್ಣಂಚಿನಲ್ಲಿ ಅಶ್ರುಧಾರೆಗಳು ಸುರಿದವು.ಸೀತೆಯಿಲ್ಲದ ರಾಮನ ಬದುಕು ಪೂರ್ಣವೇ..?ಬಿಕ್ಕಿ ಬಿಕ್ಕಿ ಅತ್ತ.

ಎಲ್ಲಿ ಹೋಗಿರಬಹುದು ಸೀತೆ..?ದುಷ್ಟರು ಅಪಹರಿಸಿಕೊಂಡು ಹೋದರೇ..?ದಾರಿಗಾಣದೇ ಎಲ್ಲಾದರೂ ಕಳೆದುಹೋದಳೇ..?ರಾಕ್ಷಸರೋ,ಕಾಡುಮೃಗಗಳೋ ಕೋಮಲಾಂಗಿಯನ್ನು ತಿಂದಿರಬಹುದೇ..?ನನ್ನನ್ನು ಮರಳುಗೊಳಿಸಲು ಎಲ್ಲಾದರೂ ಅವಿತುಕೊಂಡಿರುವಳೇ..?ಹೂವು-ಹಣ್ಣುಗಳನ್ನು ತರಲು ದೂರ ಹೋದಳೇ..?ನೀರು ತರಲು ನದಿ-ಸರೋವರಕ್ಕೆಲ್ಲಾದರೂ ಹೋಗಿರಬಹುದೇ..?ಯೋಚಿಸಿ ಯೋಚಿಸಿ ದಿಕ್ಕುತೋಚದಂತಾದ ಶ್ರೀರಾಮ.”ವೈದೇಹಿ,ಸೀತೆ,ಜನಕನಂದಿನಿ” ಎಂದು ಕೂಗುತ್ತಾ ಎಲ್ಲೆಂದರಲ್ಲಿ ಹುಡುಕುತ್ತಿದ್ದ.ಮರಗಳ ಹಿಂದೆ ಸೀತೆ ಅವಿತಿದ್ದಾಳೆಂಬ ಭ್ರಮೆಯಿಂದ ಅಲ್ಲೆಲ್ಲಾ ಹುಡುಕುತ್ತಿದ್ದ.ಒಂದು ಬೆಟ್ಟದಿಂದ ಇನ್ನೊಂದು ಬೆಟ್ಟಕ್ಕೆ,ಒಂದು ನದಿತೀರದಿಂದ ಇನ್ನೊಂದು ನದಿತೀರಕ್ಕೆ ಧಾವಿಸುತ್ತಿದ್ದ.ಶೋಕಸಾಗರದಲ್ಲಿ ಬಿದ್ದ ಶ್ರೀರಾಮ ಗಟ್ಟಿಯಾಗಿ ಅಳುತ್ತಾ ಸುತ್ತಾಡುತ್ತಿದ್ದ.

ಏನು ಮಾಡಬೇಕೆಂದು ತಿಳಿಯದೇ ಆಶ್ರಮದ ಪರಿಸರದಲ್ಲಿದ್ದ ಕದಂಬವೃಕ್ಷ,ಬಿಲ್ವವೃಕ್ಷ,ಅರ್ಜುನವೃಕ್ಷ,ತಿಲಕವೃಕ್ಷ,ಅಶೋಕವೃಕ್ಷ,ತಾಲವೃಕ್ಷ,ಜಂಬೂವೃಕ್ಷ ಮುಂತಾದ ವೃಕ್ಷಗಳ ಸನಿಹ ಬಂದು ದೀನನಾಗಿ “ಸೀತೆಯನ್ನು ನೋಡಿದ್ದೀರಾ..?ದಯವಿಟ್ಟು ಹೇಳಿ” ಎಂದು ಬೇಡಿಕೊಂಡ.ಉತ್ತರ ಸಿಗಲಿಲ್ಲ.ಚಿಗರೆ,ಆನೆ.ಹುಲಿ,ಮುಂತಾದ ಪ್ರಾಣಿಗಳಲ್ಲಿ “ಸೀತೆಯೆಲ್ಲಿ ಹೇಳಿ” ಎಂದು ವಿನಂತಿಸಿಕೊಂಡ.ಉನ್ಮಾದಾವಸ್ಥೆಯನ್ನು ಹೊಂದಿದ ರಾಮನಿಗೆ ಎಲ್ಲೆಂದರಲ್ಲಿ ಸೀತೆಯ ರೂಪವೇ ಕಾಣಿಸಿತು.”ಸೀತೆ..ನಿನ್ನನ್ನು ಕಂಡೆ..!!ಎಲ್ಲಿ ಓಡುತ್ತಿರುವೆ..?ಮರಗಳ ಮರೆಯಲ್ಲಿ ಅವಿತಿರುವ ನೀನು ನನ್ನೊಂದಿಗೆ ಮಾತಾಡಲಾರೆಯಾ ಪ್ರಿಯೇ..?”ಎನ್ನುತ್ತಾ ಮರಗಳ ಮರೆಯಲ್ಲಿ ಸೀತೆಯನ್ನು ಕಾಣಲು ಯತ್ನಿಸಿದ.

“ಮಹಾಬಾಹೋ ಲಕ್ಷ್ಮಣ ! ಪಶ್ಯಸಿ ತ್ವಂ ಪ್ರಿಯಾಂ ಕ್ವಚಿತ್” ಮಹಾಬಾಹು ಲಕ್ಷ್ಮಣ ನನ್ನ ಪ್ರೇಯಸಿ ಸೀತೆಯನ್ನು ಎಲ್ಲಾದರೂ ಕಂಡೆಯಾ” ಲಕ್ಷ್ಮಣನನ್ನು ಕೇಳಿದ.”ಹಾ ಪ್ರಿಯೇ ! ಕ್ವ ಗತಾ ಭದ್ರೇ ಹಾ ಸೀತೇ..!!” ಹಾ ಪ್ರಿಯೇ ಸೀತೆ ಹಾ ಭದ್ರೇ ಎಲ್ಲಿ ಹೋದೆ ಎಂದು ಪುನಃ ಪುನಃ ಪರಿತಪಿಸಿದ.ಒಂದು ಕ್ಷಣ ಸೀತೆ ನನ್ನೊಂದಿಗಿದ್ದಾಳೆ ಎಂಬ ಭ್ರಾಂತಿಯಲ್ಲಿರುತ್ತಿದ್ದ.ಮರುಕ್ಷಣ ಸೀತೆಯನ್ನು ಹುಡುಕಲು ಧಾವಿಸುತ್ತಿದ್ದ.ಸೀತೆಯ ಅನ್ವೇಷಣೆಯಲ್ಲಿ ನಿರತನಾಗಿದ್ದ ರಾಮ ಹುಚ್ಚನಂತೇ ಕಾಣುತ್ತಿದ್ದ.
“ಲಕ್ಷ್ಮಣ,ಸೀತಾವಿಯೋಗದ ಈ ದುಃಖದಿಂದ ನಾನು ಖಂಡಿತವಾಗಿಯೂ ಬಹುಕಾಲ ಜೀವಿಸುವುದಿಲ್ಲ.ಈ ದುಃಖದಿಂದ ನಾನು ಸತ್ತೇಹೋಗುತ್ತೇನೆ”ರಾಮ ದುಃಖದಿಂದ ಹೇಳಿದ.”ಸೀತೇ,ನಾನೀಗ ಪ್ರಜ್ಞಾಶೂನ್ಯನಾಗಿದ್ದೇನೆ.ನಿನ್ನ ವಿಯೋಗದಿಂದ ಪರಿತಪಿಸುತ್ತಿದ್ದೇನೆ.ನನ್ನ ಆಸೆ-ಆಕಾಂಕ್ಷೆಗಳೆಲ್ಲಾ ಭಗ್ನವಾಗಿವೆ.ದಯವಿಟ್ಟು ನನ್ನಿಂದ ದೂರಹೋಗಬೇಡ.ನೀನಿಲ್ಲದಿದ್ದರೆ ನಾನು ಪ್ರಾಣವನ್ನೇ ತ್ಯಜಿಸುತ್ತೇನೆ” ಕಾಣದಿರುವ ಸೀತೆಯನ್ನು ಸಂಬೋಧಿಸಿದ.ಇದು ಸೀತೆಯನ್ನು ಕಳೆದುಕೊಂಡ ರಾಮನ ಪರಿಸ್ಥಿತಿ.ಇದರಿಂದಲೇ ಸೀತಾರಾಮರ ಮಧುರಬಾಂಧವ್ಯ ಹೇಗಿತ್ತೆಂದು ತಿಳಿಯುತ್ತದೆ.



“ಸರ್ವೇ ಭವಂತು ಸುಖಿನಃ”

Tuesday, 9 August 2016

ಧನ್ವಂತರಿ


ಧನ್ವಂತರಿ

ದೇವತೆಗಳಿಗೂ ವೈದ್ಯ ಧನ್ವಂತರೀ.ಧನ್ವಂತರಿಯನ್ನು ಮಹಾವಿಷ್ಣುವಿನ ಅವತಾರವೆಂದೇ ಗುರುತಿಸಲಾಗುತ್ತದೆ.ಮಹಾ ಚಿಕಿತ್ಸಕನಾದ್ದರಿಂದ ಆತ ದೈವತ್ವಪದವಿಯನ್ನೂ ಪಡೆದ.ದೇವಾಸುರರು ಸಮುದ್ರವನ್ನು ಮಥಿಸುವಾಗ ಧನ್ವಂತರಿಯ ಅವತಾರವಾಯಿತು.ಶರತ್ ಋತುವಿನ ಪೂರ್ಣಿಮೆಯಂದು ಚಂದ್ರನ,ಕಾರ್ತಿಕ ದ್ವಾದಶಿಯಂದು ಕಾಮಧೇನುವಿನ,ತ್ರಯೋದಶಿಯಂದು ಧನ್ವಂತರಿಯ,ಚತುರ್ದಶಿಯಂದು ಕಾಳಿ ಮಾತೆಯ,ಅಮಾವಾಸ್ಯೆಯಂದು ಮಹಾಲಕ್ಷ್ಮಿಯ ಪ್ರಾದುರ್ಭಾವವಾಯಿತು.ಹಾಗಾಗಿ ದೀಪಾವಳಿ ಹಬ್ಬದ ಎರಡು ದಿನ ಮುನ್ನ ಧನ್ವಂತರಿ ಅವತಾರದ ಸ್ಮರಣೆಗಾಗಿ "ಧನತೇರಸ್" ಎಂಬ ಹಬ್ಬವನ್ನು ಆಚರಿಸಲಾಗುತ್ತದೆ. "ಧನತೇರಸ್" ಹಬ್ಬದ ದಿನದಂದೇ ಧನ್ವಂತರಿ,ಆಯುರ್ವೇದ ಶಾಸ್ತ್ರವನ್ನು ರಚಿಸಿದ್ದ.ಮೇಲಿನ ಎರಡು ಭುಜಗಳಲ್ಲಿ ಶಂಖ ಹಾಗೂ ಚಕ್ರ,ಕೆಳಗಿನ ಎರಡು ಭುಜಗಳಲ್ಲಿ ಔಷಧದ ಪಾತ್ರೆ ಹಾಗೂ ಅಮೃತಕಲಶಗಳನ್ನು ಧರಿಸಿ ಧನ್ವಂತರಿ ಚತುರ್ಭುಜನಾಗಿದ್ದಾನೆ. ಈತನನ್ನು "ಆರೋಗ್ಯದೇವತೆ" ಎಂದು ಕರೆಯಲಾಗುತ್ತದೆ. ಅಮೃತಕ್ಕೆ ಸಮಾನವಾದಂತಹ ಔಷಧಿಗಳನ್ನು ಸೃಷ್ಟಿಸಿದ ಖ್ಯಾತಿ ಧನ್ವಂತರಿಗೆ ಸಲ್ಲುತ್ತದೆ. ಧನ್ವಂತರಿಯ ವಂಶಸ್ಥ ದಿವೋದಾಸ,ಕಾಶಿಯಲ್ಲಿ "ಶಲ್ಯ ಚಿಕಿತ್ಸಾ" ಎಂಬ ವಿಶ್ವದ ಮೊದಲನೇ ಆಯುರ್ವೇದ ವಿದ್ಯಾಲಯವನ್ನು ಸ್ಥಾಪಿಸಿದ್ದ.ಅದರಲ್ಲಿ ಆಚಾರ್ಯ ಸುಶ್ರುತ ಪ್ರಧಾನಾಚಾರ್ಯನಾಗಿದ್ದ.ದಿವೋದಾಸನ ಶಿಷ್ಯ ಸುಶ್ರುತನಾಗಿದ್ದ.ಸುಶ್ರುತ "ಸುಶ್ರುತ ಸಂಹಿತಾ" ಎಂಬ ಪ್ರಸಿದ್ಧ ಆಯುರ್ವೇದಗ್ರಂಥವನ್ನು ರಚಿಸಿದ್ದಾನೆ.ವಿಶ್ವದ ಮೊಟ್ಟಮೊದಲ ಶಸ್ತ್ರಚಿಕಿತ್ಸಕನೆಂಬ ಬಿರುದು ಆಚಾರ್ಯ ಸುಶ್ರುತನಿಗೇ ಸಲ್ಲುತ್ತದೆ.ಕಾರ್ತಿಕ ತ್ರಯೋದಶಿಯಂದು ಭಗವಾನ್ ಧನ್ವಂತರಿಯ ಪೂಜೆ-ಪುನಸ್ಕಾರಗಳು ನಡೆಯುತ್ತವೆ. ಸುಶ್ರುತನ ಪ್ರಕಾರ ಮೊದಲು ಆಯುರ್ವೇದವನ್ನು ರಚಿಸಿದ್ದು ಬ್ರಹ್ಮ.ಬ್ರಹ್ಮ ರಚಿಸಿದ ಆಯುರ್ವೇದ ಶಾಸ್ತ್ರದಲ್ಲಿ ಒಂದು ಸಾವಿರ ಅಧ್ಯಾಯಗಳೂ,ಒಂದು ಲಕ್ಷ ಶ್ಲೋಕಗಳೂ ಇದ್ದವು.ಅದನ್ನು ಮೊದಲು ಪ್ರಜಾಪತಿ ಓದಿದ.ನಂತರ ಪ್ರಜಾಪತಿ ಅಶ್ವಿನಿಕುಮಾರರಿಗೆ ಅದನ್ನು ಬೋಧಿಸಿದ.ಅಶ್ವಿನಿಕುಮಾರರು ಇಂದ್ರನಿಗೆ ಆಯುರ್ವೇದವನ್ನು ಕಲಿಸಿದರು.ಇಂದ್ರದೇವನಿಂದ ಧನ್ವಂತರಿ,ಧನ್ವಂತರಿಯಿಂದ ಸುಶ್ರುತ ಹೀಗೆ ಆಯುರ್ವೇದಶಾಸ್ತ್ರ ಬೆಳೆದು ಬಂತು.ಭಾವಪ್ರಕಾಶದ ಅನುಸಾರ ಅತ್ರೇಯ ಮುಂತಾದ ಋಷಿಗಳು ಇಂದ್ರನಿಂದ ಆಯುರ್ವೇದವನ್ನು ಕಲಿತು ಅದನ್ನು ಅಗ್ನಿವೇಶ ಮುಂತಾದ ತಮ್ಮ ಶಿಷ್ಯರಿಗೆ ಬೋಧಿಸಿದರು. ವೇದ ಸಂಹಿತೆ,ಬ್ರಾಹ್ಮಣ ಮುಂತಾದ ಗ್ರಂಥಗಳಲ್ಲಿ ಧನ್ವಂತರಿ ಹೆಸರಿನ ಪ್ರಸ್ತಾಪವಿಲ್ಲ.ಆದರೆ ಮಹಾಭಾರತ ಹಾಗೂ ಪುರಾಣಗಳಲ್ಲಿ ಮಹಾವಿಷ್ಣುವಿನ ಸ್ವರೂಪ ಧನ್ವಂತರಿಯೆಂಬ ವಿಷಯದ ಉಲ್ಲೇಖವಿದೆ. ಸಮುದ್ರದಿಂದ ಹೊರಬಂದ ಧನ್ವಂತರಿ, ಮಹಾವಿಷ್ಣುವಿನಲ್ಲಿ ಈ ಪ್ರಪಂಚದಲ್ಲಿ ನನ್ನ ಸ್ಥಾನವೇನೆಂದು ಕೇಳುತ್ತಾನೆ.ಆಗ ಮಹಾವಿಷ್ಣು "ಯಜ್ಞದ ವಿಭಾಗವನ್ನು ದೇವತೆಗಳಿಗೆ ನೀಡಲಾಗಿದೆ.ದೇವತೆಗಳ ನಂತರ ನೀನು ಆವಿರ್ಭವಿಸಿದ್ದರಿಂದ ನೀನು ದೇವತೆಯಲ್ಲ.ಮುಂದಿನ ಜನ್ಮದ ಶರೀರದಿಂದಷ್ಟೇ ನಿನಗೆ ದೈವತ್ವ ಪ್ರಾಪ್ತಿಯಾಗುತ್ತದೆ.ಆಗ ಲೋಕದಲ್ಲಿ ನೀನು ಪ್ರಸಿದ್ಧಿಯನ್ನು ಪಡೆಯುವೆ.ಲೋಕದ ಜನರೆಲ್ಲಾ ನಿನ್ನನ್ನು ಪೂಜಿಸುತ್ತಾರೆ.ನೀನು ಆಯುರ್ವೇದದ ಅಷ್ಟಾಂಗ ವಿಭಜನೆಯನ್ನೂ ಸಹ ಮಾಡುತ್ತೀಯಾ.ದ್ವಿತೀಯ ದ್ವಾಪರಯುಗದಲ್ಲಿ ಪುನಃ ನಿನ್ನ ಅವತಾರವಾಗುತ್ತದೆ" ಎಂಬ ವರವಿತ್ತು ಅನುಗ್ರಹಿಸುತ್ತಾನೆ.ವಿಷ್ಣುವಿನ ವರಪ್ರಸಾದದಂತೇ ಕಾಶಿರಾಜ ಧನ್ವನ ತಪಸ್ಸಿಗೆ ಮೆಚ್ಚಿ ಭಗವಾನ್ ಅಬ್ಜ ಆತನ ಪುತ್ರನಾಗಿ ಹುಟ್ಟಿದ.ಧನ್ವ ತನ್ನ ಪುತ್ರನಿಗೆ ಧನ್ವಂತರಿ ಎಂದು ನಾಮಕರಣ ಮಾಡಿದ.ಧನ್ವ ಕಾಶಿನಗರಿಯ ಸಂಸ್ಥಾಪಕ ಕಾಶನ ಪುತ್ರನಾಗಿದ್ದ. ಧನ್ವಂತರಿ ಸರ್ವರೋಗಗಳನ್ನು ನಿವಾರಿಸುವದರಲ್ಲಿ ನಿಷ್ಣಾತನಾಗಿದ್ದ.ಆತ ಭರದ್ವಾಜ ಮಹರ್ಷಿಗಳಿಂದ ಆಯುರ್ವೇದ ಶಾಸ್ತ್ರವನ್ನು ಕಲಿತು ಅಷ್ಟಾಂಗ ವಿಭಜನೆಯನ್ನು ಮಾಡಿ ದೈವತ್ವವನ್ನೂ ಪಡೆದ.ಕಾಶ-ದೀರ್ಘತಪಾ-ಧನ್ವ-ಧನ್ವಂತರಿ-ಕೇತುಮಾನ್-ಭೀಮಸೇನ-ದಿವೋದಾಸ-ಪ್ರತರ್ದನ-ವತ್ಸ-ಅಲರ್ಕ ಇದು ಹರಿವಂಶ ಪುರಾಣದ ಪ್ರಕಾರ ಧನ್ವಂತರಿಯ ಕುಲಪರಂಪರೆ.ವೈದಿಕ ಕಾಲದಲ್ಲಿ ಅಶ್ವಿನಿಕುಮಾರರಿಗೆ ಯಾವ ಸ್ಥಾನವನ್ನು ನೀಡಲಾಗಿತ್ತೋ,ಅದೇ ಮಹತ್ವದ ಸ್ಥಾನವನ್ನು ಪೌರಾಣಿಕ ಕಾಲದಲ್ಲಿ ಧನ್ವಂತರಿಗೆ ನೀಡಲಾಗಿದೆ.ಅಶ್ವಿನಿಕುಮಾರರ ಬಳಿ ಮಧುಕಲಶವಿದ್ದರೆ,ಧನ್ವಂತರಿಯ ಬಳಿ ಅಮೃತಕಲಶವಿದೆ.ಲೋಕವನ್ನು ರಕ್ಷಿಸುವ ಹೊಣೆ ಮಹಾವಿಷ್ಣುವಿನದು.ರೋಗಗಳಿಂದ ರಕ್ಷಿಸುವ ಹೊಣೆ ಧನ್ವಂತರಿಯದು.ಹಾಗಾಗಿ ಧನ್ವಂತರಿಯನ್ನು ಮಹಾವಿಷ್ಣುವಿನ ಸ್ವರೂಪವೆಂದೇ ಹೇಳಲಾಗುತ್ತದೆ.ಧನ್ವಂತರಿಯನ್ನು ಶ್ರದ್ಧೆಯಿಂದ ಉಪಾಸಿಸುವುದರಿಂದ ಸರ್ವ ಖಾಯಿಲೆಗಳೂ ಶಮನವಾಗುತ್ತವೆ.ಮನುಷ್ಯನಿಗೆ ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯ ಲಭಿಸುತ್ತದೆ.ದೀರ್ಘಾವಧಿ ಕಾಲದಿಂದ ಬಾಧಿಸುತ್ತಿರುವ ಮಹಾವ್ಯಧಿಗಳ ಉಪಶಮನವಾಗುತ್ತವೆ.ವ್ಯಾಧಿಯಿಂದ ಬಳಲುತ್ತಿರುವವರು ಪ್ರತಿನಿತ್ಯ ಈ ಮಂತ್ರಗಳನ್ನು ಪಠಿಸುವುದರಿಂದ ಒಳಿತಾಗುತ್ತದೆ.ಧನ್ವಂತರಿಯ ಸರಳ ಮಂತ್ರ.."ಓಂ ಧನ್ವಂತರಯೇ ನಮಃ" ಧನ್ವಂತರಿಯ ಪ್ರಬಲ ಮಂತ್ರ -"ಓಂ ನಮೋ ಭಗವತೇ ಮಹಾಸುದರ್ಶನಾಯ ವಾಸುದೇವಾಯ ಧನ್ವಂತರಯೇ ಅಮೃತಕಲಶಹಸ್ತಾಯ ಸರ್ವಭಯ ವಿನಾಶಾಯ ಸರ್ವರೋಗನಿವಾರಣಾಯ ತ್ರಿಲೋಕಪಥಾಯ ತ್ರಿಲೋಕನಾಥಾಯ ಶ್ರೀ ಮಹಾವಿಷ್ಣು ಸ್ವರೂಪ ಶ್ರೀ ಧನ್ವಂತರೀ ಸ್ವರೂಪ ಶ್ರೀ ಶ್ರೀ ಶ್ರೀ ಔಷಧಚಕ್ರ ನಿವಾರಣಾಯ ನಮಃ"ಈ ಮಂತ್ರವನ್ನು ಜಪಿಸಿ,ಹೋಮ ಮಾಡುವುದರಿಂದ ಭಯನಿವಾರಣೆ ಹಾಗೂ ಉತ್ತಮವಾದ ಆರೋಗ್ಯ ಪ್ರಾಪ್ತಿಯಾಗುತ್ತದೆ.ಧನ್ವಂತರಿ ಸ್ತೋತ್ರ -  "ಓಂ ಶಂಖಂ ಚಕ್ರಂ ಜಲೌಕಾಂ ದಧದಮೃತಘಟಂ ಚಾರುದೋರ್ಭಿಶ್ಚತುರ್ಭಿಃ
ಸೂಕ್ಷ್ಮಸ್ವಚ್ಛಾತಿಹೃದ್ಯಾಂಶುಕ ಪರಿವಿಲಸನ್ಮೌಲಿಮಂಭೋಜನೇತ್ರಮ್ |ಕಾಲಾಂಭೋದೋಜ್ವಲಾಂಗಂ ಕಟಿತಟವಿಲಸಚ್ಚಾರುಪೀತಾಂಬರಾಢ್ಯಂವಂದೇ ಧನ್ವಂತರೀಂ ತಂ ನಿಖಿಲಗದವನಪ್ರೌಢದಾವಾಗ್ನಿನೀಲಮ್ ||"ಧನ್ವಂತರಿಯ ನಿರಂತರ ಆರಾಧನೆಯಿಂದ ಮಹಾವ್ಯಾಧಿಗಳು ದೂರವಾಗಿ ಮನುಷ್ಯ ಸದಾ ಆರೋಗ್ಯದಿಂದಿರುತ್ತಾನೆ.ಧನ್ವಂತರಿಯ ಕೃಪೆ ಸದಾ ನಮಗಿರಲಿ.ಆಯುರಾರೋಗ್ಯಗಳು ಲಭಿಸಲಿ.

Saturday, 6 August 2016

ನಾಗಪಂಚಮಿ

 ಭಾರತೀಯ ಸಂಸ್ಕೃತಿಯ ಮಹತ್ವವೇ ಅದು.ಪ್ರತಿಯೊಂದು ಜೀವಿಯಲ್ಲೂ ಸಹ ನಾವು ಪರಮಾತ್ಮನನ್ನೇ ಕಾಣುತ್ತೇವೆ.ಪ್ರಕೃತಿಯನ್ನು ಭಗವಂತನೆಂದೇ ಆರಾಧಿಸುತ್ತೇವೆ.ತುಳಸೀಪೂಜೆ,ಅಶ್ವತ್ಥಪೂಜೆ,ಗೋಪೂಜೆ ಇಂತಹ ಪೂಜೆಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗಗಳಾಗಿವೆ.ಅವುಗಳಲ್ಲಿ ನಾಗರಪೂಜೆಯೂ ಸಹ ಮಹತ್ವದ ಸ್ಥಾನವನ್ನು ಪಡೆದಿದೆ.ನಮ್ಮ ಸಂಸ್ಕೃತಿಯಲ್ಲಿ ನಾಗರಪೂಜೆಗೆ ಒಂದು ವಿಶಿಷ್ಟವಾದಂತಹ ಸ್ಥಾನವಿದೆ.ಭಗವಾನ್ ಶಂಕರನ ಕೊರಳಿಗೆ ಆಭೂಷಣ ನಾಗ,ಶಿವನ ನಿರ್ಗುಣ,ನಿರಾಕಾರ ಸ್ವರೂಪವಾದಂತಹ ಶಿವಲಿಂಗಕ್ಕೆ ಆಭೂಷಣ ನಾಗ,ಭಗವಾನ್ ವಿಷ್ಣುವಿನ ಶಯನಸ್ಥಾನ ನಾಗ,ಯಾವಾಗ ಮಹಾವಿಷ್ಣು ಅವತಾರವೆತ್ತಿ ಭೂಮಿಗವತರಿಸಿದ್ದನೋ ಪ್ರತಿಯೊಂದು ಅವತಾರದಲ್ಲೂ ಆತನ ಜೊತೆಯಾಗಿದ್ದವ ಶೇಷನಾಗ,ಅಂತಹ ನಾಗನನ್ನು ಪೂಜಿಸುವುದರಲ್ಲಿ ಧನ್ಯತೆಯ ಭಾವ ನಮ್ಮದು.

ಪವಿತ್ರ ಶ್ರಾವಣಮಾಸದ ಶುಕ್ಲಪಕ್ಷದ ಪಂಚಮಿಯಂದು ನಾಗಪೂಜೆಯನ್ನು ಮಾಡಲಾಗುತ್ತದೆ.ಅದಕ್ಕಾಗಿ ಈ ದಿನ "ನಾಗಪಂಚಮಿ" ಎಂಬ ಹೆಸರನ್ನು ಪಡೆದಿದೆ.ನಾಗಗಳಿಗೆ ಆನಂದವನ್ನು ನೀಡುವ ದಿನ ನಾಗಪಂಚಮೀ.ಪೌರಾಣಿಕ ಕಥೆಯೊಂದರ ಅನುಸಾರ,ಮಾತೃಶಾಪದಿಂದೊಮ್ಮೆ ನಾಗಲೋಕ ಹತ್ತಿ ಉರಿಯತೊಡಗಿತು.ಹಲವಾರು ದಿನಗಳ ಕಾಲ ನಾಗಲೋಕವನ್ನು ದಹಿಸಿದ ಅಗ್ನಿ ಶ್ರಾವಣ ಶುಕ್ಲ ಪಂಚಮಿಯಂದು ಶಾಂತನಾಗಿದ್ದ.ಈ ಕಾರಣದಿಂದ ಶ್ರಾವಣ ಶುಕ್ಲ ಪಂಚಮಿಯನ್ನು "ನಾಗಪಂಚಮೀ" ಎಂದು ಆಚರಿಸುವ ಪದ್ಧತಿ ಅನಾದಿಕಾಲದಿಂದ ನಡೆದು ಬಂತಿತು.

ನಾಗಪಂಚಮಿಯಂದು ಮಣ್ಣಿನ ಹಾವುಗಳನ್ನು ತಯಾರಿಸಿ,ಅವುಗಳನ್ನು ಶೃಂಗರಿಸಬೇಕು.ಅನಂತರ ಬಿಳಿಕಮಲದಲ್ಲಿ ಅರ್ಚಿಸಬೇಕು.ತದನಂತರ ಅವುಗಳನ್ನು ಪೀಠದಲ್ಲಿಟ್ಟು ಹಾಲಿನ ಅಭಿಷೇಕವನ್ನು ಮಾಡಬೇಕು.ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಅನೇಕ ನಾಗದೇವಾಲಯಗಳಿವೆ.ದೇವಾಲಯಗಳಲ್ಲೂ ಸಹ ನಾಗಪೂಜೆಯನ್ನು ಮಾಡಿಸಬಹುದು.ನಾಗಪಂಚಮಿಯಂದು ಬಹುವಿಜೃಂಬಣೆಯಿಂದ ನಾಗದೇವಾಲಯಗಳಲ್ಲಿ ಪೂಜೆ ನಡೆಸಲಾಗುತ್ತದೆ.

ಗರುಡ ಪುರಾಣದಲ್ಲಿ,ನಾಗಪಂಚಮಿಯಂದು ಮನೆಯ ಮುಖ್ಯದ್ವಾರದಲ್ಲಿ ನಾಗಚಿತ್ರವನ್ನು ಸ್ಥಾಪಿಸಿ,ಅದನ್ನು ಪೂಜಿಸಬೇಕು.ಅದಕ್ಕೆ "ಭಿತ್ತಿ ಚಿತ್ರ ನಾಗಪೂಜೆ" ಎಂದು ಕರೆಯಲಾಗುತ್ತದೆ.ಮಹಿಳೆಯರು ಅನ್ನಸಂತರ್ಪಣೆಯನ್ನು ಮಾಡಬೇಕು.ಅಕ್ಕಿ,ಹಾಲು,ಬೆಲ್ಲ ಮುಂತಾದ ದ್ರವ್ಯಗಳಿಂದ ಮಾಡಿದ ಪಾಯಸವನ್ನು ನಾಗದ ಹುತ್ತಕ್ಕೆ ಅರ್ಪಿಸಬೇಕು ಎನ್ನಲಾಗಿದೆ.

ನಾಗಪಂಚಮಿ ಹಬ್ಬದ ಕುರಿತು ಒಂದು ಪ್ರಸಿದ್ಧವಾದ ಕಥೆಯಿದೆ.ಹಿಂದಿನ ಕಾಲದಲ್ಲೊಬ್ಬ ರೈತನಿದ್ದ.ಆತನಿಗೆ ಇಬ್ಬರು ಗಂಡುಮಕ್ಕಳು,ಒಬ್ಬಳು ಮಗಳಿದ್ದಳು.ಒಮ್ಮೆ ಹೊಲದಲ್ಲಿ ಕೆಲಸಮಾಡುತ್ತಿದ್ದಾಗ ನೇಗಿಲಿಗೆ ನಿಲುಕಿ ನಾಗರಹಾವಿನ ಮರಿಗಳು ಅಸುನೀಗಿದವು.ಇದರಿಂದ ಕೋಪಗೊಂಡ ನಾಗಿಣಿ ರೈತನ ಮೇಲೆ ಪ್ರತೀಕಾರಗೈಯ್ಯಲು ಸಿದ್ಧಳಾದಳು.ಒಂದು ರಾತ್ರಿ ರೈತನ ಮನೆಗೆ ಪ್ರವೇಶಿಸಿದ ನಾಗಿಣಿ ನಿದ್ರಿಸುತ್ತಿದ್ದ ರೈತ,ಆತನ ಹೆಂಡತಿ,ಆತನ ಎರಡು ಗಂಡುಮಕ್ಕಳಿಗೆ ಕಚ್ಚಿದಳು.ವಿಷಪ್ರಭಾವದಿಂದ ಎಲ್ಲರೂ ನಿಧನಹೊಂದಿದರು.ಆದರೆ ರೈತನ ಮಗಳು ನಾಗಿಣಿಯಿಂದ ಪಾರಾದಳು.ಮರುದಿನ ರೈತನ ಮಗಳನ್ನು ಸಾಯಿಸಲು ನಾಗಿಣಿ ಪುನಃ ಆತನ ಮನೆಗೆ ಹೋದಳು.ಆದರೆ ರೈತನ ಮಗಳು ಬಹು ಬುದ್ಧಿವಂತೆ.
ನಾಗಿಣಿ ಬರುವುದನ್ನು ಗಮನಿಸಿದ ಆಕೆ ಒಂದು ಪಾತ್ರೆಯಲ್ಲಿ ಹಾಲನ್ನು ಹಿಡಿದು ನಾಗಿಣಿಯನ್ನು ಸ್ವಾಗತಿಸಿದಳು.ತನ್ನ ತಂದೆ ಅರಿಯದೇ ಮಾಡಿದ ತಪ್ಪನ್ನು ಮನ್ನಿಸು ಎಂದು ಪ್ರಾರ್ಥಿಸಿಕೊಂಡಳು.ಆಕೆಯ ಪ್ರಾರ್ಥನೆಗೆ ನಾಗಿಣಿ ಮನಸೋತಳು.ರೈತನಿಗೆ,ಆತನ ಹೆಂಡತಿ,ಮಕ್ಕಳಿಗೆ ಪುನಃ ಜೀವದಾನವನ್ನು ಮಾಡಿ,"ಶ್ರಾವಣ ಶುಕ್ಲ ಪಂಚಮಿಯಂದು ಮಹಿಳೆಯರು ನನ್ನನ್ನು ಪೂಜಿಸಿದರೆ ಅವರ ಏಳು ಸಂತತಿಗಳು ಸುರಕ್ಷಿತವಾಗಿರುತ್ತವೆ" ಎಂಬ ಆಶೀರ್ವಾದವನ್ನಿತ್ತಳು.

ನಾಗಪಂಚಮಿಯಂದು "ಓಂ ನವಕುಲಾಯೈ ವಿದ್ಮಹೇ ವಿಷದಂತಾಯ ಧೀಮಹಿ | ತನ್ನೋ ಸರ್ಪಃ ಪ್ರಚೋದಯಾತ್" ಎಂಬ ನಾಗಗಾಯತ್ರಿಮಂತ್ರವನ್ನು ಜಪಿಸಿದರೆ ಖಂಡಿತ ಒಳಿತಾಗುತ್ತದೆ.


"ಸರ್ವೇ ಭವಂತು ಸುಖಿನಃ" 

Thursday, 4 August 2016

"ಬ್ಯಾಂಡ್" ಅಂದರೆ ತಟ್ಟನೆ ನೆನಪಾಗುವುದು ತಾಳಲಯವಿಲ್ಲದ ಪಾಶ್ಚಾತ್ಯ
ಸಂಗೀತ,ಕರ್ಣಕಠೋರ ಧ್ವನಿವರ್ಧಕಗಳು,ನಶೆ,ವಿಕೃತ ನೃತ್ಯ,ಉನ್ಮಾದತೆ ಇತ್ಯಾದಿಗಳೇ.ಹಲವು
ಭಾರತೀಯರಿಗೆ ಇಂತಹ ಬ್ಯಾಂಡ್ಗಳು ಇಷ್ಟವಾಗುವುದಿಲ್ಲ.ಆದರೆ "ಬ್ಯಾಂಡ್" ಎಂಬ ಶಬ್ದಕ್ಕೆ
ಮಧುರವಾದ ಅರ್ಥ ತರುತ್ತಿದೆ "ಧ್ರುವ ಬ್ಯಾಂಡ್".ಧ್ರುವ ಬ್ಯಾಂಡಿನ ವೈಶಿಷ್ಟ್ಯತೆ
ಏನೆಂದರೆ,ದೇಶೀ ಸಂಗೀತದೊಂದಿಗೆ,ತುಸು ಪಾಶ್ಚಾತ್ಯ ಸಂಗೀತವನ್ನನುಸರಿಸಿ,ಸಂಸ್ಕೃತ
ಸ್ತೋತ್ರ,ವೇದಮಂತ್ರಗಳನ್ನು ಪ್ರಸ್ತುತಪಡಿಸುವುದು..!! ಇಂತಹ ಅದ್ಭುತ ಉಪಾಯ
ಹೊಳೆದದ್ದು ಸಂಸ್ಕೃತ ವಿದ್ವಾಂಸ ಶ್ರೀ ಸಂಜಯ್ ದ್ವಿವೇದಿಯವರಿಗೆ.ಕೇಳಲು
ಇಂಪಾಗಿರುವ,ಮನಸ್ಸಿಗೆ ಶಾಂತಿ ನೀಡುವ ಸಂಸ್ಕೃತ ಶ್ಲೋಕ,ಸ್ತೋತ್ರ,ಮಂತ್ರಗಳಿಗೆ ಸಂಗೀತದ
ಸ್ಪರ್ಶ ನೀಡಿ.ದೇಶ-ವಿದೇಶಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು
ನಡೆಸುತ್ತಾ,ವಿಶ್ವಾದ್ಯಂತ ಪ್ರಸಿದ್ಧವಾಗುತ್ತಿದೆ,ವಿಶ್ವದ ಏಕೈಕ "ಸಂಸ್ಕೃತ ಬ್ಯಾಂಡ್"
ಎಂಬ ಹೆಗ್ಗಳಿಕೆಯನ್ನು ಗಳಿಸಿರುವ "ಧ್ರುವ ಸಂಸ್ಕೃತ
ಬ್ಯಾಂಡ್’.ಶ್ಲೋಕ,ಮಂತ್ರ,ಸಂಸ್ಕೃತಭಾಷೆಯ ಪ್ರಚಾರವನ್ನು ವಿಶ್ವಾದ್ಯಂತ ಮಾಡುವುದೇ
ಧ್ರುವ ಸಂಸ್ಕೃತ ಬ್ಯಾಂಡಿನ ಮೂಲ ಉದ್ದೇಶ.

"ಸಂಗೀತ ಯಾವುದೇ ರೂಪದಲ್ಲಿದ್ದರೂ ಅದು ಮನಸ್ಸಿನಲ್ಲಿ ಒಳ್ಳೆಯ ಯೋಚನೆಯನ್ನೇ
ತುಂಬುತ್ತದೆ. ಶಾಸ್ತ್ರೀಯ ಸಂಗೀತ ನೇರವಾಗಿ ಹೃದಯಗಳ ಜೊತೆಗೆ ಸಂಬಂಧವನ್ನು
ಬೆಸೆಯುತ್ತದೆ. ಸಂಸ್ಕೃತ ಶ್ಲೋಕಗಳು ಇವೆಲ್ಲಕ್ಕಿಂತ ವಿಭಿನ್ನ. ಇದು ಹೃದಯಗಳ ಜೊತೆ
ಸಂಬಂಧ ಬೆಳೆಸುವುದರ ಜೊತೆಗೆ ಆತ್ಮಗಳ ಜೊತೆಗೂ ನಂಟು ಬೆಳೆಸುತ್ತದೆ ”ಎಬುದು ಧ್ರುವ
ಬ್ಯಾಂಡ್ ಸಂಸ್ಥಾಪಕ ಶ್ರೀ ಸಂಜಯ ದ್ವಿವೇದಿಯವರ ಅಭಿಪ್ರಾಯ.

"ಧ್ರುವ" ಬ್ಯಾಂಡಿಗೆ ಜಗತ್ತಿನಾದ್ಯಂತ ಅತ್ಯುತ್ತಮ ಪ್ರೋತ್ಸಾಹ
ಸಿಗುತ್ತಿದೆ.ವೇದಮಂತ್ರಗಳ,ಶ್ರೀ ಶಂಕರಾಚಾರ್ಯರ ಸ್ತೋತ್ರಗಳ,ಸಂಸ್ಕೃತ ನಾಟಕಗಳ ಮೂಲಕ
ಕಾರ್ಯಕ್ರಮವನ್ನು ನಡೆಸಿಕೊಡಲಾಗುತ್ತದೆ.ಇದಲ್ಲದೇ ಸ್ವಯಂರಚಿತ ಸಂಸ್ಕೃತ
ಗೀತೆ,ಕಥೆಗಳನ್ನೂ ಸಂಸ್ಕೃತ ಬ್ಯಾಂಡಿನಲ್ಲಿ ನಿರೂಪಿಸಿ ಸಂಸ್ಕೃತಾಭಿಮಾನಿಗಳನ್ನು
ರಂಜಿಸುವ ಕಾರ್ಯ ಮುಂದುವರಿದಿದೆ.ಒಟ್ಟಿನಲ್ಲಿ ಧ್ರುವ ಸಂಗೀತ ಕ್ಷೇತ್ರದಲ್ಲಿ ಹೊಸ
ಅಲೆಯನ್ನೇ ಸೃಷ್ಟಿಸಿ,ಸಂಸ್ಕೃತ ಭಾಷೆಯ ಪ್ರಸಾರವನ್ನು ಮುಂದುವರಿಸಿದೆ.

Tuesday, 2 August 2016

ಆಚಾರ್ಯ ಸುಶ್ರುತ 
ಶಸ್ತ್ರಚಿಕಿತ್ಸೆಯ ಜನಕ(Father Of Surgery)  ಹಾಗೂ ಸುಪ್ರಸಿದ್ಧ ಸುಶ್ರುತಸಂಹಿತೆಯ ರಚನೆಕಾರ ಆಚಾರ್ಯ ಸುಶ್ರುತ.ಆತನ ಕಾಲ ಸುಮಾರು ಕ್ರಿಸ್ತಪೂರ್ವ ಆರನೇ ಶತಮಾನ.ಹುಟ್ಟಿದ್ದು ಕಾಶಿ,ವಿಶ್ವಾಮಿತ್ರ ವಂಶಜ.ಧನ್ವಂತರಿ ಈತನ ಗುರು.ಭಾರತೀಯ ಚಿಕಿತ್ಸಾಪದ್ಧತಿಯಲ್ಲಿ ಸುಶ್ರುತಸಂಹಿತೆಗೆ ವಿಶೇಷವಾದ ಸ್ಥಾನಮಾನವಿದೆ.ಸುಶ್ರುತಸಂಹಿತೆಯಲ್ಲಿ ಶಲ್ಯಚಿಕಿತ್ಸೆಗೆ ಸಂಬಂಧಿಸಿದ ಅನೇಕ ಮಾಹಿತಿಗಳಿವೆ.ಶಸ್ತ್ರಚಿಕಿತ್ಸೆಗೆ ಉಪಯೋಗವಾಗುವಂತಹ ೧೨೫ ಬಗೆಯ ಶಸ್ತ್ರಗಳ ವಿವರಗಳಿವೆ. ಶಸ್ತ್ರಚಿಕಿತ್ಸೆಗೆ ಬೇಕಾದ ಚಾಕು,ಸೂಜಿ,ಚಿಮ್ಮಟ ಮುಂತಾದ ಉಪಕರಣಗಳ ಮಾಹಿತಿಗಳಿವೆ.ಶಸ್ತ್ರಚಿಕಿತ್ಸೆಯನ್ನು ಸುಲಭಗೊಳಿಸಲು ಆಚಾರ್ಯ ಸುಶ್ರುತನೇ ಈ ಶಸ್ತ್ರಗಳನ್ನು ಕಂಡುಹಿಡಿದಿದ್ದ..!!ಅಷ್ಟೇ ಅಲ್ಲ,ಸುಮಾರು ೩೦೦ ವಿಧದ ರೋಗಗಳನ್ನು ಗುಣಪಡಿಸಲು ಸಾಧ್ಯವಾಗುವಂತಹ ಶಸ್ತ್ರಚಿಕಿತ್ಸೆಗಳ ವಿವರಗಳಿವೆ.ಎಂಟನೇ ಶತಮಾನದಲ್ಲೇ ಸುಶ್ರುತಸಂಹಿತೆ ಅರಬಿ ಭಾಷೆಗೆ "ಕಿತಾಬ್-ಇ-ಸುಶ್ರುತ್" ಎಂಬುದಾಗಿ ಅನುವಾದಗೊಂಡಿದೆ."ಕಾಸ್ಮೇಟಿಕ್" ಶಸ್ತ್ರಚಿಕಿತ್ಸೆಯಲ್ಲಿ ಆಚಾರ್ಯ ಸುಶ್ರುತ ವಿಶೇಷವಾದ ನೈಪುಣ್ಯವನ್ನು ಹೊಂದಿದ್ದ.
ಒಮ್ಮೆ ಮಧ್ಯರಾತ್ರಿಯ ಸಮಯದಲ್ಲಿ ಒಬ್ಬ ವ್ಯಕ್ತಿ ಸುಶ್ರುತನನ್ನು ಹುಡುಕಿಕೊಂಡು ಬಂದ.ಆತನ ಮೂಗು ತುಂಡಾಗಿ ರಕ್ತಸ್ರಾವವಾಗುತ್ತಿತ್ತು.ನೋವಿನಿಂದ ಕಂಬನಿ ಮಿಡಿಯುತ್ತಿದ್ದ.ಸುಶ್ರುತನಲ್ಲಿ ಚಿಕಿತ್ಸೆಗಾಗಿ ಅಂಗಲಾಚಿದ.ಸುಶ್ರುತ ಆತನಿಗೆ ಅಭಯವಚನವನ್ನಿತ್ತು ಮನೆಯೊಳಗೆ ಕರೆದೊಯ್ದ.ಶಾಂತನಾಗಿರುವಂತೇ ವ್ಯಕ್ತಿಗೆ ಸೂಚಿಸಿದ.ಚಿಕಿತ್ಸೆಯ ಕೋಣೆ ಸ್ವಚ್ಛ ಹಾಗೂ ಶಾಂತವಾಗಿತ್ತು.ಶಸ್ತ್ರಚಿಕಿತ್ಸೆಗೆ ಬೇಕಾದ ಸಲಕರಣೆಗಳಿಂದ ಕೂಡಿತ್ತು.ಸುಶ್ರುತ ವ್ಯಕ್ತಿಯ ಮೊಗವನ್ನು ಔಷಧೀಯ ರಸದಿಂದ ತೊಳೆದು,ಒಂದು ಆಸನದಲ್ಲಿ ಕೂರಿಸಿದ.ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನೋವಾಗದಿರಲು ಮದ್ಯವನ್ನು ಕುಡಿಸಿದ.ವ್ಯಕ್ತಿ ಪಾನಮತ್ತನಾದ ಬಳಿಕ,ಔಷಧದ ಎಲೆಗಳನ್ನು ತುಂಡಾದ ಮೂಗಿನ ಪ್ರದೇಶದಲ್ಲಿ ಅಂಟಿಸಿದ.ಚಾಕು ಹಾಗೂ ಚಿಮ್ಮಟದಿಂದ ಅದೇ ವ್ಯಕ್ತಿಯ ತೊಡೆಯ ಮಾಂಸವನ್ನು ತೆಗೆದು,ಕತ್ತರಿಸಿದ ಮೂಗಿನ ಭಾಗದಲ್ಲಿ ಅಂಟಿಸಿದದಕ್ಕೆ ಔಷಧಲೇಪನವನ್ನು ಮಾಡಿದ.ಅದಾದ ಬಳಿಕ ಕೆಲವು ಔಷಧಗಳನ್ನು ನೀಡಿ ನಿಯಮಿತವಾಗಿ ಅವುಗಳನ್ನು ಸೇವಿಸಬೇಕೆಂದು ನಿರ್ದೇಶಿಸಿದ.ಹಲವು ದಿನಗಳ ಬಳಿಕ ವ್ಯಕ್ತಿಯ ಮೂಗು ಸರಿಯಾಗಿತ್ತು.ಸುಶ್ರುತನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿತ್ತು!!ದೇಹದ ಸೂಕ್ಷ್ಮಾಂಗವಾಗಿರುವ ಕಣ್ಣಿನ ಶಸ್ತ್ರಚಿಕಿತ್ಸೆಯನ್ನೂ ಸಹ ಸುಶ್ರುತ ಮಾಡಿದ್ದನೆಂಬುದಕ್ಕೆ ಸುಶ್ರುತಸಂಹಿತೆಯಲ್ಲಿ ಆಧಾರವಿದೆ.
 ಶಲ್ಯಚಿಕಿತ್ಸೆಯ ಮೂಲಕ ಪ್ರಸವ ಮಾಡಿಸುವ ವಿಧಾನವೂ ಸುಶ್ರುತನಿಗೆ ತಿಳಿದಿತ್ತು.ಮುರಿದುಹೋಗಿರುವ ಮೂಳೆಗಳನ್ನು ಪುನಃ ಜೋಡಿಸುವ ಚಿಕಿತ್ಸೆಯ ಅರಿವೂ ಸುಶ್ರುತನಿಗಿತ್ತು.ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನೋವಾಗದಿರಲು ಮದ್ಯಪಾನ ಅಥವಾ ಇನ್ನಿತರ ಅರವಳಿಕೆ ಔಷಧಿಗಳನ್ನು ನೀಡಲಾಗುತ್ತಿತ್ತು.ಇವುಗಳು ಸಂಜ್ಞಾಹರಣೆಯಕಾರ್ಯವನ್ನು (Anaesthesia)  ಮಾಡುತ್ತಿದ್ದವು.
ಆದ್ದರಿಂದ ಸುಶ್ರುತನಿಗೆ ಸಂಜ್ಞಾಹರಣದ ಪಿತಾಮಹನೆಂದೂ(Father Of Anaesthesia)  ಕರೆಯಲಾಗುತ್ತದೆ.ಮಧುಮೇಹ ಹಾಗೂ ಬೊಜ್ಜನ್ನು ನಿಯಂತ್ರಿಸುವ ವಿಧಾನವೂ ಸುಶ್ರುತನಿಗೆ ತಿಳಿದಿತ್ತು.ಕೇವಲ ಶಸ್ತ್ರಚಿಕಿತ್ಸಕನಷ್ಟೇ ಅಲ್ಲ,ಸುಶ್ರುತ ಶ್ರೇಷ್ಟ ಆಚಾರ್ಯನೂ ಆಗಿದ್ದ.ತನ್ನ ಶಿಷ್ಯರಿಗೆ ಶಸ್ತ್ರಚಿಕಿತ್ಸೆ ಹೇಗೆ ಮಾಡಬೇಕು..?ಯಾವ ರೋಗಕ್ಕೆ ಯಾವ ಔಷಧಿ ನೀಡಬೇಕೆಂದು ಕಲಿಸುತ್ತಿದ್ದ.ಆರಂಭಿಕ ಶಸ್ತ್ರಚಿಕಿತ್ಸೆಯನ್ನು ಹಣ್ಣು,ತರಕಾರಿ,ಮೇಣದ ಬತ್ತಿ ಮುಂತಾದವುಗಳ ಮೇಲೆ ಪ್ರಯೋಗಿಸಿ ಕಲಿಸುತ್ತಿದ್ದ.ಶಿಷ್ಯರಿಗೆ ಮಾನವಶರೀರದ ಅಂತರ್ಭಾಗಗಳ ಅರಿವನ್ನು ಮೂಡಿಸಲು ಶವವನ್ನು ಶಸ್ತ್ರಚಿಕಿತ್ಸೆಗಾಗಿ ಬಳಸುತ್ತಿದ್ದ.

ಹಾಗಾಗಿ ಸುಶ್ರುತನಿಗೆ ಶಸ್ತ್ರಚಿಕಿತ್ಸೆಯ ಜನಕನೆಂಬ ಬಿರುದು ಅತ್ಯಂತ ಸಮಂಜಸ.ಆಧುನಿಕ ವೈದ್ಯಶಾಸ್ತ್ರ ಇನ್ನೂ ಕಣ್ಬಿಡದ ಸಂದರ್ಭದಲ್ಲಿ ಸುಶ್ರುತನ ಸಾಧನೆ ಅಪಾರ.ಆಯುರ್ವೇದ,ಮಾನವ ಶರೀರಸಂರಚನೆ,ಕಾಯಚಿಕಿತ್ಸೆ,ಬಾಲರೋಗ,ಸ್ತ್ರೀರೋಗ,ಮನೋರೋಗಗಳಿಗೆ ಸುಶ್ರುತನ ಬಳಿ ನಿಖರವಾದ ಚಿಕಿತ್ಸೆಗಳಿದ್ದವು.ಭಾರತೀಯ ವೈದ್ಯಶಾಸ್ತ್ರಕ್ಕೆ ಸುಶ್ರುತನ ಕೊಡುಗೆ ಅವಿಸ್ಮರಣೀಯ.ಆದರೆ ದುರದೃಷ್ಟ ನೋಡಿ,ಭಾರತೀಯರಾದ ನಮಗೆ ಹಿತ್ತಲಗಿಡ ಮದ್ದಲ್ಲ.ನಮ್ಮವರ ಸಾಧನೆಯ ಅರಿವು ನಮಗಿಲ್ಲ.ಇಂದಿಗೂ ವಿದೇಶಿಯರೇ ಶ್ರೇಷ್ಟ ಸಂಶೊಧಕರೆಂಬ ಪರಕೀಯ ಮನಸ್ಥಿತಿ.ಎಲ್ಲಿಯವರೆಗೆ ನಾವು ಸ್ವಾಭಿಮಾನಿಗಳಾಗುವುದಿಲ್ಲವೋ ಅಲ್ಲಿಯವರೆಗೂ ನಮ್ಮದು ಚಿಂತಾಜನಕ ಸ್ಥಿತಿ..!!ಭಾರತೀಯತೆಯ ನೆತ್ತರು ನಮ್ಮ ಶರೀರದಲ್ಲಿ ವ್ಯಾಪಿಸಲಿ.ಇದು ಶಸ್ತ್ರಚಿಕಿತ್ಸೆಯಿಂದ ಸಾಧ್ಯವಿಲ್ಲ.ಕೇವಲ ಸ್ವಾಭಿಮಾನದಿಂದ ಮಾತ್ರ ಸಾಧ್ಯ.ಪರಕೀಯ ಮನಸ್ಥಿತಿಯವರಿಗೆ ಯಾವ ವೈದ್ಯ ಶಾಸ್ತ್ರದಲ್ಲೂ ಚಿಕಿತ್ಸೆಯಿಲ್ಲ.ಅದವರ ದೌರ್ಭಾಗ್ಯ.

"ಸರ್ವೇ ಭವಂತು ಸುಖಿನಃ"