Tuesday, 9 August 2016

ಧನ್ವಂತರಿ


ಧನ್ವಂತರಿ

ದೇವತೆಗಳಿಗೂ ವೈದ್ಯ ಧನ್ವಂತರೀ.ಧನ್ವಂತರಿಯನ್ನು ಮಹಾವಿಷ್ಣುವಿನ ಅವತಾರವೆಂದೇ ಗುರುತಿಸಲಾಗುತ್ತದೆ.ಮಹಾ ಚಿಕಿತ್ಸಕನಾದ್ದರಿಂದ ಆತ ದೈವತ್ವಪದವಿಯನ್ನೂ ಪಡೆದ.ದೇವಾಸುರರು ಸಮುದ್ರವನ್ನು ಮಥಿಸುವಾಗ ಧನ್ವಂತರಿಯ ಅವತಾರವಾಯಿತು.ಶರತ್ ಋತುವಿನ ಪೂರ್ಣಿಮೆಯಂದು ಚಂದ್ರನ,ಕಾರ್ತಿಕ ದ್ವಾದಶಿಯಂದು ಕಾಮಧೇನುವಿನ,ತ್ರಯೋದಶಿಯಂದು ಧನ್ವಂತರಿಯ,ಚತುರ್ದಶಿಯಂದು ಕಾಳಿ ಮಾತೆಯ,ಅಮಾವಾಸ್ಯೆಯಂದು ಮಹಾಲಕ್ಷ್ಮಿಯ ಪ್ರಾದುರ್ಭಾವವಾಯಿತು.ಹಾಗಾಗಿ ದೀಪಾವಳಿ ಹಬ್ಬದ ಎರಡು ದಿನ ಮುನ್ನ ಧನ್ವಂತರಿ ಅವತಾರದ ಸ್ಮರಣೆಗಾಗಿ "ಧನತೇರಸ್" ಎಂಬ ಹಬ್ಬವನ್ನು ಆಚರಿಸಲಾಗುತ್ತದೆ. "ಧನತೇರಸ್" ಹಬ್ಬದ ದಿನದಂದೇ ಧನ್ವಂತರಿ,ಆಯುರ್ವೇದ ಶಾಸ್ತ್ರವನ್ನು ರಚಿಸಿದ್ದ.ಮೇಲಿನ ಎರಡು ಭುಜಗಳಲ್ಲಿ ಶಂಖ ಹಾಗೂ ಚಕ್ರ,ಕೆಳಗಿನ ಎರಡು ಭುಜಗಳಲ್ಲಿ ಔಷಧದ ಪಾತ್ರೆ ಹಾಗೂ ಅಮೃತಕಲಶಗಳನ್ನು ಧರಿಸಿ ಧನ್ವಂತರಿ ಚತುರ್ಭುಜನಾಗಿದ್ದಾನೆ. ಈತನನ್ನು "ಆರೋಗ್ಯದೇವತೆ" ಎಂದು ಕರೆಯಲಾಗುತ್ತದೆ. ಅಮೃತಕ್ಕೆ ಸಮಾನವಾದಂತಹ ಔಷಧಿಗಳನ್ನು ಸೃಷ್ಟಿಸಿದ ಖ್ಯಾತಿ ಧನ್ವಂತರಿಗೆ ಸಲ್ಲುತ್ತದೆ. ಧನ್ವಂತರಿಯ ವಂಶಸ್ಥ ದಿವೋದಾಸ,ಕಾಶಿಯಲ್ಲಿ "ಶಲ್ಯ ಚಿಕಿತ್ಸಾ" ಎಂಬ ವಿಶ್ವದ ಮೊದಲನೇ ಆಯುರ್ವೇದ ವಿದ್ಯಾಲಯವನ್ನು ಸ್ಥಾಪಿಸಿದ್ದ.ಅದರಲ್ಲಿ ಆಚಾರ್ಯ ಸುಶ್ರುತ ಪ್ರಧಾನಾಚಾರ್ಯನಾಗಿದ್ದ.ದಿವೋದಾಸನ ಶಿಷ್ಯ ಸುಶ್ರುತನಾಗಿದ್ದ.ಸುಶ್ರುತ "ಸುಶ್ರುತ ಸಂಹಿತಾ" ಎಂಬ ಪ್ರಸಿದ್ಧ ಆಯುರ್ವೇದಗ್ರಂಥವನ್ನು ರಚಿಸಿದ್ದಾನೆ.ವಿಶ್ವದ ಮೊಟ್ಟಮೊದಲ ಶಸ್ತ್ರಚಿಕಿತ್ಸಕನೆಂಬ ಬಿರುದು ಆಚಾರ್ಯ ಸುಶ್ರುತನಿಗೇ ಸಲ್ಲುತ್ತದೆ.ಕಾರ್ತಿಕ ತ್ರಯೋದಶಿಯಂದು ಭಗವಾನ್ ಧನ್ವಂತರಿಯ ಪೂಜೆ-ಪುನಸ್ಕಾರಗಳು ನಡೆಯುತ್ತವೆ. ಸುಶ್ರುತನ ಪ್ರಕಾರ ಮೊದಲು ಆಯುರ್ವೇದವನ್ನು ರಚಿಸಿದ್ದು ಬ್ರಹ್ಮ.ಬ್ರಹ್ಮ ರಚಿಸಿದ ಆಯುರ್ವೇದ ಶಾಸ್ತ್ರದಲ್ಲಿ ಒಂದು ಸಾವಿರ ಅಧ್ಯಾಯಗಳೂ,ಒಂದು ಲಕ್ಷ ಶ್ಲೋಕಗಳೂ ಇದ್ದವು.ಅದನ್ನು ಮೊದಲು ಪ್ರಜಾಪತಿ ಓದಿದ.ನಂತರ ಪ್ರಜಾಪತಿ ಅಶ್ವಿನಿಕುಮಾರರಿಗೆ ಅದನ್ನು ಬೋಧಿಸಿದ.ಅಶ್ವಿನಿಕುಮಾರರು ಇಂದ್ರನಿಗೆ ಆಯುರ್ವೇದವನ್ನು ಕಲಿಸಿದರು.ಇಂದ್ರದೇವನಿಂದ ಧನ್ವಂತರಿ,ಧನ್ವಂತರಿಯಿಂದ ಸುಶ್ರುತ ಹೀಗೆ ಆಯುರ್ವೇದಶಾಸ್ತ್ರ ಬೆಳೆದು ಬಂತು.ಭಾವಪ್ರಕಾಶದ ಅನುಸಾರ ಅತ್ರೇಯ ಮುಂತಾದ ಋಷಿಗಳು ಇಂದ್ರನಿಂದ ಆಯುರ್ವೇದವನ್ನು ಕಲಿತು ಅದನ್ನು ಅಗ್ನಿವೇಶ ಮುಂತಾದ ತಮ್ಮ ಶಿಷ್ಯರಿಗೆ ಬೋಧಿಸಿದರು. ವೇದ ಸಂಹಿತೆ,ಬ್ರಾಹ್ಮಣ ಮುಂತಾದ ಗ್ರಂಥಗಳಲ್ಲಿ ಧನ್ವಂತರಿ ಹೆಸರಿನ ಪ್ರಸ್ತಾಪವಿಲ್ಲ.ಆದರೆ ಮಹಾಭಾರತ ಹಾಗೂ ಪುರಾಣಗಳಲ್ಲಿ ಮಹಾವಿಷ್ಣುವಿನ ಸ್ವರೂಪ ಧನ್ವಂತರಿಯೆಂಬ ವಿಷಯದ ಉಲ್ಲೇಖವಿದೆ. ಸಮುದ್ರದಿಂದ ಹೊರಬಂದ ಧನ್ವಂತರಿ, ಮಹಾವಿಷ್ಣುವಿನಲ್ಲಿ ಈ ಪ್ರಪಂಚದಲ್ಲಿ ನನ್ನ ಸ್ಥಾನವೇನೆಂದು ಕೇಳುತ್ತಾನೆ.ಆಗ ಮಹಾವಿಷ್ಣು "ಯಜ್ಞದ ವಿಭಾಗವನ್ನು ದೇವತೆಗಳಿಗೆ ನೀಡಲಾಗಿದೆ.ದೇವತೆಗಳ ನಂತರ ನೀನು ಆವಿರ್ಭವಿಸಿದ್ದರಿಂದ ನೀನು ದೇವತೆಯಲ್ಲ.ಮುಂದಿನ ಜನ್ಮದ ಶರೀರದಿಂದಷ್ಟೇ ನಿನಗೆ ದೈವತ್ವ ಪ್ರಾಪ್ತಿಯಾಗುತ್ತದೆ.ಆಗ ಲೋಕದಲ್ಲಿ ನೀನು ಪ್ರಸಿದ್ಧಿಯನ್ನು ಪಡೆಯುವೆ.ಲೋಕದ ಜನರೆಲ್ಲಾ ನಿನ್ನನ್ನು ಪೂಜಿಸುತ್ತಾರೆ.ನೀನು ಆಯುರ್ವೇದದ ಅಷ್ಟಾಂಗ ವಿಭಜನೆಯನ್ನೂ ಸಹ ಮಾಡುತ್ತೀಯಾ.ದ್ವಿತೀಯ ದ್ವಾಪರಯುಗದಲ್ಲಿ ಪುನಃ ನಿನ್ನ ಅವತಾರವಾಗುತ್ತದೆ" ಎಂಬ ವರವಿತ್ತು ಅನುಗ್ರಹಿಸುತ್ತಾನೆ.ವಿಷ್ಣುವಿನ ವರಪ್ರಸಾದದಂತೇ ಕಾಶಿರಾಜ ಧನ್ವನ ತಪಸ್ಸಿಗೆ ಮೆಚ್ಚಿ ಭಗವಾನ್ ಅಬ್ಜ ಆತನ ಪುತ್ರನಾಗಿ ಹುಟ್ಟಿದ.ಧನ್ವ ತನ್ನ ಪುತ್ರನಿಗೆ ಧನ್ವಂತರಿ ಎಂದು ನಾಮಕರಣ ಮಾಡಿದ.ಧನ್ವ ಕಾಶಿನಗರಿಯ ಸಂಸ್ಥಾಪಕ ಕಾಶನ ಪುತ್ರನಾಗಿದ್ದ. ಧನ್ವಂತರಿ ಸರ್ವರೋಗಗಳನ್ನು ನಿವಾರಿಸುವದರಲ್ಲಿ ನಿಷ್ಣಾತನಾಗಿದ್ದ.ಆತ ಭರದ್ವಾಜ ಮಹರ್ಷಿಗಳಿಂದ ಆಯುರ್ವೇದ ಶಾಸ್ತ್ರವನ್ನು ಕಲಿತು ಅಷ್ಟಾಂಗ ವಿಭಜನೆಯನ್ನು ಮಾಡಿ ದೈವತ್ವವನ್ನೂ ಪಡೆದ.ಕಾಶ-ದೀರ್ಘತಪಾ-ಧನ್ವ-ಧನ್ವಂತರಿ-ಕೇತುಮಾನ್-ಭೀಮಸೇನ-ದಿವೋದಾಸ-ಪ್ರತರ್ದನ-ವತ್ಸ-ಅಲರ್ಕ ಇದು ಹರಿವಂಶ ಪುರಾಣದ ಪ್ರಕಾರ ಧನ್ವಂತರಿಯ ಕುಲಪರಂಪರೆ.ವೈದಿಕ ಕಾಲದಲ್ಲಿ ಅಶ್ವಿನಿಕುಮಾರರಿಗೆ ಯಾವ ಸ್ಥಾನವನ್ನು ನೀಡಲಾಗಿತ್ತೋ,ಅದೇ ಮಹತ್ವದ ಸ್ಥಾನವನ್ನು ಪೌರಾಣಿಕ ಕಾಲದಲ್ಲಿ ಧನ್ವಂತರಿಗೆ ನೀಡಲಾಗಿದೆ.ಅಶ್ವಿನಿಕುಮಾರರ ಬಳಿ ಮಧುಕಲಶವಿದ್ದರೆ,ಧನ್ವಂತರಿಯ ಬಳಿ ಅಮೃತಕಲಶವಿದೆ.ಲೋಕವನ್ನು ರಕ್ಷಿಸುವ ಹೊಣೆ ಮಹಾವಿಷ್ಣುವಿನದು.ರೋಗಗಳಿಂದ ರಕ್ಷಿಸುವ ಹೊಣೆ ಧನ್ವಂತರಿಯದು.ಹಾಗಾಗಿ ಧನ್ವಂತರಿಯನ್ನು ಮಹಾವಿಷ್ಣುವಿನ ಸ್ವರೂಪವೆಂದೇ ಹೇಳಲಾಗುತ್ತದೆ.ಧನ್ವಂತರಿಯನ್ನು ಶ್ರದ್ಧೆಯಿಂದ ಉಪಾಸಿಸುವುದರಿಂದ ಸರ್ವ ಖಾಯಿಲೆಗಳೂ ಶಮನವಾಗುತ್ತವೆ.ಮನುಷ್ಯನಿಗೆ ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯ ಲಭಿಸುತ್ತದೆ.ದೀರ್ಘಾವಧಿ ಕಾಲದಿಂದ ಬಾಧಿಸುತ್ತಿರುವ ಮಹಾವ್ಯಧಿಗಳ ಉಪಶಮನವಾಗುತ್ತವೆ.ವ್ಯಾಧಿಯಿಂದ ಬಳಲುತ್ತಿರುವವರು ಪ್ರತಿನಿತ್ಯ ಈ ಮಂತ್ರಗಳನ್ನು ಪಠಿಸುವುದರಿಂದ ಒಳಿತಾಗುತ್ತದೆ.ಧನ್ವಂತರಿಯ ಸರಳ ಮಂತ್ರ.."ಓಂ ಧನ್ವಂತರಯೇ ನಮಃ" ಧನ್ವಂತರಿಯ ಪ್ರಬಲ ಮಂತ್ರ -"ಓಂ ನಮೋ ಭಗವತೇ ಮಹಾಸುದರ್ಶನಾಯ ವಾಸುದೇವಾಯ ಧನ್ವಂತರಯೇ ಅಮೃತಕಲಶಹಸ್ತಾಯ ಸರ್ವಭಯ ವಿನಾಶಾಯ ಸರ್ವರೋಗನಿವಾರಣಾಯ ತ್ರಿಲೋಕಪಥಾಯ ತ್ರಿಲೋಕನಾಥಾಯ ಶ್ರೀ ಮಹಾವಿಷ್ಣು ಸ್ವರೂಪ ಶ್ರೀ ಧನ್ವಂತರೀ ಸ್ವರೂಪ ಶ್ರೀ ಶ್ರೀ ಶ್ರೀ ಔಷಧಚಕ್ರ ನಿವಾರಣಾಯ ನಮಃ"ಈ ಮಂತ್ರವನ್ನು ಜಪಿಸಿ,ಹೋಮ ಮಾಡುವುದರಿಂದ ಭಯನಿವಾರಣೆ ಹಾಗೂ ಉತ್ತಮವಾದ ಆರೋಗ್ಯ ಪ್ರಾಪ್ತಿಯಾಗುತ್ತದೆ.ಧನ್ವಂತರಿ ಸ್ತೋತ್ರ -  "ಓಂ ಶಂಖಂ ಚಕ್ರಂ ಜಲೌಕಾಂ ದಧದಮೃತಘಟಂ ಚಾರುದೋರ್ಭಿಶ್ಚತುರ್ಭಿಃ
ಸೂಕ್ಷ್ಮಸ್ವಚ್ಛಾತಿಹೃದ್ಯಾಂಶುಕ ಪರಿವಿಲಸನ್ಮೌಲಿಮಂಭೋಜನೇತ್ರಮ್ |ಕಾಲಾಂಭೋದೋಜ್ವಲಾಂಗಂ ಕಟಿತಟವಿಲಸಚ್ಚಾರುಪೀತಾಂಬರಾಢ್ಯಂವಂದೇ ಧನ್ವಂತರೀಂ ತಂ ನಿಖಿಲಗದವನಪ್ರೌಢದಾವಾಗ್ನಿನೀಲಮ್ ||"ಧನ್ವಂತರಿಯ ನಿರಂತರ ಆರಾಧನೆಯಿಂದ ಮಹಾವ್ಯಾಧಿಗಳು ದೂರವಾಗಿ ಮನುಷ್ಯ ಸದಾ ಆರೋಗ್ಯದಿಂದಿರುತ್ತಾನೆ.ಧನ್ವಂತರಿಯ ಕೃಪೆ ಸದಾ ನಮಗಿರಲಿ.ಆಯುರಾರೋಗ್ಯಗಳು ಲಭಿಸಲಿ.

No comments:

Post a Comment