ನಾಗಪಂಚಮಿ
ಭಾರತೀಯ ಸಂಸ್ಕೃತಿಯ ಮಹತ್ವವೇ
ಅದು.ಪ್ರತಿಯೊಂದು ಜೀವಿಯಲ್ಲೂ ಸಹ ನಾವು ಪರಮಾತ್ಮನನ್ನೇ ಕಾಣುತ್ತೇವೆ.ಪ್ರಕೃತಿಯನ್ನು
ಭಗವಂತನೆಂದೇ ಆರಾಧಿಸುತ್ತೇವೆ.ತುಳಸೀಪೂಜೆ,ಅಶ್ವತ್ಥಪೂಜೆ,ಗೋಪೂಜೆ ಇಂತಹ ಪೂಜೆಗಳು ನಮ್ಮ
ಸಂಸ್ಕೃತಿಯ ಅವಿಭಾಜ್ಯ ಅಂಗಗಳಾಗಿವೆ.ಅವುಗಳಲ್ಲಿ ನಾಗರಪೂಜೆಯೂ ಸಹ ಮಹತ್ವದ ಸ್ಥಾನವನ್ನು ಪಡೆದಿದೆ.ನಮ್ಮ
ಸಂಸ್ಕೃತಿಯಲ್ಲಿ ನಾಗರಪೂಜೆಗೆ ಒಂದು ವಿಶಿಷ್ಟವಾದಂತಹ ಸ್ಥಾನವಿದೆ.ಭಗವಾನ್ ಶಂಕರನ ಕೊರಳಿಗೆ
ಆಭೂಷಣ ನಾಗ,ಶಿವನ ನಿರ್ಗುಣ,ನಿರಾಕಾರ ಸ್ವರೂಪವಾದಂತಹ ಶಿವಲಿಂಗಕ್ಕೆ ಆಭೂಷಣ ನಾಗ,ಭಗವಾನ್
ವಿಷ್ಣುವಿನ ಶಯನಸ್ಥಾನ ನಾಗ,ಯಾವಾಗ ಮಹಾವಿಷ್ಣು ಅವತಾರವೆತ್ತಿ ಭೂಮಿಗವತರಿಸಿದ್ದನೋ ಪ್ರತಿಯೊಂದು
ಅವತಾರದಲ್ಲೂ ಆತನ ಜೊತೆಯಾಗಿದ್ದವ ಶೇಷನಾಗ,ಅಂತಹ ನಾಗನನ್ನು ಪೂಜಿಸುವುದರಲ್ಲಿ ಧನ್ಯತೆಯ ಭಾವ
ನಮ್ಮದು.
ಪವಿತ್ರ ಶ್ರಾವಣಮಾಸದ ಶುಕ್ಲಪಕ್ಷದ
ಪಂಚಮಿಯಂದು ನಾಗಪೂಜೆಯನ್ನು ಮಾಡಲಾಗುತ್ತದೆ.ಅದಕ್ಕಾಗಿ ಈ ದಿನ "ನಾಗಪಂಚಮಿ" ಎಂಬ
ಹೆಸರನ್ನು ಪಡೆದಿದೆ.ನಾಗಗಳಿಗೆ ಆನಂದವನ್ನು ನೀಡುವ ದಿನ ನಾಗಪಂಚಮೀ.ಪೌರಾಣಿಕ ಕಥೆಯೊಂದರ
ಅನುಸಾರ,ಮಾತೃಶಾಪದಿಂದೊಮ್ಮೆ ನಾಗಲೋಕ ಹತ್ತಿ ಉರಿಯತೊಡಗಿತು.ಹಲವಾರು ದಿನಗಳ ಕಾಲ ನಾಗಲೋಕವನ್ನು ದಹಿಸಿದ
ಅಗ್ನಿ ಶ್ರಾವಣ ಶುಕ್ಲ ಪಂಚಮಿಯಂದು ಶಾಂತನಾಗಿದ್ದ.ಈ ಕಾರಣದಿಂದ ಶ್ರಾವಣ ಶುಕ್ಲ ಪಂಚಮಿಯನ್ನು
"ನಾಗಪಂಚಮೀ" ಎಂದು ಆಚರಿಸುವ ಪದ್ಧತಿ ಅನಾದಿಕಾಲದಿಂದ ನಡೆದು ಬಂತಿತು.
ನಾಗಪಂಚಮಿಯಂದು ಮಣ್ಣಿನ ಹಾವುಗಳನ್ನು ತಯಾರಿಸಿ,ಅವುಗಳನ್ನು
ಶೃಂಗರಿಸಬೇಕು.ಅನಂತರ ಬಿಳಿಕಮಲದಲ್ಲಿ ಅರ್ಚಿಸಬೇಕು.ತದನಂತರ ಅವುಗಳನ್ನು ಪೀಠದಲ್ಲಿಟ್ಟು ಹಾಲಿನ
ಅಭಿಷೇಕವನ್ನು ಮಾಡಬೇಕು.ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಅನೇಕ
ನಾಗದೇವಾಲಯಗಳಿವೆ.ದೇವಾಲಯಗಳಲ್ಲೂ ಸಹ ನಾಗಪೂಜೆಯನ್ನು ಮಾಡಿಸಬಹುದು.ನಾಗಪಂಚಮಿಯಂದು ಬಹುವಿಜೃಂಬಣೆಯಿಂದ
ನಾಗದೇವಾಲಯಗಳಲ್ಲಿ ಪೂಜೆ ನಡೆಸಲಾಗುತ್ತದೆ.
ಗರುಡ ಪುರಾಣದಲ್ಲಿ,ನಾಗಪಂಚಮಿಯಂದು ಮನೆಯ
ಮುಖ್ಯದ್ವಾರದಲ್ಲಿ ನಾಗಚಿತ್ರವನ್ನು ಸ್ಥಾಪಿಸಿ,ಅದನ್ನು ಪೂಜಿಸಬೇಕು.ಅದಕ್ಕೆ "ಭಿತ್ತಿ
ಚಿತ್ರ ನಾಗಪೂಜೆ" ಎಂದು ಕರೆಯಲಾಗುತ್ತದೆ.ಮಹಿಳೆಯರು ಅನ್ನಸಂತರ್ಪಣೆಯನ್ನು
ಮಾಡಬೇಕು.ಅಕ್ಕಿ,ಹಾಲು,ಬೆಲ್ಲ ಮುಂತಾದ ದ್ರವ್ಯಗಳಿಂದ ಮಾಡಿದ ಪಾಯಸವನ್ನು ನಾಗದ ಹುತ್ತಕ್ಕೆ
ಅರ್ಪಿಸಬೇಕು ಎನ್ನಲಾಗಿದೆ.
ನಾಗಪಂಚಮಿ ಹಬ್ಬದ ಕುರಿತು ಒಂದು
ಪ್ರಸಿದ್ಧವಾದ ಕಥೆಯಿದೆ.ಹಿಂದಿನ ಕಾಲದಲ್ಲೊಬ್ಬ ರೈತನಿದ್ದ.ಆತನಿಗೆ ಇಬ್ಬರು ಗಂಡುಮಕ್ಕಳು,ಒಬ್ಬಳು
ಮಗಳಿದ್ದಳು.ಒಮ್ಮೆ ಹೊಲದಲ್ಲಿ ಕೆಲಸಮಾಡುತ್ತಿದ್ದಾಗ ನೇಗಿಲಿಗೆ ನಿಲುಕಿ ನಾಗರಹಾವಿನ ಮರಿಗಳು ಅಸುನೀಗಿದವು.ಇದರಿಂದ ಕೋಪಗೊಂಡ ನಾಗಿಣಿ ರೈತನ ಮೇಲೆ ಪ್ರತೀಕಾರಗೈಯ್ಯಲು
ಸಿದ್ಧಳಾದಳು.ಒಂದು ರಾತ್ರಿ ರೈತನ ಮನೆಗೆ ಪ್ರವೇಶಿಸಿದ ನಾಗಿಣಿ ನಿದ್ರಿಸುತ್ತಿದ್ದ ರೈತ,ಆತನ
ಹೆಂಡತಿ,ಆತನ ಎರಡು ಗಂಡುಮಕ್ಕಳಿಗೆ ಕಚ್ಚಿದಳು.ವಿಷಪ್ರಭಾವದಿಂದ ಎಲ್ಲರೂ ನಿಧನಹೊಂದಿದರು.ಆದರೆ
ರೈತನ ಮಗಳು ನಾಗಿಣಿಯಿಂದ ಪಾರಾದಳು.ಮರುದಿನ ರೈತನ ಮಗಳನ್ನು ಸಾಯಿಸಲು ನಾಗಿಣಿ ಪುನಃ ಆತನ ಮನೆಗೆ
ಹೋದಳು.ಆದರೆ ರೈತನ ಮಗಳು ಬಹು ಬುದ್ಧಿವಂತೆ.
ನಾಗಿಣಿ ಬರುವುದನ್ನು ಗಮನಿಸಿದ ಆಕೆ ಒಂದು
ಪಾತ್ರೆಯಲ್ಲಿ ಹಾಲನ್ನು ಹಿಡಿದು ನಾಗಿಣಿಯನ್ನು ಸ್ವಾಗತಿಸಿದಳು.ತನ್ನ ತಂದೆ ಅರಿಯದೇ ಮಾಡಿದ
ತಪ್ಪನ್ನು ಮನ್ನಿಸು ಎಂದು ಪ್ರಾರ್ಥಿಸಿಕೊಂಡಳು.ಆಕೆಯ ಪ್ರಾರ್ಥನೆಗೆ ನಾಗಿಣಿ ಮನಸೋತಳು.ರೈತನಿಗೆ,ಆತನ
ಹೆಂಡತಿ,ಮಕ್ಕಳಿಗೆ ಪುನಃ ಜೀವದಾನವನ್ನು ಮಾಡಿ,"ಶ್ರಾವಣ ಶುಕ್ಲ ಪಂಚಮಿಯಂದು ಮಹಿಳೆಯರು
ನನ್ನನ್ನು ಪೂಜಿಸಿದರೆ ಅವರ ಏಳು ಸಂತತಿಗಳು ಸುರಕ್ಷಿತವಾಗಿರುತ್ತವೆ" ಎಂಬ
ಆಶೀರ್ವಾದವನ್ನಿತ್ತಳು.
ನಾಗಪಂಚಮಿಯಂದು "ಓಂ ನವಕುಲಾಯೈ
ವಿದ್ಮಹೇ ವಿಷದಂತಾಯ ಧೀಮಹಿ | ತನ್ನೋ ಸರ್ಪಃ ಪ್ರಚೋದಯಾತ್" ಎಂಬ ನಾಗಗಾಯತ್ರಿಮಂತ್ರವನ್ನು
ಜಪಿಸಿದರೆ ಖಂಡಿತ ಒಳಿತಾಗುತ್ತದೆ.
"ಸರ್ವೇ
ಭವಂತು ಸುಖಿನಃ"
No comments:
Post a Comment