ಸ್ಥಿತಪ್ರಜ್ಞ ಶ್ರೀರಾಮ.ಸ್ಥಿತಪ್ರಜ್ಞನೆಂದರೆ,ಮನದ
ಆಸೆಗಳನ್ನೆಲ್ಲ ತ್ಯಜಿಸಿ ಸಂತೋಷವಾಗಿರುವವ.ದುಃಖ ಬಂದಾಗ ಕಳವಳಗೊಳ್ಳದಿರುವವ.ಸುಖದಲ್ಲಿ
ಮೈಮರೆಯದಿರುವವ.ಸುಖ-ದುಃಖಗಳನ್ನು ಸಮವಾಗಿ ಸ್ವೀಕರಿಸುವವ.ಇಂದ್ರಿಯಗಳನ್ನು ತನ್ನ
ವಶದಲ್ಲಿರಿಸಿಕೊಂಡವ.ರಾಮನೂ ಹಾಗೇ.ರಾಕ್ಷಸರನ್ನು ವಧಿಸಿದಾಗ ಸಂತೋಷಗೊಳ್ಳಲಿಲ್ಲ.ಕಾಡಿಗೆ ಹೋಗುವ
ಸಂದರ್ಭದಲ್ಲೂ ದುಃಖಿಸಲಿಲ್ಲ.ಅರಮನೆಯ ಸುಖದಲ್ಲೇ ಬೆಳೆದು,ವನವಾಸದಂತಹ ಕಠಿಣ ಪರಿಸ್ಥಿತಿಯಲ್ಲೂ
ಯಾತನೆ ಪಡಲಿಲ್ಲ.ಅಂತಹ ಸ್ಥಿತಪ್ರಜ್ಞ ಶ್ರೀರಾಮ ಸೀತಾವಿಯೋಗದಿಂದ ಪರಿತಪಿಸಿದ.ದುಃಖದ ಮಡುವಿನಲ್ಲಿ
ಬಿದ್ದು ಒದ್ದಾಡಿದ.ಅದಕ್ಕೆ ಕಾರಣ ಸೀತೆಯ ಮೇಲಿನ ಅದಮ್ಯ ಪ್ರೀತಿ.ರಾಮಸೀತೆಯರ ಮಧುರಬಾಂಧವ್ಯ
ಹೇಗಿತ್ತೆಂದು ರಾಮಾಯಣದ ಈ ಸನ್ನಿವೇಶ ತಿಳಿಸುತ್ತದೆ.
ಮಾಯಾಜಿಂಕೆಯನ್ನು
ಸಂಹರಿಸುವಾಗ ಅದು “ಹಾ ಸೀತೆ ! ಹಾ ಲಕ್ಷ್ಮಣ ! ತ್ರಾಹಿ ತ್ರಾಹಿ” ಎಂದು ರಾಮನ ಸ್ವರದಲ್ಲೇ
ಕೂಗಿತ್ತು.ರಾಮನಿಗೆ ಆಪತ್ತು ಬಂದೊದಗಿದೆಯೆಂದು ಚಿಂತಿಸಿದ ಸೀತೆ ತನ್ನ ರಕ್ಷಣೆಗಿದ್ದ
ಲಕ್ಷ್ಮಣನನ್ನು ರಾಮನ ನೆರವಿಗಾಗಿ ಧಾವಿಸುವಂತೇ ಕೇಳಿಕೊಳ್ಳುತ್ತಾಳೆ.ಲಕ್ಷ್ಮಣ ಹಲವು ಬಗೆಯಲ್ಲಿ
ಸಾಂತ್ವನ ಹೇಳಿದರೂ,ಸೀತೆ ಕಟುವಾಗಿ ಆತನನ್ನು ನಿಂದಿಸುತ್ತಾಳೆ.ಕೋಪಗೊಂಡ ಲಕ್ಷ್ಮಣ ರಾಮನ
ಸಹಾಯಕ್ಕಾಗಿ ಧಾವಿಸುತ್ತಾನೆ.
ಏಕಾಂಗಿಯಾಗಿ
ಬರುತ್ತಿರುವ ಲಕ್ಷ್ಮಣನನ್ನು ಕಂಡೊಡನೆ ರಾಮನಿಗೆ ದಿಗಿಲಾಗುತ್ತದೆ.”ಲಕ್ಷ್ಮಣ,ಮಾಯಾಜಿಂಕೆಯ
ರೂಪದಲ್ಲಿದ್ದ ಆ ದುರಾತ್ಮ ರಾಕ್ಷಸ ನನ್ನ ಸ್ವರವನ್ನೇ ಅನುಕರಣೆ ಮಾಡಿ “ಹಾ ಲಕ್ಷ್ಮಣ ತ್ರಾಹಿ
ತ್ರಾಹಿ” ಎಂದು ಜೋರಾಗಿ ಕೂಗಿದ.ಅದು ಸೀತೆಗೆ ಕೇಳಿಸಿರಬಹುದು.ನನಗೇನೋ ಆಪತ್ತೊದಗಿದೆಯೆಂದು
ಚಿಂತಿಸಿದ ಸೀತೆ ನಿನ್ನನ್ನಿಲ್ಲಿ ಕಳಿಸಿರಬಹುದು.ತಪ್ಪು ಮಾಡಿದೆ ಲಕ್ಷ್ಮಣ..!!ಸೀತೆಯೊಬ್ಬಳನ್ನೇ
ಬಿಟ್ಟು ನೀನಿಲ್ಲಿ ಬರಬಾರದಿತ್ತು.ಸೀತೆ ಜೀವಂತವಾಗಿದ್ದಾಳೆ ತಾನೇ..?ಆಶ್ರಮದಲ್ಲಿ
ಸೀತೆಯಿರದಿದ್ದರೆ ಖಂಡಿತ ನಾನು ಜೀವಿಸುವುದಿಲ್ಲ.”ರಾಮ ಲಕ್ಷ್ಮಣನಲ್ಲಿ ಆತಂಕದಿಂದ ಕೇಳಿದ.
“ಅಣ್ಣ,ನಾನು
ಅತ್ತಿಗೆಯ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತು ಆಶ್ರಮದಲ್ಲಿ ಅವಳನ್ನೇ ಕಾಯುತ್ತಿದ್ದೆ.ಆದರೆ
ನಿನ್ನದೇ ಸ್ವರಸಾಮ್ಯವುಳ್ಳ ಮಾಯಾರಾಕ್ಷಸನ ಆರ್ತನಾದವನ್ನು ಕೇಳಿದ ಸೀತೆ ವಿಚಲಿತಳಾಗಿ ನನ್ನನ್ನು
ನಿನ್ನ ರಕ್ಷಣೆಗಾಗಿ ಧಾವಿಸುವಂತೇ ಕೇಳಿಕೊಂಡಳು.ನಾನು ಪರಿಪರಿಯಾಗಿ ಬೇಡಿಕೊಂಡೆ.ಕಟುವಾಗಿ
ನನ್ನನ್ನು ನಿಂದಿಸಿದಳು.ಅನ್ಯಮಾರ್ಗವಿಲ್ಲದೇ ನಾನಿಲ್ಲಿ ಬರಬೇಕಾಯಿತು”ಲಕ್ಷ್ಮಣನ ಮಾತು
ಕ್ಷೀಣವಾಗಿತ್ತು.ಮೊಗ ವಿಷಣ್ಣವಾಗಿತ್ತು.ತಪ್ಪು ಮಾಡಿದೆನೆಂಬ ಅಪರಾಧಿ ಪ್ರಜ್ಞೆ ಕಾಡುತ್ತಿತ್ತು.
ಶ್ರೀರಾಮ ಎಡಗಣ್ಣಿನ
ಕೆಳರೆಪ್ಪೆ ಅದುರಲು ಶುರುವಾಯಿತು.ಕೆಟ್ಟ ಶಕುನಗಳ ದರ್ಶನವಾಯಿತು.”ಅಪಿ ಕ್ಷೇಮಂ ನು
ಸೀತಾಯಾಃ?”ಸೀತೆ ನಿಜವಾಗಲೂ ಕ್ಷೇಮದಿಂದಿದ್ದಾಳಾ..?ಸಂದೇಹವಾಯಿತು.ಕೂಡಲೇ ಆಶ್ರಮದತ್ತ
ಧಾವಿಸಿದ.ಸೀತೆಯ ದರ್ಶನವಾಗಲಿಲ್ಲ.ಶ್ರೀರಾಮನ ಮನ ಉದ್ವಿಗ್ನವಾಗಿತ್ತು.ಆಶ್ರಮದ ಸುತ್ತಲೂ
ನಾಲ್ಕಾರು ಬಾರಿ ಓಡಾಡಿದ.ಆತನ ಓಟದ ವೇಗ ಜಿಂಕೆಯಂತಿತ್ತು.ಆತನ ಪರಿಸ್ಥಿತಿ ಸೂತ್ರ ಹರಿದ
ಗಾಳಿಪಟದಂತಾಗಿತ್ತು.ಆಶ್ರಮ ಕಮಲವಿಲ್ಲದ ಸರೋವರದಂತೇ ಕಾಣುತ್ತಿತ್ತು.ಆಶ್ರಮದ ಸನಿಹದ ವೃಕ್ಷಗಳು
ಅಳುತ್ತಿವೆಯೋ ಎಂಬಂತಿತ್ತು.ಗಿಡದಲ್ಲಿನ ಪುಷ್ಪಗಳು ಬಾಡಿದ್ದವು.ಮೃಗ-ಪಕ್ಷಿಗಳೂ ಸಂತಾಪ
ಸೂಚಿಸುತ್ತಿದ್ದವು.ದರ್ಭೆ,ಆಸನ ಮುಂತಾದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ
ಬಿದ್ದಿದ್ದವು.ಇದನ್ನೆಲ್ಲ ಕಂಡ ರಾಮ ಕುಸಿದುಹೋದ.ಸ್ಥಿತಪ್ರಜ್ಞ ತನ್ನ ಬುದ್ಧಿಯ ಸ್ಥಿರತ್ವವನ್ನು ಕಳೆದುಕೊಂಡ.ದುಃಖ
ಉಮ್ಮಳಿಸಿ ಬಂತು. ಸೀತೆಯೊಂದಿಗೆ ಕಳೆದ ಮಧುರ ಕ್ಷಣಗಳು ನೆನಪಾದವು.ಕಣ್ಣಂಚಿನಲ್ಲಿ ಅಶ್ರುಧಾರೆಗಳು
ಸುರಿದವು.ಸೀತೆಯಿಲ್ಲದ ರಾಮನ ಬದುಕು ಪೂರ್ಣವೇ..?ಬಿಕ್ಕಿ ಬಿಕ್ಕಿ ಅತ್ತ.
ಎಲ್ಲಿ ಹೋಗಿರಬಹುದು
ಸೀತೆ..?ದುಷ್ಟರು ಅಪಹರಿಸಿಕೊಂಡು ಹೋದರೇ..?ದಾರಿಗಾಣದೇ ಎಲ್ಲಾದರೂ ಕಳೆದುಹೋದಳೇ..?ರಾಕ್ಷಸರೋ,ಕಾಡುಮೃಗಗಳೋ
ಕೋಮಲಾಂಗಿಯನ್ನು ತಿಂದಿರಬಹುದೇ..?ನನ್ನನ್ನು ಮರಳುಗೊಳಿಸಲು ಎಲ್ಲಾದರೂ
ಅವಿತುಕೊಂಡಿರುವಳೇ..?ಹೂವು-ಹಣ್ಣುಗಳನ್ನು ತರಲು ದೂರ ಹೋದಳೇ..?ನೀರು ತರಲು ನದಿ-ಸರೋವರಕ್ಕೆಲ್ಲಾದರೂ
ಹೋಗಿರಬಹುದೇ..?ಯೋಚಿಸಿ ಯೋಚಿಸಿ ದಿಕ್ಕುತೋಚದಂತಾದ ಶ್ರೀರಾಮ.”ವೈದೇಹಿ,ಸೀತೆ,ಜನಕನಂದಿನಿ” ಎಂದು
ಕೂಗುತ್ತಾ ಎಲ್ಲೆಂದರಲ್ಲಿ ಹುಡುಕುತ್ತಿದ್ದ.ಮರಗಳ ಹಿಂದೆ ಸೀತೆ ಅವಿತಿದ್ದಾಳೆಂಬ ಭ್ರಮೆಯಿಂದ
ಅಲ್ಲೆಲ್ಲಾ ಹುಡುಕುತ್ತಿದ್ದ.ಒಂದು ಬೆಟ್ಟದಿಂದ ಇನ್ನೊಂದು ಬೆಟ್ಟಕ್ಕೆ,ಒಂದು ನದಿತೀರದಿಂದ
ಇನ್ನೊಂದು ನದಿತೀರಕ್ಕೆ ಧಾವಿಸುತ್ತಿದ್ದ.ಶೋಕಸಾಗರದಲ್ಲಿ ಬಿದ್ದ ಶ್ರೀರಾಮ ಗಟ್ಟಿಯಾಗಿ ಅಳುತ್ತಾ
ಸುತ್ತಾಡುತ್ತಿದ್ದ.
ಏನು ಮಾಡಬೇಕೆಂದು
ತಿಳಿಯದೇ ಆಶ್ರಮದ ಪರಿಸರದಲ್ಲಿದ್ದ ಕದಂಬವೃಕ್ಷ,ಬಿಲ್ವವೃಕ್ಷ,ಅರ್ಜುನವೃಕ್ಷ,ತಿಲಕವೃಕ್ಷ,ಅಶೋಕವೃಕ್ಷ,ತಾಲವೃಕ್ಷ,ಜಂಬೂವೃಕ್ಷ
ಮುಂತಾದ ವೃಕ್ಷಗಳ ಸನಿಹ ಬಂದು ದೀನನಾಗಿ “ಸೀತೆಯನ್ನು ನೋಡಿದ್ದೀರಾ..?ದಯವಿಟ್ಟು ಹೇಳಿ” ಎಂದು
ಬೇಡಿಕೊಂಡ.ಉತ್ತರ ಸಿಗಲಿಲ್ಲ.ಚಿಗರೆ,ಆನೆ.ಹುಲಿ,ಮುಂತಾದ ಪ್ರಾಣಿಗಳಲ್ಲಿ “ಸೀತೆಯೆಲ್ಲಿ ಹೇಳಿ”
ಎಂದು ವಿನಂತಿಸಿಕೊಂಡ.ಉನ್ಮಾದಾವಸ್ಥೆಯನ್ನು ಹೊಂದಿದ ರಾಮನಿಗೆ ಎಲ್ಲೆಂದರಲ್ಲಿ ಸೀತೆಯ ರೂಪವೇ
ಕಾಣಿಸಿತು.”ಸೀತೆ..ನಿನ್ನನ್ನು ಕಂಡೆ..!!ಎಲ್ಲಿ ಓಡುತ್ತಿರುವೆ..?ಮರಗಳ ಮರೆಯಲ್ಲಿ ಅವಿತಿರುವ
ನೀನು ನನ್ನೊಂದಿಗೆ ಮಾತಾಡಲಾರೆಯಾ ಪ್ರಿಯೇ..?”ಎನ್ನುತ್ತಾ ಮರಗಳ ಮರೆಯಲ್ಲಿ ಸೀತೆಯನ್ನು ಕಾಣಲು
ಯತ್ನಿಸಿದ.
“ಮಹಾಬಾಹೋ ಲಕ್ಷ್ಮಣ
! ಪಶ್ಯಸಿ ತ್ವಂ ಪ್ರಿಯಾಂ ಕ್ವಚಿತ್” ಮಹಾಬಾಹು ಲಕ್ಷ್ಮಣ ನನ್ನ ಪ್ರೇಯಸಿ ಸೀತೆಯನ್ನು ಎಲ್ಲಾದರೂ
ಕಂಡೆಯಾ” ಲಕ್ಷ್ಮಣನನ್ನು ಕೇಳಿದ.”ಹಾ ಪ್ರಿಯೇ ! ಕ್ವ ಗತಾ ಭದ್ರೇ ಹಾ ಸೀತೇ..!!” ಹಾ ಪ್ರಿಯೇ
ಸೀತೆ ಹಾ ಭದ್ರೇ ಎಲ್ಲಿ ಹೋದೆ ಎಂದು ಪುನಃ ಪುನಃ ಪರಿತಪಿಸಿದ.ಒಂದು ಕ್ಷಣ ಸೀತೆ
ನನ್ನೊಂದಿಗಿದ್ದಾಳೆ ಎಂಬ ಭ್ರಾಂತಿಯಲ್ಲಿರುತ್ತಿದ್ದ.ಮರುಕ್ಷಣ ಸೀತೆಯನ್ನು ಹುಡುಕಲು
ಧಾವಿಸುತ್ತಿದ್ದ.ಸೀತೆಯ ಅನ್ವೇಷಣೆಯಲ್ಲಿ ನಿರತನಾಗಿದ್ದ ರಾಮ ಹುಚ್ಚನಂತೇ ಕಾಣುತ್ತಿದ್ದ.
“ಲಕ್ಷ್ಮಣ,ಸೀತಾವಿಯೋಗದ
ಈ ದುಃಖದಿಂದ ನಾನು ಖಂಡಿತವಾಗಿಯೂ ಬಹುಕಾಲ ಜೀವಿಸುವುದಿಲ್ಲ.ಈ ದುಃಖದಿಂದ ನಾನು
ಸತ್ತೇಹೋಗುತ್ತೇನೆ”ರಾಮ ದುಃಖದಿಂದ ಹೇಳಿದ.”ಸೀತೇ,ನಾನೀಗ ಪ್ರಜ್ಞಾಶೂನ್ಯನಾಗಿದ್ದೇನೆ.ನಿನ್ನ
ವಿಯೋಗದಿಂದ ಪರಿತಪಿಸುತ್ತಿದ್ದೇನೆ.ನನ್ನ ಆಸೆ-ಆಕಾಂಕ್ಷೆಗಳೆಲ್ಲಾ ಭಗ್ನವಾಗಿವೆ.ದಯವಿಟ್ಟು
ನನ್ನಿಂದ ದೂರಹೋಗಬೇಡ.ನೀನಿಲ್ಲದಿದ್ದರೆ ನಾನು ಪ್ರಾಣವನ್ನೇ ತ್ಯಜಿಸುತ್ತೇನೆ” ಕಾಣದಿರುವ
ಸೀತೆಯನ್ನು ಸಂಬೋಧಿಸಿದ.ಇದು ಸೀತೆಯನ್ನು ಕಳೆದುಕೊಂಡ ರಾಮನ ಪರಿಸ್ಥಿತಿ.ಇದರಿಂದಲೇ ಸೀತಾರಾಮರ
ಮಧುರಬಾಂಧವ್ಯ ಹೇಗಿತ್ತೆಂದು ತಿಳಿಯುತ್ತದೆ.
“ಸರ್ವೇ ಭವಂತು
ಸುಖಿನಃ”
No comments:
Post a Comment