Tuesday, 2 August 2016

ಆಚಾರ್ಯ ಸುಶ್ರುತ 
ಶಸ್ತ್ರಚಿಕಿತ್ಸೆಯ ಜನಕ(Father Of Surgery)  ಹಾಗೂ ಸುಪ್ರಸಿದ್ಧ ಸುಶ್ರುತಸಂಹಿತೆಯ ರಚನೆಕಾರ ಆಚಾರ್ಯ ಸುಶ್ರುತ.ಆತನ ಕಾಲ ಸುಮಾರು ಕ್ರಿಸ್ತಪೂರ್ವ ಆರನೇ ಶತಮಾನ.ಹುಟ್ಟಿದ್ದು ಕಾಶಿ,ವಿಶ್ವಾಮಿತ್ರ ವಂಶಜ.ಧನ್ವಂತರಿ ಈತನ ಗುರು.ಭಾರತೀಯ ಚಿಕಿತ್ಸಾಪದ್ಧತಿಯಲ್ಲಿ ಸುಶ್ರುತಸಂಹಿತೆಗೆ ವಿಶೇಷವಾದ ಸ್ಥಾನಮಾನವಿದೆ.ಸುಶ್ರುತಸಂಹಿತೆಯಲ್ಲಿ ಶಲ್ಯಚಿಕಿತ್ಸೆಗೆ ಸಂಬಂಧಿಸಿದ ಅನೇಕ ಮಾಹಿತಿಗಳಿವೆ.ಶಸ್ತ್ರಚಿಕಿತ್ಸೆಗೆ ಉಪಯೋಗವಾಗುವಂತಹ ೧೨೫ ಬಗೆಯ ಶಸ್ತ್ರಗಳ ವಿವರಗಳಿವೆ. ಶಸ್ತ್ರಚಿಕಿತ್ಸೆಗೆ ಬೇಕಾದ ಚಾಕು,ಸೂಜಿ,ಚಿಮ್ಮಟ ಮುಂತಾದ ಉಪಕರಣಗಳ ಮಾಹಿತಿಗಳಿವೆ.ಶಸ್ತ್ರಚಿಕಿತ್ಸೆಯನ್ನು ಸುಲಭಗೊಳಿಸಲು ಆಚಾರ್ಯ ಸುಶ್ರುತನೇ ಈ ಶಸ್ತ್ರಗಳನ್ನು ಕಂಡುಹಿಡಿದಿದ್ದ..!!ಅಷ್ಟೇ ಅಲ್ಲ,ಸುಮಾರು ೩೦೦ ವಿಧದ ರೋಗಗಳನ್ನು ಗುಣಪಡಿಸಲು ಸಾಧ್ಯವಾಗುವಂತಹ ಶಸ್ತ್ರಚಿಕಿತ್ಸೆಗಳ ವಿವರಗಳಿವೆ.ಎಂಟನೇ ಶತಮಾನದಲ್ಲೇ ಸುಶ್ರುತಸಂಹಿತೆ ಅರಬಿ ಭಾಷೆಗೆ "ಕಿತಾಬ್-ಇ-ಸುಶ್ರುತ್" ಎಂಬುದಾಗಿ ಅನುವಾದಗೊಂಡಿದೆ."ಕಾಸ್ಮೇಟಿಕ್" ಶಸ್ತ್ರಚಿಕಿತ್ಸೆಯಲ್ಲಿ ಆಚಾರ್ಯ ಸುಶ್ರುತ ವಿಶೇಷವಾದ ನೈಪುಣ್ಯವನ್ನು ಹೊಂದಿದ್ದ.
ಒಮ್ಮೆ ಮಧ್ಯರಾತ್ರಿಯ ಸಮಯದಲ್ಲಿ ಒಬ್ಬ ವ್ಯಕ್ತಿ ಸುಶ್ರುತನನ್ನು ಹುಡುಕಿಕೊಂಡು ಬಂದ.ಆತನ ಮೂಗು ತುಂಡಾಗಿ ರಕ್ತಸ್ರಾವವಾಗುತ್ತಿತ್ತು.ನೋವಿನಿಂದ ಕಂಬನಿ ಮಿಡಿಯುತ್ತಿದ್ದ.ಸುಶ್ರುತನಲ್ಲಿ ಚಿಕಿತ್ಸೆಗಾಗಿ ಅಂಗಲಾಚಿದ.ಸುಶ್ರುತ ಆತನಿಗೆ ಅಭಯವಚನವನ್ನಿತ್ತು ಮನೆಯೊಳಗೆ ಕರೆದೊಯ್ದ.ಶಾಂತನಾಗಿರುವಂತೇ ವ್ಯಕ್ತಿಗೆ ಸೂಚಿಸಿದ.ಚಿಕಿತ್ಸೆಯ ಕೋಣೆ ಸ್ವಚ್ಛ ಹಾಗೂ ಶಾಂತವಾಗಿತ್ತು.ಶಸ್ತ್ರಚಿಕಿತ್ಸೆಗೆ ಬೇಕಾದ ಸಲಕರಣೆಗಳಿಂದ ಕೂಡಿತ್ತು.ಸುಶ್ರುತ ವ್ಯಕ್ತಿಯ ಮೊಗವನ್ನು ಔಷಧೀಯ ರಸದಿಂದ ತೊಳೆದು,ಒಂದು ಆಸನದಲ್ಲಿ ಕೂರಿಸಿದ.ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನೋವಾಗದಿರಲು ಮದ್ಯವನ್ನು ಕುಡಿಸಿದ.ವ್ಯಕ್ತಿ ಪಾನಮತ್ತನಾದ ಬಳಿಕ,ಔಷಧದ ಎಲೆಗಳನ್ನು ತುಂಡಾದ ಮೂಗಿನ ಪ್ರದೇಶದಲ್ಲಿ ಅಂಟಿಸಿದ.ಚಾಕು ಹಾಗೂ ಚಿಮ್ಮಟದಿಂದ ಅದೇ ವ್ಯಕ್ತಿಯ ತೊಡೆಯ ಮಾಂಸವನ್ನು ತೆಗೆದು,ಕತ್ತರಿಸಿದ ಮೂಗಿನ ಭಾಗದಲ್ಲಿ ಅಂಟಿಸಿದದಕ್ಕೆ ಔಷಧಲೇಪನವನ್ನು ಮಾಡಿದ.ಅದಾದ ಬಳಿಕ ಕೆಲವು ಔಷಧಗಳನ್ನು ನೀಡಿ ನಿಯಮಿತವಾಗಿ ಅವುಗಳನ್ನು ಸೇವಿಸಬೇಕೆಂದು ನಿರ್ದೇಶಿಸಿದ.ಹಲವು ದಿನಗಳ ಬಳಿಕ ವ್ಯಕ್ತಿಯ ಮೂಗು ಸರಿಯಾಗಿತ್ತು.ಸುಶ್ರುತನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿತ್ತು!!ದೇಹದ ಸೂಕ್ಷ್ಮಾಂಗವಾಗಿರುವ ಕಣ್ಣಿನ ಶಸ್ತ್ರಚಿಕಿತ್ಸೆಯನ್ನೂ ಸಹ ಸುಶ್ರುತ ಮಾಡಿದ್ದನೆಂಬುದಕ್ಕೆ ಸುಶ್ರುತಸಂಹಿತೆಯಲ್ಲಿ ಆಧಾರವಿದೆ.
 ಶಲ್ಯಚಿಕಿತ್ಸೆಯ ಮೂಲಕ ಪ್ರಸವ ಮಾಡಿಸುವ ವಿಧಾನವೂ ಸುಶ್ರುತನಿಗೆ ತಿಳಿದಿತ್ತು.ಮುರಿದುಹೋಗಿರುವ ಮೂಳೆಗಳನ್ನು ಪುನಃ ಜೋಡಿಸುವ ಚಿಕಿತ್ಸೆಯ ಅರಿವೂ ಸುಶ್ರುತನಿಗಿತ್ತು.ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನೋವಾಗದಿರಲು ಮದ್ಯಪಾನ ಅಥವಾ ಇನ್ನಿತರ ಅರವಳಿಕೆ ಔಷಧಿಗಳನ್ನು ನೀಡಲಾಗುತ್ತಿತ್ತು.ಇವುಗಳು ಸಂಜ್ಞಾಹರಣೆಯಕಾರ್ಯವನ್ನು (Anaesthesia)  ಮಾಡುತ್ತಿದ್ದವು.
ಆದ್ದರಿಂದ ಸುಶ್ರುತನಿಗೆ ಸಂಜ್ಞಾಹರಣದ ಪಿತಾಮಹನೆಂದೂ(Father Of Anaesthesia)  ಕರೆಯಲಾಗುತ್ತದೆ.ಮಧುಮೇಹ ಹಾಗೂ ಬೊಜ್ಜನ್ನು ನಿಯಂತ್ರಿಸುವ ವಿಧಾನವೂ ಸುಶ್ರುತನಿಗೆ ತಿಳಿದಿತ್ತು.ಕೇವಲ ಶಸ್ತ್ರಚಿಕಿತ್ಸಕನಷ್ಟೇ ಅಲ್ಲ,ಸುಶ್ರುತ ಶ್ರೇಷ್ಟ ಆಚಾರ್ಯನೂ ಆಗಿದ್ದ.ತನ್ನ ಶಿಷ್ಯರಿಗೆ ಶಸ್ತ್ರಚಿಕಿತ್ಸೆ ಹೇಗೆ ಮಾಡಬೇಕು..?ಯಾವ ರೋಗಕ್ಕೆ ಯಾವ ಔಷಧಿ ನೀಡಬೇಕೆಂದು ಕಲಿಸುತ್ತಿದ್ದ.ಆರಂಭಿಕ ಶಸ್ತ್ರಚಿಕಿತ್ಸೆಯನ್ನು ಹಣ್ಣು,ತರಕಾರಿ,ಮೇಣದ ಬತ್ತಿ ಮುಂತಾದವುಗಳ ಮೇಲೆ ಪ್ರಯೋಗಿಸಿ ಕಲಿಸುತ್ತಿದ್ದ.ಶಿಷ್ಯರಿಗೆ ಮಾನವಶರೀರದ ಅಂತರ್ಭಾಗಗಳ ಅರಿವನ್ನು ಮೂಡಿಸಲು ಶವವನ್ನು ಶಸ್ತ್ರಚಿಕಿತ್ಸೆಗಾಗಿ ಬಳಸುತ್ತಿದ್ದ.

ಹಾಗಾಗಿ ಸುಶ್ರುತನಿಗೆ ಶಸ್ತ್ರಚಿಕಿತ್ಸೆಯ ಜನಕನೆಂಬ ಬಿರುದು ಅತ್ಯಂತ ಸಮಂಜಸ.ಆಧುನಿಕ ವೈದ್ಯಶಾಸ್ತ್ರ ಇನ್ನೂ ಕಣ್ಬಿಡದ ಸಂದರ್ಭದಲ್ಲಿ ಸುಶ್ರುತನ ಸಾಧನೆ ಅಪಾರ.ಆಯುರ್ವೇದ,ಮಾನವ ಶರೀರಸಂರಚನೆ,ಕಾಯಚಿಕಿತ್ಸೆ,ಬಾಲರೋಗ,ಸ್ತ್ರೀರೋಗ,ಮನೋರೋಗಗಳಿಗೆ ಸುಶ್ರುತನ ಬಳಿ ನಿಖರವಾದ ಚಿಕಿತ್ಸೆಗಳಿದ್ದವು.ಭಾರತೀಯ ವೈದ್ಯಶಾಸ್ತ್ರಕ್ಕೆ ಸುಶ್ರುತನ ಕೊಡುಗೆ ಅವಿಸ್ಮರಣೀಯ.ಆದರೆ ದುರದೃಷ್ಟ ನೋಡಿ,ಭಾರತೀಯರಾದ ನಮಗೆ ಹಿತ್ತಲಗಿಡ ಮದ್ದಲ್ಲ.ನಮ್ಮವರ ಸಾಧನೆಯ ಅರಿವು ನಮಗಿಲ್ಲ.ಇಂದಿಗೂ ವಿದೇಶಿಯರೇ ಶ್ರೇಷ್ಟ ಸಂಶೊಧಕರೆಂಬ ಪರಕೀಯ ಮನಸ್ಥಿತಿ.ಎಲ್ಲಿಯವರೆಗೆ ನಾವು ಸ್ವಾಭಿಮಾನಿಗಳಾಗುವುದಿಲ್ಲವೋ ಅಲ್ಲಿಯವರೆಗೂ ನಮ್ಮದು ಚಿಂತಾಜನಕ ಸ್ಥಿತಿ..!!ಭಾರತೀಯತೆಯ ನೆತ್ತರು ನಮ್ಮ ಶರೀರದಲ್ಲಿ ವ್ಯಾಪಿಸಲಿ.ಇದು ಶಸ್ತ್ರಚಿಕಿತ್ಸೆಯಿಂದ ಸಾಧ್ಯವಿಲ್ಲ.ಕೇವಲ ಸ್ವಾಭಿಮಾನದಿಂದ ಮಾತ್ರ ಸಾಧ್ಯ.ಪರಕೀಯ ಮನಸ್ಥಿತಿಯವರಿಗೆ ಯಾವ ವೈದ್ಯ ಶಾಸ್ತ್ರದಲ್ಲೂ ಚಿಕಿತ್ಸೆಯಿಲ್ಲ.ಅದವರ ದೌರ್ಭಾಗ್ಯ.

"ಸರ್ವೇ ಭವಂತು ಸುಖಿನಃ"




No comments:

Post a Comment